ಥಾಣೆ: ಮನಪಾ ಪ್ರದೇಶದಲ್ಲಿ ಸಕ್ರಿಯ ಕೋವಿಡ್ ರೋಗಿಗಳ ಸಂಖ್ಯೆ ಎರಡು ದಿನಗಳಲ್ಲಿ ಮತ್ತೆ ಒಂದು ಸಾವಿರಕ್ಕೆ ಇಳಿದಿದ್ದು, ಈ ಮಧ್ಯೆ ನಗರದಲ್ಲಿ ದಿನಂಪ್ರತಿ ನೂರು ಕೊರೊನಾ ರೋಗಿಗಳು ಕಂಡುಬರುತ್ತಿದ್ದಾರೆ. ರೋಗಿಗಳ ಚೇತರಿಕೆ ಪ್ರಮಾಣವು ಶೇ. 97.82ಕ್ಕೆ ತಲುಪಿದೆ ಎಂದು ಥಾಣೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.
ಜೂನ್ ಕೊನೆಯಲ್ಲಿ ಥಾಣೆ ಮನಪಾ ಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಕಲ್ವಾ ಪ್ರದೇಶದಲ್ಲಿ ಸುಮಾರು 15 ರೋಗಿಗಳು ಪತ್ತೆಯಾಗಿದ್ದಾರೆ. ಜೂ. 21ರಂದು ಈ ಪ್ರದೇಶದಲ್ಲಿ 37 ರೋಗಿಗಳು ಕಂಡುಬಂದಿದ್ದರೆ, ನಗರದ ಉಳಿದ ಭಾಗಗಳಲ್ಲಿ 20ಕ್ಕಿಂತ ಕಡಿಮೆ ರೋಗಿ ಗಳಿದ್ದಾರೆ. ಕಲ್ವಾದ ಕೆಲವು ಭಾಗಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾ ಗುತ್ತಿರುವುದರಿಂದ ಮನಪಾಹೆಚ್ಚಿನ ಎಚ್ಚರಿಕೆಯನ್ನು ಹೊಂದಿತ್ತು. ಇದರ ಬಳಿಕ ಕಲ್ವಾ ಪ್ರದೇಶದಲ್ಲಿ ಕೋವಿಡ್ ಹರಡುವುದನ್ನು ತಡೆಗಟ್ಟಲು ಮನಪಾ ಆಡಳಿತ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು. ಎರಡು ಮೂರು ದಿನಗಳಲ್ಲಿ ಇಲ್ಲಿನ ಪರಿಸ್ಥಿತಿಯನ್ನು ಮತ್ತೆ ನಿಯಂತ್ರಣಕ್ಕೆ ತರಲಾಯಿತು.
ಜುಲೈ ಮೊದಲ ವಾರದಲ್ಲಿ ನಗರದಲ್ಲಿ ಸಕ್ರಿಯ ಕೋವಿಡ್ ರೋಗಿಗಳ ಸಂಖ್ಯೆ ಒಂದು ಸಾವಿರದೊಳಗೆ ಇತ್ತು. ಜು. 7ರ ಬಳಿಕ ನಗರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿ ಒಂದು ಸಾವಿರವನ್ನು ಮೀರಿತು. ಈ ಅಂಕಿಅಂಶ ವನ್ನು ಸತತವಾಗಿ ಮೂರು ದಿನಗಳವರೆಗೆ ನಿರ್ವಹಿಸಲಾಗಿದೆ. ರೋಗಿಗಳ ಸಂಖ್ಯೆ ಯಲ್ಲಿ ಹಠಾತ್ ಹೆಚ್ಚಳದಿಂದಾಗಿ ಆಡಳಿತ ವನ್ನು ಎಚ್ಚರಿಸಲಾಯಿತು. ಹೆಚ್ಚುತ್ತಿರುವ ಕೊರೊನಾ ಪ್ರಮಾಣ ತಡೆಯಲು ಆಡಳಿತವು ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತ್ತು. ಆದರೆ ಮೂರು ದಿನಗಳ ಬಳಿಕ ರೋಗಿಗಳ ಸಂಖ್ಯೆ ಮತ್ತೆ ಕಡಿಮೆಯಾಗಲು ಪ್ರಾರಂಭಿಸಿದೆ. ಈಗ ನಗರದಲ್ಲಿ ಸುಮಾರು 900 ಸಕ್ರಿಯ ರೋಗಿಗಳಿದ್ದರೆ, ನಗರದಲ್ಲಿ ಪ್ರತೀದಿನ ಸುಮಾರು 90ರಿಂದ 96 ರೋಗಿಗಳು ಕಂಡುಬರುತ್ತಿದ್ದಾರೆ. ದಿನಕ್ಕೆ ಒಂದರಿಂದ ಎರಡು ಸಾವುಗಳು ವರದಿಯಾಗುತ್ತಿವೆ. ಇದರ ಪರಿಣಾಮವಾಗಿ ನಗರದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮನಪಾ ಮೂಲಗಳು ತಿಳಿಸಿವೆ.
357 ಹೊಸ ಪ್ರಕರಣ :
ಥಾಣೆ ಜಿಲ್ಲೆಯಲ್ಲಿ ಕೋವಿಡ್ ಹೊಸದಾಗಿ 357 ಪ್ರಕರಣ ಸೇರ್ಪಡೆ ಯೊಂದಿಗೆ ಒಟ್ಟು ಸೋಂಕಿನ ಸಂಖ್ಯೆ 5,40,677ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಕೊರೊನಾದಿಂದ 8 ಮಂದಿ ಅಸುನೀಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 10,912ಕ್ಕೆ ಏರಿದೆ ಎಂದು ಅವರು ಹೇಳಿದ್ದಾರೆ. ಥಾಣೆಯಲ್ಲಿ ಕೋವಿಡ್-19 ಮರಣ ಪ್ರಮಾಣವು ಶೇ. 2.01ರಷ್ಟಿದೆ.