ವರದಿ: ಶಶಿಧರ್ ಬುದ್ನಿ
ಧಾರವಾಡ: ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರ ಗಡಿ ದಾಟುತ್ತಿದ್ದ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದರೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಸಾವಿರ ಗಡಿ ದಾಟುತ್ತಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆ ಏರುಮುಖ ಮಾಡಿದ್ದು, ಸಾವಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಧಾರವಾಡ ಜಿಲ್ಲೆಗೆ 2ನೇ ಸ್ಥಾನ ಸಿಕ್ಕಿದೆ.
ಮೇ 30ರಂದು ಒಂದೇ ದಿನಕ್ಕೆ 19 ಸೋಂಕಿತರು ಮೃತಪಟ್ಟ ಸಂಖ್ಯೆ ಲಭಿಸಿದ್ದು, ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿನ ನಂತರದ ಸ್ಥಾನ ಜಿಲ್ಲೆಗೆ ಲಭಿಸಿದೆ. ಅದರ ಹಿಂದಿನ ದಿನವೂ (ಮೇ 29) ರಂದು 19 ಜನ ಸೋಂಕಿತರು ಮೃತಪಟ್ಟು, ರಾಜ್ಯಕ್ಕೆ 3ನೇ ಸ್ಥಾನ ಪಡೆದಿತ್ತು. (ಮೇ 31) ಮತ್ತೆ 10 ಜನ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಿಂದ 10ರೊಳಗಿದ್ದ ಸಾವಿನ ಸಂಖ್ಯೆ ಅದರ ಗಡಿ ದಾಟಿದೆ. ಇದಲ್ಲದೇ ಐಸಿಯು ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆಯೂ ಏರುತ್ತಲೇ ಇದೆ.
ಸದ್ಯ 500ಕ್ಕೂ ಹೆಚ್ಚು ಸೋಂಕಿತರು ಐಸಿಯು ಬೆಡ್ ನಲ್ಲಿ ಚಿಕಿತ್ಸೆ ಪಡೆದಿದ್ದರೆ, ವೆಂಟಿಲೇಟರ್‌ಗಳೆಲ್ಲವೂ ಕಾರ್ಯ ನಿರ್ವಹಣೆಯಲ್ಲಿವೆ. ಏರುತ್ತಲಿದೆ ಸಾವಿನ ಸಂಖ್ಯೆ: ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಕಳೆದ ಏಪ್ರಿಲ್‌ನಿಂದ ಈ ವರ್ಷದ ಮೇ 31ರವರೆಗೆ ಕೋವಿಡ್‌ನಿಂದ ಮರಣ ಹೊಂದಿದವರ ಸಂಖ್ಯೆ 969 ಇದ್ದರೆ ಕೋವಿಡ್ ಅಲ್ಲದ ಅನ್ಯ ಕಾರಣದಿಂದ ಮರಣ ಹೊಂದಿದ್ದು ಕೇವಲ ಒಬ್ಬರಷ್ಟೇ. ಈ ಪೈಕಿ 2021ರ ಏ. 1ರಿಂದ ಮೇ 31ರವರೆಗೆ ಕೋವಿಡ್‌ನಿಂದ ಸತ್ತವರು 344. ಏಪ್ರಿಲ್ ತಿಂಗಳಲ್ಲಿ 77 ಜನ ಸೋಂಕಿತರು ಮೃತಪಟ್ಟಿದ್ದರೆ ಕೇವಲ ಮೇ ತಿಂಗಳೊಂದರಲ್ಲಿಯೇ ಸತ್ತವರು 267.
ಈ ಅಂಕಿ-ಅಂಶ ಅವಲೋಕಿಸಿದಾಗ ಕಳೆದ ವರ್ಷಕ್ಕಿಂತ ಈ ವರ್ಷ ಕೋವಿಡ್ ಹೊಡೆತಕ್ಕೆ ಬಲಿಯಾದವರ ಸಂಖ್ಯೆ ಏರುಮುಖ ಮಾಡಿದೆ. ಬರೀ ಎರಡು ತಿಂಗಳಲ್ಲಿಯೇ 344 ಜನರು ಕೋವಿಡ್‌ಗೆ ಬಲಿಯಾಗಿದ್ದು, ಕೋವಿಡ್ ಕರಾಳತೆಗೆ ಸಾಕ್ಷಿಯಾಗಿದೆ.
ಸಾವಿಗೆ ಕಾರಣವೇನು?: ಕೋವಿಡ್ ಗುಣಲಕ್ಷಣ ವಿದ್ದರೂ ನಿರ್ಲಕ್ಷé ಮಾಡಿದ ಪರಿಣಾಮ ಸಾವಿನ ಸಂಖ್ಯೆ ಏರಲು ಕಾರಣವೆನ್ನುತ್ತಾರೆ ತಜ್ಞ ವೈದ್ಯರು. ಸೌಮ್ಯ ಗುಣ ಲಕ್ಷಣಗಳು ಕಂಡುಬಂದಾಗಲೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳದೇ ಮನೆಯಲ್ಲೇ ಉಳಿದು, ಕೊನೆಯ ಕ್ಷಣದಲ್ಲಿ ಆಸ್ಪತ್ರೆ ಬಾಗಿಲು ತಟ್ಟುವುದು, ಕೋವಿಡ್ ದೃಢಪಟ್ಟ ಬಳಿಕವೂ ಹೋಮ್ ಐಸೋಲೇಷನ್ ಗೆ ಅಷ್ಟೇ ಒಳಗಾಗಿದ್ದಲ್ಲದೇ ಕೋವಿಡ್ ಕಾಳಜಿ ಕೇಂದ್ರಕ್ಕೆ ಹೋಗಲು ಹಿಂದೇಟು ಹಾಕುವುದು, ಕೋವಿಡ್‌ನ 2ನೇ ಅಲೆ ಆರಂಭಕ್ಕೆ ನಿಗದಿತ ಸಮಯಕ್ಕೆ ಆಕ್ಸಿಜನ್ ಬೆಡ್-ವೆಂಟಿಲೇಟರ್ ಕೊರತೆ ಹಾಗೂ ಸೂಕ್ತ ಚಿಕಿತ್ಸೆ ಅಲಭ್ಯತೆಯಿಂದ ಸಾವಿನ ಸಂಖ್ಯೆ ಏರಿಕೆಗೆ ಕಾರಣವಾಗಿದೆ. ಮಧುಮೇಹ, ರಕ್ತದೊತ್ತಡ ಸೇರಿದಂತೆ ಇನ್ನಿತರೆ ಕಾಯಿಲೆಗಳ ಉಲ್ಬಣದಿಂದಲೂ ಕೋವಿಡ್ ಸೋಂಕಿತರು ಬಲಿಯಾಗಿದ್ದಾರೆ ಅಂದರೆ ತಪ್ಪಾಗಲಾರದು.