Advertisement

ಎಲ್ಲರೂ ಸಹಕರಿಸಿದರಷ್ಟೇ ಕೋವಿಡ್‌ ನಿಯಂತ್ರಣ ಸಾಧ್ಯ

12:44 AM Jan 15, 2022 | Team Udayavani |

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾದ ನಿಯಂತ್ರಣಕ್ಕೆ ಜಿಲ್ಲಾಡಳಿತ ಯಾವ ರೀತಿ ಸಿದ್ಧವಾಗಿದೆ, ಏನೆಲ್ಲಾ ಕ್ರಮಗಳು ಜಾರಿಯಲ್ಲಿವೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ, ಹೊರರಾಜ್ಯಗಳಿಂದ ಬರುವವರ ತಪಾಸಣೆ ಮುಂತಾದ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಉದಯವಾಣಿಗೆ ನೀಡಿರುವ ಸಂದರ್ಶನ ಇಲ್ಲಿದೆ.

Advertisement

ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ?
ನಾಲ್ಕು ವಾರಗಳ ಹಿಂದೆ ಶೇ. 0.25 ಇದ್ದ ಪಾಸಿಟಿವಿಟಿ ದರ ಇದೀಗ ಶೇ. 2.5 ಮೀರಿದೆ. ದಿನಕ್ಕೆ 10ರಿಂದ 15ರ ವರೆಗೆ ವರದಿಯಾಗುತ್ತಿದ್ದ ಪ್ರಕರಣಗಳ ಸಂಖ್ಯೆ ಬಹಳಷ್ಟು ಜಾಸ್ತಿಯಾಗಿದೆ. ಸಕ್ರಿಯ ಪ್ರಕರಣಗಳು 2,000 ತಲುಪಿವೆ. ಇದೇವೇಳೆ ಕೊರೊನಾ ಪರೀಕ್ಷೆಗಳ ಸಂಖ್ಯೆಯೂ ಜಾಸ್ತಿಯಾಗಿದೆ. 15 ದಿನಗಳ ಹಿಂದೆ ದಿನಕ್ಕೆ 6ರಿಂದ 7 ಸಾವಿರ ಪರೀಕ್ಷೆ ಗಳನ್ನು ಮಾಡುತ್ತಿದ್ದರೆ ಒಂದು ವಾರ ದಿಂದ ದಿನಕ್ಕೆ ಸರಾಸರಿ 10,000 ಮಾಡಲಾಗುತ್ತಿದೆ. ಸೋಂಕಿನ ತೀವ್ರತೆ ಲಸಿಕೆ ಪಡೆದವರಲ್ಲಿ ಬಹಳಷ್ಟು ಕಡಿಮೆ ಇದ್ದು ಆಸ್ಪತ್ರೆಗೂ ದಾಖಲಾಗುತ್ತಿರುವರ ಸಂಖ್ಯೆ ಅಲ್ಪ ಪ್ರಮಾಣದಲ್ಲಿದೆ. ವೆನ್ಲಾಕ್‌ ನಲ್ಲಿ ಕೊರೊನಾ ಸೋಂಕಿತರಿಗೆ ಮೀಸಲಾಗಿರುವ 280 ಬೆಡ್‌ಗಳಲ್ಲಿ 13 ರೋಗಿಗಳು ಮಾತ್ರ ದಾಖಲಾಗಿದ್ದು ಅವರಲ್ಲಿ ಮೂವರು ಐಸಿಯು ಬೆಡ್‌ನ‌ಲ್ಲಿದ್ದಾರೆ. ಅವರೆಲ್ಲರೂ ಹೊರ ಜಿಲ್ಲೆಯವರು. ಒಂದು 1 ವಾರದಲ್ಲಿ 2 ಸಾವು ಸಂಭವಿಸಿದ್ದು ಇಬ್ಬರೂ ಇತರ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದ ಕಾರಣ ಲಸಿಕೆ ಪಡೆದುಕೊಂಡಿರಲಿಲ್ಲ.

 ಹೊರರಾಜ್ಯಗಳಿಂದ ಬರುವವರ ಮೇಲೆ ನಿಗಾ ಇದೆಯೇ ?
ಹೌದು, ಸರಕಾರದ ಮಾರ್ಗಸೂಚಿ ಯಂತೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಕೇರಳ, ಮಹಾರಾಷ್ಟ್ರ, ಗೋವಾದಿಂದ ಬರುವವರು 72 ತಾಸುಗಳೊಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ದೃಢ ಪತ್ರ ಹೊಂದಿರಬೇಕು. ಗಡಿಯಲ್ಲಿ ದಿನಂಪ್ರತಿ ಸಂಚ ರಿಸುವ ವಿದ್ಯಾರ್ಥಿಗಳು ಹಾಗೂ ಇತರರಿಗೆ 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿ ನೆಗೆಟಿವ್‌ ದೃಢಪತ್ರ ಹೊಂದಿರಬೇಕು. ಸ್ವಾಬ್‌ ಸಂಗ್ರಹಕ್ಕೂ ಗಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ 17 ಗಡಿಗಳಲ್ಲಿ ಚೆಕ್‌ಪಾಯಿಂಟ್‌ ಸ್ಥಾಪಿಸಲಾಗಿದೆ.

