ಕಳೆದ ಐದಾರು ತಿಂಗಳುಗಳ ಹಿಂದೆ ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ನಿತ್ಯ ಹತ್ತು ಸಾವಿರ ಗಡಿ ದಾಟಿದ್ದ ವೇಳೆ ಆತಂಕದ ಕಾರ್ಮೋಡಆವರಿಸಿತ್ತು. ಬಳಿಕ ನಿತ್ಯ ಪ್ರಕರಣಗಳು ಕಡಿಮೆಯಾಗ ತೊಡಗಿದಂತೆ ಎಂದಿನಂತೆ ವ್ಯಾಪಾರ, ವಹಿವಾಟು, ಸಂಚಾರ, ಶಾಲಾ, ಕಾಲೇಜು,ಚಿತ್ರಮಂದಿರ, ಮಾಲ್‌ಗಳು ಮೊದಲಿನಂತೆ ಆರಂಬಿಸಿದವು. ಇದೀಗ ಮತ್ತೆ ದೇಶಾದ್ಯಂತ ಎರಡನೇ ಅಲೆ ಎದ್ದಿದ್ದು, ಮತ್ತೆ ಲಾಕ್‌ಡೌನ್, ಸೆಮಿ ಲಾಕ್ ಡೌನ್ ಮುನ್ನೆಲೆಗೆ ಬಂದಿದೆ.
ಉದ್ಯೋಗ ಕಳೆದುಕೊಂಡರು: ಮೊದಲ ಕೋವಿಡ್ ಅಲೆಗೆ ಲಾಕ್‌ಡೌನ್ ಮಾಡಿದ್ದರಿಂದ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗಲಿಲ್ಲ. ಆದರೆ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡರು. ರೈತರು ಬೆಳೆಗಳಿಗೆ ಉತ್ತಮ ಬೆಲೆ ಸಿಗದೆ ನಷ್ಟ ಅನುಭವಿಸಿದರು. ಕಾರ್ಮಿಕರು ಕೆಲಸವಿಲ್ಲದೆ ಹಸಿವಿನಿಂದ ನರಳುವಂತಾಗಿತ್ತು.
ಸದ್ಯ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಇಳಿದಿದೆ. ಮತ್ತೆ ಆರ್ಥಿಕ ನಿರ್ಬಂಧದಿಂದ ಮತ್ತಷ್ಟು ಜನರ ಸ್ಥಿತಿಹೀನಾಯವಾಗಲಿದೆ. ಈಗಾಗಲೇ ಎಲ್ಲ ವಸ್ತುಗಳ ಬೆಲೆಏರಿಕೆಯಿಂದ ತತ್ತರಿಸಿರುವ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಕೋವಿಡ್ ದಂತಹ ಸಾಂಕ್ರಾಮಿಕ ಪಿಡುಗು ಜನತೆಗೆ ಹರಡದಂತೆ ತಡೆಯಬೇಕಾದರೆ ಮೊದಲು ಸೋಂಕಿನ ತೀವ್ರತೆಯನ್ನು ಜನತೆಗೆ ಅರ್ಥ ಮಾಡಿಸಬೇಕು. ಜನರಲ್ಲಿ ಸೋಂಕಿನ ತೀವ್ರತೆ ಬಗ್ಗೆ ಜಾಗೃತಿ ಬರದಿದ್ದರೆ ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಸಾಲದು. ಈಗಾಗಲೇ ಮೊದಲ ಲಾಕ್‌ಡೌನ್‌ನಿಂದಾಗಿ ಎಲ್ಲಾ ಕ್ಷೇತ್ರಗಳು ನೆಲಕಚ್ಚಿ, ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುತ್ತಿವೆ. ಮತ್ತೆ ಲಾಕ್‌ಡೌನ್ ಮಾಡುವುದರಿಂದ ಎಲ್ಲಾ ವರ್ಗದ ಜನತೆಗೆ ಹಾಗೂ ಎಲ್ಲಾ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರುವುದು ನಿಶ್ಚಿತ. ಸದ್ಯಕ್ಕೆ ಮತ್ತೆ ಲಾಕ್‌ಡೌನ್, ಸೆಮಿಲಾಕ್‌ಡೌನ್ ಮುನ್ನೆಲೆಗೆ ಬಂದಿದೆ.
ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗೆ ನಿರ್ಬಂಧ ಹೇರದೆ ಕೋವಿಡ್ ನಿಯಂತ್ರಿಸುವುದು ಹೇಗೆ? ಈ ಕುರಿತು ವಿವಿಧ ಪ್ರಾದೇಶಿಕ ವಲಯಗಳ(ಬ್ಯಾಂಕ್ ಉದ್ಯೋಗಿಗಳು, ಉಪನ್ಯಾಸಕರು, ಸಾಮಾನ್ಯ ಉದೋಗಿ, ರೈತರು,ಕಾರ್ಮಿಕರು, ಕೂಲಿ ಕಾರ್ಮಿಕರು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದವರು,ಸಾಮಾನ್ಯ ಜನರು, ಕೈಗಾರಿಕೆಗಳ ಪ್ರಮುಖರು, ಸಣ್ಣ ವರ್ತಕರು) ಲೋಕಲ್‌ತಜ್ಞರು ಏನು ಹೇಳುತ್ತಾರೆ, ಸರ್ಕಾರಕ್ಕೆ ನೀಡುವ ಸಲಹೆ ಏನು ಇತ್ಯಾದಿ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಮದ್ದಲ್ಲ :
ಕೋವಿಡ್ ಹೆಚ್ಚುತ್ತಿದೆ. ಅದಕ್ಕೆ ಅದಕ್ಕೆ ಲಾಕ್‌ಡೌನ್ ಮಾಡುವುದೇಮದ್ದಲ್ಲ, ಜನರನ್ನು ಜಾಗೃತಿ ಮಾಡಬೇಕು ಅದಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಸರ್ಕಾರ ಲಾಕ್‌ಡೌನ್, ಸೆಮಿ ಲಾಕ್‌ಡೌನ್ ಮಾಡಬಾರದು, ಇದರಿಂದ ನಮ್ಮ ಆರ್ಥಿಕ ಚಟುವಟಿಕೆ ನೆಲ ಕಚ್ಚುತ್ತದೆ. ಕಳೆದವರ್ಷ ಆದ ಲಾಕ್ ಡೌನ್ ನಿಂದ ನಮ್ಮ ಆರ್ಥಿಕ ಚಟುವಟಿಕೆ ಹತ್ತು ವರ್ಷ ಹಿಂದಕ್ಕೆ ಹೋಗಿದೆ. ಮತ್ತೆ ಲಾಕ್ ಡೌನ್ ಆದರೆ ವ್ಯಾಪಾರ ವಹಿವಾಟಿನಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ.
-ಅಮರನಾಥ ಶೆಟ್ಟಿ. ಬಿಸ್ನೆಸ್‌ಮೆನ್, ತುಮಕೂರು.
ಇಂದು ಕೋವಿಡ್ ಪ್ರಕರಣ ಹೆಚ್ಚುತ್ತಿವೆ ಜನ ಯಾವುದೇ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದು ಕೊಳ್ಳದ್ದೇ ಇದ್ದಾರೆ, ಜನ ಕೋವಿಡ್ ಮರೆತು ಬಿಟ್ಟಿದ್ದಾರೆ. ಎಲ್ಲಾ ಕಡೆ ಜನ, ಜಾತ್ರೆ, ಸಂತೆ, ಸಿನಿಮಾ ಮಂದಿರ, ಮಾರುಕಟ್ಟೆ ಹೀಗೆ ಎಲ್ಲಾ ಕಡೆ ಮಾಸ್ಕ್
ಹಾಕದೇ ಓಡಾಡುತ್ತಿರುತ್ತಾರೆ ಇದನ್ನು ನಿಯಂತ್ರಿಸಿ ಕಡ್ಡಾಯ ಮಾಸ್ಕ್ ಹಾಕುವಂತೆ ಮಾಡಲಿ ಸರ್ಕಾರ, ಇದು ಬಿಟ್ಟು ಲಾಕ್‌ಡೌನ್ ಮಾಡಿದರೆ ಕೈಗಾರಿಕಾ ಕ್ಷೇತ್ರ ಕ್ಕೆ ತುಂಬಾತೊಂದರೆಯಾಗಲಿದೆ ಅದರಲ್ಲಿಯೂ ಸಣ್ಣ ಕೈಗಾರಿಕೆಗಳಿಗೆಇನ್ನೂ ತೊಂದರೆ ಉಂಟಾಗಲಿದೆ. ಆರ್ಥಿಕ ಚಟುವಟಿಕೆಗೆ ಹೆಚ್ಚು ಗಮನ ಕೊಡಲಿ.
