ಬೆಂಗಳೂರು :ಜನವರಿ ಅಂತ್ಯದ ವೇಳೆಗೆ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಈಗಿನದಕ್ಕಿಂತ ದುಪ್ಪಟ್ಟು ಆಗುವ ಸಾಧ್ಯತೆ ಇದೆ ಎಂದು ತಜ್ಞರ ಸಮಿತಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸಾಕಷ್ಟು ಸಿದ್ಧತೆ ಆರಂಭಿಸಿದ್ದು, ಜ.16 ರ ವೇಳೆಗೆ 12 ಸಾವಿರ ಹಾಸಿಗೆಗಳನ್ನು ಸಜ್ಜುಗೊಳಿಸುವುದಕ್ಕೆ ಸೂಚನೆ ನೀಡಿದೆ.
ಬಿಬಿಎಂಪಿ ಅಧಿಕಾರಿಗಳ ಜತೆಗೆ ವರ್ಚುವಲ್ ಸಭೆ ನಡೆಸಿರುವ ಮುಖ್ಯ ಆಯುಕ ಆಯುಕ್ತ ಗೌರವ ಗುಪ್ತ ಈ ಸೂಚನೆ ನೀಡಿರುವ ಜತೆಗೆ ಕೇಂದ್ರದ ಮಾರ್ಗಸೂಚಿ ಪ್ರಕಾರ ಆರ್‌ಟಿಪಿಸಿಆರ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲು ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಪ್ರತಿದಿನ
60 ಸಾವಿರ ಪರೀಕ್ಷೆ ನಡೆಸಲಾಗುತ್ತಿದ್ದು, ಮುಂದಿನ ವಾರಾಂತ್ಯದ ವೇಳೆಗೆ ಈ ಪ್ರಮಾಣವನ್ನು 1 ಲಕ್ಷಕ್ಕೆ ಹೆಚ್ಚಿಸುವ ಗುರಿ ನಿಗದಿ ಮಾಡಲಾಗಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಹಾಸಿಗೆ ಹಾಗೂ ಆಮ್ಲಜನಕದ ಸಮಸ್ಯೆ ಬಹುವಾಗಿ ಕಾಡಿತ್ತು. ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಾರಿ ಅಂಥ ಯಾವುದೇ ವಿರೋಧಗಳನ್ನು ಮೈಮೇಲೆ ಎಳೆದುಕೊಳ್ಳುವುದನ್ನು ತಪ್ಪಿಸಿಕೊಳ್ಳಲು ನಿರ್ಧರಿಸಿರುವ ಬಿಬಿಎಂಪಿ ಮುನ್ನೆಚ್ಚರಿಕೆ ಕ್ರಮವಾಗಿ 12 ಸಾವಿರ ಹಾಸಿಗೆಗಳನ್ನು ಸಿದ್ದವಾಗಿಟ್ಟುಕೊಳ್ಳಲು ನಿರ್ಧರಿಸಿದೆ.
100ಕ್ಕೂ ಹೆಚ್ಚಿಗೆ ಸಾಮರ್ಥ್ಯ ಇರುವ ಆಸ್ಪತ್ರೆಗಳಲ್ಲಿ ಸಹಾಯ ಕೇಂದ್ರ ಆರಂಭಿಸುವುದಕ್ಕೂ ಬಿಬಿಎಂಪಿ ತೀರ್ಮಾನಿಸಿದ್ದು, ನಾಗರಿಕರು, ಸೋಂಕಿತರ ಸಂಬAಧಿಗಳು ಆಸ್ಪತ್ರೆಗೆ ಬಂದಾಗ ಅಗತ್ಯ ಮಾಹಿತಿ ಒದಗಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಿಬ್ಬಂದಿಗೆ ಸೌಜನ್ಯವಾಗಿ ವರ್ತಿಸಲು ಸೂಚನೆ ನೀಡಲಾಗಿದೆ. ಚಿಕಿತ್ಸೆ ಸ್ವರೂಪ ನಿರ್ಧರಿಸುವುದಕ್ಕೆ ಟೆಲಿ ಟ್ರಯಾಜಿಂಗ್ ತಂಡ ರಚಿಸಲಾಗಿದೆ. ವಾರ್ಡ್ ವ್ಯಾಪ್ತಿಯಲ್ಲೂ ಈ ತಂಡ ಸಿದ್ದವಿದೆ.
ಅದೇ ರೀತಿ ಬೆಂಗಳೂರಿಗೆ ಆಗಮಿಸುವ ವಿದೇಶಿ ಪ್ರಯಾಣಿಕರಲ್ಲಿ ಕೋವಿಡ್ ಲಕ್ಷಣ ಕಂಡು ಬಂದರೆ ಅಥವಾ ಲಕ್ಷಣ ರಹಿತ ಸೋಂಕು ಇದ್ದರೆ ಅಂಥವರಿಗೆ ಹೊಟೇಲ್ ವಾಸ್ತವ್ಯಕ್ಕೂ ವ್ಯವಸ್ಥೆ ಸಿದ್ದಪಡಿಸಲಾಗುತ್ತಿದೆ. ಬಜೆಟ್ ಹೊಟೇಲ್‌ಗಳಲ್ಲಿ ಉಚಿತವಾಗಿ ವಾಸ್ತವ್ಯ ಇರಬಹುದು. ಆದರೆ ಸ್ಟಾರ್ ಹೊಟೇಲ್‌ನಲ್ಲಿ ಕ್ವಾರಂಟೈನ್ ಆದರೆ ಸ್ವಂತ ಖರ್ಚಿನಲ್ಲಿ ವಾಸ್ತವ್ಯ ಇರಬೇಕಾಗುತ್ತದೆ.