ಶಾಲೆಗಳಲ್ಲಿ ಯಾವ ರೀತಿಯ ಮುನ್ನಚ್ಚರಿಕೆ ವಹಿಸಲಾಗಿದೆ?
ಬುಧವಾರದ ವರೆಗಿನ ವರದಿ ಪ್ರಕಾರ 12 ದಿನಗಳಲ್ಲಿ ಜಿಲ್ಲೆಯಲ್ಲಿ 5ರಿಂದ 15ವರ್ಷದೊಳಗಿನ 25,000 ಮಕ್ಕಳನ್ನು ಪರೀಕ್ಷೆ ಮಾಡಲಾಗಿದೆ. 112 ಮಕ್ಕಳಲ್ಲಿ ಮಾತ್ರ ಸೋಂಕು ಕಂಡುಬಂದಿದೆ. ಎಲ್ಲರಲ್ಲೂ ಲಘು ಲಕ್ಷಣಗಳಷ್ಟೇ ಇವೆ. ಯಾವ ಶಾಲೆಯಲ್ಲಿ ಸೋಂಕು ಕಂಡುಬರುತ್ತದೋ ಆ ಶಾಲೆಯನ್ನು ಒಂದು ಯೂನಿಟ್‌ ಆಗಿ ಮಾಡಿ ಮುಚ್ಚಲಾಗುವುದು.

ಇತರ ಕ್ರಮಗಳೇನು?
ಕೊರೊನಾ ಮಾರ್ಗಸೂಚಿಗಳನ್ನು ಎಲ್ಲ ಹಂತಗಳಲ್ಲೂ ಪಾಲನೆಯಾಗು ವಂತೆ ನೋಡಿಕೊಳ್ಳಲಾಗುತ್ತಿದೆ. ಉಲ್ಲಂಘನೆಗೆ ದಂಡ ವಿಧಿಸಲಾಗುತ್ತಿದೆ. ಈವರೆಗೆ 1.10 ಕೋ.ರೂ. ದಂಡ ಸಂಗ್ರಹಿಸಲಾಗಿದೆ.

Advertisement

ಲಸಿಕೆ ಪ್ರಮಾಣ ಹೇಗಿದೆ?
ಜಿಲ್ಲೆಯಲ್ಲಿ ಸುಮಾರು 90,000 ಮಂದಿ ಮೊದಲ ಡೋಸ್‌ ಲಸಿಕೆಯನ್ನೇ ಪಡೆದಿಲ್ಲ. ಅವರೆಲ್ಲರೂ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಸಹಕರಿಸಿದರೆ ಕೊರೊನಾ ನಿಯಂತ್ರಣ ಸಾಧ್ಯ.

ಸೋಂಕು ಎದುರಿಸಲು ಜಿಲ್ಲಾಡಳಿತ ಯಾವ ರೀತಿ ಸನ್ನದ್ಧವಾಗಿದೆ?
ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ. ನಗರದಲ್ಲಿ 77 ನರ್ಸಿಂಗ್‌ ಹೋಂಗಳು, 9 ವೈದ್ಯಕೀಯ ಆಸ್ಪತ್ರೆಗಳಿವೆ. ಜಿಲ್ಲೆಯಲ್ಲಿ 124 ನರ್ಸಿಂಗ್‌ಹೋಂಗಳನ್ನು ಕೊರೊನಾ ನಿರ್ವಹಣೆ ವ್ಯಾಪ್ತಿಯೊಳಗೆ ತರಲಾಗಿದೆ. ವೆನ್ಲಾಕ್‌ , ಲೇಡಿಗೋಶನ್‌ ಆಸ್ಪತ್ರೆಗಳಲ್ಲದೆ ತಾಲೂಕು ಆಸ್ಪತ್ರೆಗಳು, ಸಮುದಾಯ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪ್ಲಾಂಟ್‌ಗಳನ್ನು ಮಾಡಲಾಗಿದೆ. ನಮ್ಮ ಜಿಲ್ಲೆ ರಾಜ್ಯದಲ್ಲೇ ಅತೀ ಹೆಚ್ಚು (16) ಆಕ್ಸಿಜನ್‌ ಪ್ಲಾಂಟ್‌ಗಳನ್ನು ಹೊಂದಿರುವ ಜಿಲ್ಲೆಯಾಗಿದೆ.

ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 7,000 ಬೆಡ್‌ಗಳನ್ನು ಮೀಸಲಿರಿಸಲಾಗಿದೆ. ವೆನ್ಲಾಕ್‌ ನಲ್ಲಿ ಲ್ಯಾಬ್‌ ಟೆಕ್ನಿಶಿಯನ್‌ಗಳನ್ನು, ನರ್ಸ್‌ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಭರ್ತಿ ಮಾಡಲಾಗಿದೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5 ವೆಂಟಿಲೇಟರ್‌ ಅಳವಡಿಸಲಾಗಿದ್ದು ಲಿಕ್ವಿಡ್‌ ಆಕ್ಸಿಜನ್‌ ವ್ಯವಸ್ಥೆಗೊಳಿಸಲಾಗಿದೆ. ಜಿಲ್ಲೆಯಲ್ಲಿ 2 ಆರ್‌ಟಿಪಿಸಿಆರ್‌ ಟೆಸ್ಟ್‌ ಲ್ಯಾಬ್‌ಗಳಿದ್ದು 24 ತಾಸುಗಳೊಳಗೆ ವರದಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next