- ಸದಾಶಿವ ಆರ್.ಅಮಿನ್, ನಿರ್ದೇಶಕ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ನಿಯಮಗಳು ಕಟ್ಟುನಿಟ್ಟಾಗಿರಲಿ :
ಕೋವಿಡ್ ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್, ಸೆಮಿ ಲಾಕ್‌ಡೌನ್ ಪರಿಹಾರವಲ್ಲ. ಈಗಾಗಲೇ ಕೋವಿಡ್ ಹೊಡೆತದಿಂದ ತತ್ತರಿಸಿರುವ ವ್ಯಾಪಾರಿಗಳಿಗೆ, ವರ್ತಕರಿಗೆ ಮತ್ತೆ ಲಾಕ್‌ಡೌನ್ ಆದರೆ ಇನ್ನಷ್ಟು ಸಮಸ್ಯೆಯಾಗುತ್ತದೆ. ಈಗಿನ ವ್ಯವಸ್ಥೆಯಲ್ಲಿ ಕೆಲವು ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಕೋವಿಡ್ ಹರಡುವುದನ್ನು ತಡೆಗಟ್ಟಬಹುದು.
●ಬ್ರಿಜೇಶ್ ಒಲಿವೆರಾ, ವರ್ತಕ, ಚಾಮರಾಜನಗರ
ಲಾಕ್‌ಡೌನ್ ಹೊರತಾಗಿ ಕೊರೊನಾವನ್ನು ತಡೆಯಬೇಕಾದರೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಲಸಿಕೆ ನೀಡುವ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಬೇಕು.
●ಡಾ.ನಾಗೇಶ್, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಾಗೇಶ್ ಆಸ್ಪತ್ರೆಯ ಮುಖ್ಯಸ್ಥ
ದೇಶದಲ್ಲಿ ಈಗ ಕೋವಿಡ್ 2ನೇ ಆಲೆ ಪ್ರಾರಂಭವಾಗಿದೆ. ಅದನ್ನು ನಿಯಂತ್ರಿಸುವುದು ತುರ್ತು ಅಗತ್ಯ. ಸರ್ಕಾರ ಎಷ್ಟೇಕ್ರಮಗಳನ್ನು ಕೈಗೊಂಡರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಲಾಕ್‌ಡೌನ್ ಜಾರಿಗೊಳಿಸಿದರೂ ಕೆಲ ದಿನಗಳ ನಂತರ ಅನ್‌ಲಾಕ್ ಮಾಡಲೇಬೇಕಾಗುತ್ತದೆ. ಆದ್ದರಿಂದ ಲಾಕ್‌ಡೌನ್ ಪರಿಹಾರ ಅಲ್ಲ.
●ಚನ್ನವೀರಪ್ಪ, ಶ್ವಾಸಕೋಶ ತಜ್ಞ , ಹಾಸನ
ಜನರು ಕೋವಿಡ್ ಸೋಂಕು ಇದೆ ಎಂಬುದನ್ನೇ ಮರೆತಿದ್ದಾರೆ. ಇದು ಮತ್ತಷ್ಟು ಗಂಭೀರ ಪರಿಣಾಮ ತಂದೊಡ್ಡಲಿದೆ. ಈಗಾಗಲೇ ಲಾಕ್‌ಡೌನ್ ಆಗಿರುವುದರಿಂದಎಲ್ಲಾ ಕ್ಷೇತ್ರಗಳು ಮುಗ್ಗರಿಸಿವೆ. ಮತ್ತೆ ಲಾಕ್ ಡೌನ್ ಮಾಡುವುದು ಬೇಡ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವಂತೆ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಕ್ಕಿದಂತೆ.
