ಕಲಬುರಗಿ: ಜಿಲ್ಲೆಯಲ್ಲಿ ಕೆಲ ಒಂದು ವಾರದಿಂದ ಹೊಸ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಾಣುತ್ತಿದ್ದು, ಇದರ ನಡುವೆಯೇ ಸೋಂಕು ಪತ್ತೆ ಪರೀಕ್ಷೆ ಪ್ರಮಾಣವನ್ನೂ ಕಡಿತಗೊಳಿಸಲಾಗಿದೆ. ಈ ಹಿಂದೆ ಆರು ಸಾವಿರ ಪರೀಕ್ಷೆಗಳು ನಡೆಯುತ್ತಿದ್ದರೆ, ಈಗ ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಅಂದರೆ ಮೂರು ಸಾವಿರ ಪರೀಕ್ಷೆಗಳು ಮಾತ್ರ ಮಾಡಲಾಗುತ್ತಿದೆ. ಕಳೆದ ವರ್ಷ ಕೊರೊನಾ ಮೊದಲ ಅಲೆಯಲ್ಲಿ ದೇಶದಲ್ಲೇ ಮೊದಲ ಸಾವು ಕಂಡಿದ್ದ ಜಿಲ್ಲೆಯು ತಲ್ಲಣಿಸಿ ಹೋಗಿತ್ತು.
ಈ ವರ್ಷ ಮಾರ್ಚ್‌ನಲ್ಲಿ ಎರಡನೇ ಅಲೆಯಲ್ಲೂ ಜಿಲ್ಲೆ ನಲುಗಿ ಹೋಗಿದೆ. ಮೊದಲ ಅಲೆಗಿಂತ ಎರಡನೇ ಅಲೆ ಜಿಲ್ಲೆಗೆ ಅತ್ಯಂತ ಭೀಕರವಾಗಿ ಪರಿಣಮಿಸಿದೆ. ಕೆಲವೇ ಕೆಲ ದಿನಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ದುಪ್ಪಟ್ಟು ಆಗಿದೆ. ಮೇ ತಿಂಗಳ ಆರಂಭದಲ್ಲೇ 100 ಜನರಿಗೆ ಕೊರೊನಾ ಪರೀಕ್ಷೆ ಮಾಡಿದರೆ ಸರಾಸರಿ 30 ಜನರಿಗೆ ಸೋಂಕು ದೃಢಪಟ್ಟಿತ್ತು.
ಪರೀಕ್ಷೆ-ಪಾಸಿಟಿವ್ ಹೆಚ್ಚಿತ್ತೂ: ಜಿಲ್ಲೆಯಲ್ಲಿ ಜಿಮ್ಸ್ ಆಸ್ಪತ್ರೆ ಮತ್ತು ಇಎಸ್‌ಐ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೊರೊನಾ ಸೋಂಕು ಪತ್ತೆ ಪ್ರಯೋಗಾಲಯಗಳು ಇವೆ. ಅಲ್ಲದೇ, ಬಸವೇಶ್ವರ ಆಸ್ಪತ್ರೆ, ಕೆಬಿಎನ್ ಆಸ್ಪತ್ರೆ ಮತ್ತು ಯುನಿಟೈಡ್ ಆಸ್ಪತ್ರೆ ಸೇರಿ ಆರು ಖಾಸಗಿ ಪ್ರಯೋಗಾಲಯಗಳು ಇವೆ. ಕೇಂದ್ರೀಯ ವಿವಿಯ ಲ್ಯಾಬ್‌ನಲ್ಲಿ ಹೊರ ಜಿಲ್ಲೆಗಳ ಕೊರೊನಾ ಮಾದರಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಉಳಿದಂತೆ ಎಲ್ಲ ಪ್ರಯೋಗಾಲಯಗಳಲ್ಲಿ ಜಿಲ್ಲೆಯ ಮಾದರಿಗಳ ಪರೀಕ್ಷೆ ಮಾಡಬಹುದಾಗಿದೆ. ಮಾರ್ಚ್‌ನಲ್ಲಿ ಅಲೆ ಆರಂಭದ ದಿನದಿಂದಲೂ ನಿತ್ಯ ಆರು ಸಾವಿರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿತ್ತು.
