ವಿಜಯಪುರ: ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ಸೋಂಕು ಮತ್ತೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ವಿಜಯಪುರ ಜಿಲ್ಲೆಯ ಗಡಿಯಲ್ಲಿ ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದೆ.
ವಿಜಯಪುರ – ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಜ್ಯದ ಗಡಿಗ್ರಾಮ ಧೂಳಖೇಡ ಮತ್ತು ಚಡಚಣ ಮಾರ್ಗವಾಗಿ ಪಂಢರಪುರದಿಂದ ಸಂಪರ್ಕ ಪಡೆಯುವ ಶಿರಾಡೋಣ ಗ್ರಾಮ ಸೇರಿದಂತೆ ಎರಡು ಚೆಕ್ ಪೋಸ್ಟ್ ತೆರೆಯಲಾಗಿದೆ.
ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಜನರನ್ನು ಆರೋಗ್ಯ ಸಿಬ್ಬಂದಿ ಚೆಕ್ ಪೋಸ್ಟ್ ನಲ್ಲಿ ಕೋವಿಡ್ ಲಕ್ಷಣಗಳಿಗೆ ಪರೀಕ್ಷಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:ವಿಜಯಪುರ ಫುಡ್ ಪಾರ್ಕ್ ಗಾಗಿ ಬಜೆಟ್ ನಲ್ಲಿ ಆದ್ಯತೆ: ಸಚಿವ ಬಿ.ಸಿ.ಪಾಟೀಲ್
ಸಾವು, ಗಂಭೀರ ಅನಾರೋಗ್ಯ, ವಿವಾಹದಂಥ ತುರ್ತು ಕೆಲಸಕ್ಕೆ ಮಹಾರಾಷ್ಟ್ರ ರಾಜ್ಯಕ್ಕೆ ತೆರಳಿ, ವಿಜಯಪುರ ಜಿಲ್ಲೆಗೆ ಮರಳುವ ವ್ಯಕ್ತಿಗಳ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದಲ್ಲದೇ ಮಹಾರಾಷ್ಟ್ರ ರಾಜ್ಯಕ್ಕೆ ಜಿಲ್ಲೆಯ ಜನರು ಅನಗತ್ಯವಾಗಿ ಭೇಟಿ ನೀಡದಂತೆ ಸೂಚಿಸಲಾಗಿದೆ. ಒಂದೊಮ್ಮೆ ರೋಗದ ಲಕ್ಷಣಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಇದಲ್ಲದೇ ಮಹಾರಾಷ್ಟ್ರ ರಾಜ್ಯದಿಂದ ಬರುವವರು ಆರ್‌ಟಿಪಿಸಿಆರ್ ನಕಾರಾತ್ಮಕ ವರದಿಯ ಲಭ್ಯತೆ ಹಾಗೂ ನಿಖರ ವಿಳಾಸದ ದಾಖಲೆ ಪರಿಶೀಲಿಸಲಾಗುತ್ತಿದೆ.
ಈ ಮಧ್ಯೆ ಆರೋಗ್ಯ ಪರೀಕ್ಷೆಯ ಸೂಕ್ತ ದಾಖಲೆ ಇಲ್ಲದೇ ಸೋಲಾಪುರದಿಂದ ಜಿಲ್ಲೆಗೆ ಪ್ರವೇಶಿಸಲು ಮುಂದಾದ ವ್ಯಕ್ತಿಗಳನ್ನು ಮರಳಿ ಕಳಿಸಲಾಗುತ್ತಿದೆ.
ಇದಲ್ಲದೇ ಜಿಲ್ಲೆಯ ಜನರು ಅನಗ್ಯತವಾಗಿ ಮಹಾರಾಷ್ಟ್ರಕ್ಕೆ ಭೇಟಿ ನೀಡಬಾರದು, ಭೇಟಿ ನೀಡಿದರೆ 72 ಗಂಟೆಯೊಳಗೆ ಪರೀಕ್ಷಿಸಿದ ಆರ್ಟಿಪಿಸಿಆರ್ ನೆಗೆಟಿವ್ ವರದಿ ತರುವುದು ಕಡ್ಡಾಯ. ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕು ಎಂದು ವಿಜಯಪುರದ ಜಿಲ್ಲಾಧಿಕಾರಿ ಸುನೀಲ ಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಸ್ಥಳೀಯರಿಗೆ ಟೋಲ್ ವಿನಾಯತಿಗಾಗಿ ಕೋಟ ಬಂದ್ ಯಶಸ್ವಿ; ಸಾವಿರಾರು ಮಂದಿಯಿಂದ ಪ್ರತಿಭಟನಾ ಸಭೆ
ಇದಲ್ಲದೇ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜಿಲ್ಲೆಯ ಗಡಿಯಲ್ಲಿನ ಚೆಕ್ ಪೋಸ್ಟ್ ವ್ಯವಸ್ಥೆ ನಿರ್ವಹಣೆ ಕುರಿತು ಇಂಡಿ ಉಪ ವಿಭಾಗಾಧಿಕಾರಿ ರಾಹುಲ್ ಶಿಂಧೆ ರಾಷ್ಟ್ರೀಯ ಹೆದ್ದಾರಿ ಚೆಕ್ ಪೋಸ್ಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.