● ಇ.ಸಿ. ನಿಂಗರಾಜ್‌ಗೌಡ, ಸಿಂಡಿಕೇಟ್ ಸದಸ್ಯರು ಮೈಸೂರು ವಿವಿ
ಜನರು ಮಾಸ್ಕ್ ಧರಿಸಿ ಸಾರ್ವಜನಿಕವಾಗಿ, ತಮ್ಮ ಕೆಲಸದ ಸ್ಥಳಗಳಲ್ಲಿ ಓಡಾಡಿಕೊಂಡಿದ್ದರೆ ಕೋವಿಡ್ ಆತಂಕವಿಲ್ಲ. ಮದುವೆ, ಮಾಲ್‌ಗಳು, ಚಿತ್ರಮಂದಿರಗಳಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಮಾರ್ಗಸೂಚಿಗಳ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು. ಜನರು ನಿಯಮಗಳನ್ನು ಉಲ್ಲಂ ಸಿದರೆ ಅವರಆರ್ಥಿಕತೆಗೂ ಪೆಟ್ಟು ಸರ್ಕಾರಕ್ಕೂ ಮತ್ತೆ ಲಾಕ್ ಡೌನ್ ಹೇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
● ಡಾ.ಬಿ.ವಿಜಯಕುಮಾರ್ ಆರಾಧ್ಯ, ವಿಜಯ ಕ್ಲಿನಿಕ್, ಹೊಸಕೋಟೆ, ಬೆಂ.ಗ್ರಾಮಾಂತರ
ಕಳೆದ ಬಾರಿಯ ಲಾಕ್‌ಡೌನ್‌ನಿಂದ ಜಿಲ್ಲೆಯ ಸಾಕಷ್ಟು ರೈತರು ಬೆಳೆ ನಷ್ಟ ಅನುಭವಿಸಿದರು. ಸರಿಯಾದಸಮಯಕ್ಕೆ ಕಟಾವು ಮಾಡಿ ಸರಬರಾಜು ಮಾಡಲು ಸಾಧ್ಯವಾಗದೆ ನಾಶಪಡಿಸಿದರು. ಈ ಬಾರಿಯೂ ಭತ್ತ, ಕಬ್ಬುಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಮತ್ತೆ ಲಾಕ್ ಡೌನ್‌ನಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ. ಆದರೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು.
●ರೇವಣ್ಣ, ಪ್ರಗತಿಪರ ರೈತ, ಹಾಡ್ಯ ಗ್ರಾಮ
ಲಾಕ್‌ಡೌನ್‌ನಿಂದ ಈಗಾಗಲೇ ಸಾಕಷ್ಟು ಮಂದಿಉದ್ಯೋಗ ಕಳೆದುಕೊಂಡು ಇನ್ನೂ ಉದ್ಯೋಗಸಿಗದೆ ಜೀವನಕ್ಕಾಗಿ ಕಷ್ಟಪಡುತ್ತಿದ್ದಾರೆ. ಮತ್ತೆ ಲಾಕ್‌ಡೌನ್ ಮಾಡಿದರೆ ಮತ್ತಷ್ಟು ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ. ಕೋವಿಡ್ ಗೆ ಲಾಕ್‌ಡೌನ್ ಒಂದೇ ಮಾನದಂಡವಾ? ಕೋವಿಡ್ ಲಸಿಕೆ ಬಂದಿದ್ದರೂ ಲಾಕ್ ಡೌನ್ ಯಾಕೆ ಮಾಡಬೇಕು.
●ಕುಮಾರ್, ಖಾಸಗಿ ಕಂಪನಿ ಉದ್ಯೋಗಿ, ಮಂಡ್ಯ
ಸರ್ಕಾರ ಆರ್ಥಿಕ ಚಟುವಟಿಕೆಗಳ ಮೇಲೆ ನಿರ್ಬಂಧಹೇರದೇ ಆನ್‌ಲೈನ್ ಬ್ಯಾಂಕಿಂಗ್, ಶಾಪಿಂಗ್, ಇ-ಮಾರುಕಟ್ಟೆ, ಮನೆ ಬಾಗಿಲಿಗೆ ಎಲ್ಲಾ ಸೇವೆಗಳುಡಿಜಿಟಲ್ ಮಾರುಕಟ್ಟೆಯಂತಹ ಸೇವೆಯ ಬಳಕೆಗೆ ಉತ್ತೇಜನ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು.ಇದರಿಂದ ಮಾರುಕಟ್ಟೆ ಸೇರಿದಂತೆ ವ್ಯಾಪಾರ ಸ್ಥಳಗಳಲ್ಲಿ ಗುಂಪುಗೂಡುವುದನ್ನು ತಪ್ಪಿಸಬಹುದು.
● ಎಚ್. ಬಾಲಕೃಷ್ಣ, ಕಾರ್ಯದರ್ಶಿ ಜಿಲ್ಲಾ ಬ್ಯಾಂಕ್ ನೌಕರರ ಸಂಘ ಮೈಸೂರು
ಲಾಕ್‌ಡೌನ್‌ನಿಂದ ಎಲ್ಲ ಕೆಲಸಗಳು ಸ್ಥಗಿತಗೊಳ್ಳುವುದರಿಂದ ಆರ್ಥಿಕ ತೊಂದರೆ ಅನುಭವಿಸಬೇಕಾಗಲಿದೆ. ಕೆಲಸಗಳು ಸಿಗದೆ ಮನೆ ನಿರ್ವಹಣೆ ಕಷ್ಟವಾಗಲಿದೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡಬಾರದು.
●ರವಿಕುಮಾರ್, ಕಟ್ಟಡ ಕಾರ್ಮಿಕ