ಅಂತೆಯೇ ಆರಂಭದಲ್ಲಿ 500 ರಿಂದ ಕಳೆದ ಎರಡು ವಾರದವರೆಗೂ 1,500ಕ್ಕೂ ಹೆಚ್ಚು ಪಾಟಿಸಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ, ಈಗ ಕೊರೊನಾ ಪತ್ತೆ ಪರೀಕ್ಷೆಗಳನ್ನು ಸರಾಸರಿ ಮೂರು ಸಾವಿರಕ್ಕೆ ಇಳಿಸಲಾಗಿದೆ. ಕೆಲವೊಮ್ಮೆ ಕೇವಲ 1,700, 1,800 ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ಪತ್ತೆ ಪರೀಕ್ಷೆಗಳ ಸಂಖ್ಯೆಯೇ ಕಡಿಮೆ ಆಗಿದ್ದರಿಂದ ಸಹಜವಾಗಿ ಹೊಸ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿಯುತ್ತಿದೆ. ಅಲ್ಲದೇ, ಏಕಾಏಕಿ ದಿನಕ್ಕೆ ನೂರಾರು ಜನ ಸೋಂಕಿತರನ್ನು ಗುಣಮುಖರಾಗಿದ್ದಾರೆ ಎಂದು ತೋರಿಸಲಾಗಿದೆ.
ಹೀಗಾಗಿ ಮೇ ಮೊದಲು ಮತ್ತು ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ ಶೇ.30 ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಈಗ ಶೇ.10ಕ್ಕಿಂತ ಕಡಿಮೆ ಇದೆ. ಇದು ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿದೆ ಎಂದು ಬಿಂಬಿಸುವುದಕ್ಕೆ ಪರೀಕ್ಷೆಗಳನ್ನೇ ಕಡಿತ ಮಾಡಲಾಗುತ್ತಿದೆಯೇ ಎನ್ನುವ ಅನುಮಾನಕ್ಕೂ ಕಾರಣವಾಗಿದೆ.
ಅಧಿಕಾರಿಗಳು ಹೇಳುವುದೇನು?: ಈ ಮೊದಲು ಕೊರೊನಾ ಲಕ್ಷಣಗಳ ಹೊಂದಿದವರೊಂದಿಗೆ ಸಾಮೂಹಿಕವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಸಾರ್ವಜನಿಕವಾಗಿ ಓಡಾಡುವವರು, ತರಕಾರಿ ಮಾರಾಟಗಾರರು, ಕಾಲೇಜುಗಳ ವಿದ್ಯಾರ್ಥಿಗಳು, ಹೊರ ಊರುಗಳಿಂದ ಬಂದವರ ಗಂಟಲು ಮತ್ತು ಮೂಗಿನ ದ್ರಾವಣ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುತ್ತಿದ್ದೆವು.
ದಿನವೂ ಸರಾಸರಿ ಐದಾರು ಸಾವಿರ ಮಾದರಿ ಸಂಗ್ರಹವಾಗುತ್ತಿದ್ದವು. ಈಗ ಲಾಕ್‌ಡೌನ್ ಕಾರಣ ನಿರ್ದಿಷ್ಟ ಗುರಿ ಮೇಲೆ ಮೂರು ಸಾವಿರದಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್. ಈಗ ಎಲ್ಲರಿಗೂ ಕೊರೊನಾ ಪತ್ತೆ ಪರೀಕ್ಷೆ ಮಾಡಲಾಗುತ್ತಿಲ್ಲ.
ರೋಗ ಲಕ್ಷಣ ಇರುವವರು, ಸೋಂಕಿತರ ಪ್ರಾಥಮಿಕ ಸಂಪರ್ಕಿತರು, ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮನೆ ಸಮೀಕ್ಷೆ ಮಾಡುತ್ತಿದ್ದು, ಅಲ್ಲಿಂದ ಯಾರಾದರೂ ಶಂಕಿತರು ಕಂಡು ಬಂದರೆ, ಮಾದರಿ ಸಂಗ್ರಹಿಸಿ ಕೊರೊನಾ ಪತ್ತೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ಡಿಎಚ್‌ಒ ಹೇಳಿದರು.