Advertisement

ಕೋವಿಡ್‌ ಸಾವಿನ ಸಂಖ್ಯೆ ಮುಚ್ಚಿಟ್ಟ ಪ್ರಧಾನಿ

10:07 AM May 08, 2022 | Team Udayavani |

ಬೆಳಗಾವಿ: ಕಳೆದ ವರ್ಷಾಂತ್ಯದವರೆಗೆ ದೇಶದಲ್ಲಿ 47 ಲಕ್ಷ ಜನರು ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಆದರೆ ಪ್ರಧಾನಿ ಮೋದಿ, ಸಚಿವರು, ಆರೋಗ್ಯ ಇಲಾಖೆಯವರು ಕೇವಲ ಐದು ಲಕ್ಷ ಜನ ಸತ್ತಿದ್ದಾರೆ ಎಂಬುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಲಕ್ಷ ಜನ ಕರ್ನಾಟಕದಲ್ಲಿ, 50 ಲಕ್ಷ ಜನ ದೇಶದಲ್ಲಿ ಸತ್ತಿರುವುದಾಗಿ ವಿಧಾನಸಭೆಯಲ್ಲಿ ಹೇಳಿದ್ದೆ. ಆಗಿರುವ ತಪ್ಪು ಮುಚ್ಚಿಕೊಳ್ಳಲು ಪ್ರಧಾನಿ, ಸಚಿವರು, ಆರೋಗ್ಯ ಇಲಾಖೆ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ಪ್ರಾಣ ಕಳೆದುಕೊಂಡವರ ಲೆಕ್ಕ ಮಾಡಿಲ್ಲ. ಕೊರೊನಾದಿಂದ ಅನೇಕರು ಸತ್ತರೂ ಸರ್ಕಾರ ಲೆಕ್ಕ ಇಟ್ಟಿಲ್ಲ. ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿಯ ಕೋವಿಡ್‌ ಸಾವಿನ ಆಡಿಟ್‌ ಆಗಬೇಕು. ಸತ್ತವರ ಕುಟುಂಬಸ್ಥರಿಗೆ ನಾಲ್ಕು ಲಕ್ಷ ರೂ. ಪರಿಹಾರ ನೀಡಬೇಕು. ತಪ್ಪು ಮಾಹಿತಿ ಕೊಟ್ಟಿದ್ದಕ್ಕೆ ಪ್ರಧಾನಿ ಮೋದಿ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸತ್ಯವಾಗಿದೆ. ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸಚಿವರಾಗಿ ಮುಂದುವರಿಯಲು ಅವರಿಗೆ ನೈತಿಕ ಹಕ್ಕಿಲ್ಲ. ಅವರ ಪಕ್ಷದ ಶಾಸಕರೇ ಕೇಳಿದ್ದು, ಸಚಿವರು ಅಕ್ರಮ ನಡೆದಿದೆ ಎಂದು ಪತ್ರ ಬರೆದರೂ ಯಾವುದೇ ತಪ್ಪು ಮಾಡಿಲ್ಲ ಎಂದು ಸತ್ಯಹರಿಶ್ಚಂದ್ರನಂತೆ ಮಾತನಾಡಿದರೆ ಹೇಗೆ? ಸಚಿವ ಅಶ್ವತ್ಥನಾರಾಯಣ ಹಾಗೂ ಆರಗ ಜ್ಞಾನೇಂದ್ರ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬೇಲಿಯೇ ಎದ್ದು ಹೊಲ ಮೇಯಲು ಶುರುವಾಗಿದೆ. ಪೊಲೀಸರೇ ಕಳ್ಳತನ ಮಾಡುವಾಗ ಯಾರು ರಕ್ಷಣೆ ಮಾಡುತ್ತಾರೆ. ಪಿಎಸ್‌ಐ ಅಕ್ರಮ ಪರೀಕ್ಷೆ ಕೇಸ್‌ ತನಿಖೆಯನ್ನು ಪೊಲೀಸರೇ ಮಾಡಲಿ. ಆದರೆ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಅಶ್ವತ್ಥನಾರಾಯಣ ಸಂಬಂಧಿಕ ಐದನೇ ರ್‍ಯಾಂಕ್‌ ಪಡೆದಿದ್ದಾನೆ. ಪೊಲೀಸರು ಅವನಿಗೆ ನೋಟಿಸ್‌ ಕೊಟ್ಟು ವಿಚಾರಣೆ ಮಾಡಿ ವಾಪಸ್‌ ಕಳುಹಿಸಿದ್ದಾರೆ. ಇನ್ನುಳಿದವರನ್ನು ಜೈಲಿಗೆ ಹಾಕಿದ್ದಾರೆ. ಹೀಗಾಗಿ ಸಿಐಡಿ ಮೇಲೆ ಅಶ್ವತ್ಥನಾರಾಯಣ ಪ್ರಭಾವ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಸಂಸದ ಡಿ.ಕೆ.ಸುರೇಶ ಮೇಲೆ ಲಂಚದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದರ ಬಗ್ಗೆ ನನಗೆ ಗೊತ್ತಿಲ್ಲ. ನೀವು ಸುರೇಶ ಅವರನ್ನೇ ಕೇಳಬೇಕು. ಯಾರೇ ತಪ್ಪು ಮಾಡಿದರೂ ತಪ್ಪು ತಪ್ಪೇ. ತಪ್ಪು ಮಾಡಿದರೆ ಶಿಕ್ಷೆ ಆಗಬೇಕು. ಸತ್ಯ-ಅಸತ್ಯ ಗೊತ್ತಾಗಬೇಕಾದರೆ ತನಿಖೆ ಮಾಡಲಿ ಎಂದು ಆಗ್ರಹಿಸಿದರು.

2023ರಲ್ಲಿ ಭ್ರಷ್ಟ, 40 ಪರ್ಸೆಂಟೇಜ್‌ ಕಮಿಷನ್‌ ಸರ್ಕಾರದ ವಿರುದ್ಧ ಜನರ ಬಳಿ ಹೋಗುತ್ತೇವೆ. ನಾವು ಮಾಡಿರುವ ಕೆಲಸ ಬಿಟ್ಟು ಇವರು ಏನೂ ಮಾಡಿಲ್ಲ. ಇನ್ನು ಮಹದಾಯಿಗಾಗಿ ಪಾದಯಾತ್ರೆ ಬಗ್ಗೆ ಯಾವ ರೀತಿ ಮಾಡಬೇಕೆಂದು ಚರ್ಚಿಸಿದ್ದೇವೆ ಎಂದ ಅವರು, ಮೋದಿ ಅಧಿಕಾರದಲ್ಲಿ ಇರುವವರೆಗೂ ಗ್ಯಾಸ್‌ ಬಿಟ್ಟು ಜನ ಒಲೆಗೆ ಬರುತ್ತಾರೆ ಎಂದು ಬೆಲೆ ಏರಿಕೆ ಬಗ್ಗೆ ಕೇಂದ್ರದ ವಿರುದ್ಧ ಕಿಡಿಕಾರಿದರು.

ಎಚ್ಡಿಕೆ ಹೆಸರಿಗೆ ಸಿಡಿಮಿಡಿ:

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳುತ್ತಿದ್ದಂತೆ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಸುಳ್ಳು ಹೇಳುವವರಿಗೆ ಉತ್ತರ ಕೊಡಲ್ಲ. ಕುಮಾರಸ್ವಾಮಿ ಅವರನ್ನು ಬಿಟ್ಟಾಕಿ ಬೇರೆ ಪ್ರಶ್ನೆ ಕೇಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next