Advertisement

ಕೋವಿಡ್ ವಾರಿಯರ್ಸ್‌ ವಿವರ ಸಂಗ್ರಹ

07:50 PM Nov 03, 2020 | Suhan S |

ಶಿವಮೊಗ್ಗ: ಕೋವಿಡ್ ಸೋಂಕು ನಿಯಂತ್ರಣ ಔಷಧ ತಯಾರಿಕೆಯ ಸಂಶೋಧನೆಗಳು ವಿಶ್ವದೆಲ್ಲೆಡೆ ನಡೆಯುತ್ತಿದ್ದು, ನಿಯಮಾನುಸಾರ ಪ್ರಯೋಗಗಳು ನಡೆಯುತ್ತಿವೆ. ಲಸಿಕೆಯು ಶೀಘ್ರದಲ್ಲಿ ಜನಸೇವೆಗೆ ಲಭ್ಯವಾಗುವ ನಿರೀಕ್ಷೆ ಇದ್ದು, ಲಸಿಕೆಯನ್ನು ಮೊದಲ ಆದ್ಯತೆಯಾಗಿ ಸೋಂಕು ನಿಯಂತ್ರಣದಲ್ಲಿ ಕಾರ್ಯಪ್ರವೃತ್ತರಾಗಿರುವವರಿಗೆ ವಿತರಿಸಲು ಅರ್ಹರಿರುವವರ ವಿವರವಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಹೇಳಿದರು.

Advertisement

ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಕೋವಿಡ್ ಸೋಂಕು ನಿಯಂತ್ರಣದ ಕುರಿತು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ವಿವರಗಳನ್ನು ಸಂಗ್ರಹಿಸಲಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯವರು ತಮ್ಮಲ್ಲಿರುವ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳ ವಿವರಗಳನ್ನು ಕೂಡಲೇ ಆರೋಗ್ಯ ಇಲಾಖೆಗೆ ತಲುಪಿಸಬೇಕು. ಇವರೊಂದಿಗೆ ಆಯುಷ್‌, ಆಯುರ್ವೇದಿಕ್‌, ಡೆಂಟಲ್‌ ಸಂಸ್ಥೆಗಳವರೂ ಕೂಡ ಸಂಬಂ ಧಿತ ಆರೋಗ್ಯ ಇಲಾಖೆಯವರಿಗೆ ಮಾಹಿತಿ ತಲುಪಿಸುವಂತೆ ಸೂಚಿಸಿದರು.

ಸರ್ಕಾರವು ಜನರ ಆರೋಗ್ಯ, ಹಿತ ಮತ್ತು ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾದ ಯೋಜನೆಯೊಂದನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದು, ಅರ್ಹರೆಲ್ಲರೂ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಇವರೊಂದಿಗೆ ಕೋವಿಡ್ ಸೋಂಕಿನ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರದ ಸಿಬ್ಬಂದಿ , ಆಶಾ, ಅಂಗನವಾಡಿ ಕಾರ್ಯಕರ್ತರೂ ಸಹ ಲಸಿಕೆ ಪಡೆಯಲು ಅರ್ಹರಿದ್ದು, ಅವರೂ ತಮ್ಮ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದ ಅವರು ಉಚಿತವಾಗಿ ದೊರೆಯಲಿರುವ ಈ ಸೌಲಭ್ಯವನ್ನು ಅರ್ಹರೆಲ್ಲರೂ ನಿರ್ಲಕ್ಷಿಸದೆ ಪಡೆಯಬೇಕು ಎಂದರು.

ಈ ಕಾರ್ಯಕ್ಕಾಗಿ ನಿಯೋಜಿತ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನ ಹರಿಸಿ, ಮಾಹಿತಿ ಪಡೆದುಕೊಳ್ಳಬೇಕು ಎಂದ ಅವರು, ಸೋಂಕು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ನಡೆಸುತ್ತಿರುವ ಪರೀಕ್ಷೆಗಳು ನಿರಂತರವಾಗಿ ನಡೆಯುವಂತೆ ಹಾಗೂ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚಿಸಿದರು.

ಈ ಸೋಂಕಿನ ನಿಯಂತ್ರಣ ಸಂಬಂಧ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಅನುದಾನ ಬಳಕೆಯ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆಯೂ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಜಿ.ಅನುರಾಧಾ, ಜಿಪಂ ಉಪ ಕಾರ್ಯದರ್ಶಿ ಶ್ರೀಧರ್‌, ಆರ್‌.ಸಿ.ಎಚ್‌. ಅಧಿಕಾರಿ ಡಾ| ನಾಗರಾಜ ನಾಯ್ಕ, ಡಾ| ಶಂಕರಪ್ಪ, ಡಾ| ಗುಡದಪ್ಪ ಕುಸಬಿ, ಡಾ| ಮಂಜುನಾಥ ನಾಗಲೀಕರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next