Advertisement
ಒಂದು ತಿಂಗಳಿಂದೀಚೆಗೆ ನಿತ್ಯ ರಾಜ್ಯದಲ್ಲಿ ವರದಿಯಾಗುತ್ತಿರುವ ಕೊರೊನಾ ಹೊಸ ಪ್ರಕರಣಗಳ ಪೈಕಿ ಶೇ.52ರಷ್ಟು ಪ್ರಕರಣಗಳು ಬೆಂಗಳೂರು ಒಂದರಲ್ಲಿಯೇ ಪತ್ತೆಯಾಗುತ್ತಿವೆ. ಇನ್ನು ಸಾವಿಗೀಡಾದ ಸೋಂಕಿತರಲ್ಲಿ ಶೇ.56 ರಷ್ಟು ಬೆಂಗಳೂರಿನವರಿದ್ದಾರೆ.
Related Articles
Advertisement
ಇದನ್ನೂ ಓದಿ: ಕೋವಿಡ್ ಮೊದಲ ಪ್ರಕರಣಕ್ಕೆ ವರ್ಷ, ಇನ್ನೂ ಇದೆ ಯುದ್ಧ
ದೇಶದಲ್ಲಿಯೇ ರಾಜಧಾನಿಗೆ ಎರಡನೇ ಸ್ಥಾನ: ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ದೇಶದ ಮಹಾ ನಗರಗಳ ಪೈಕಿ ಬೆಂಗಳೂರು ನವೆಂಬರ್ ನಲ್ಲಿ ಎರಡನೇ ಸ್ಥಾನಕ್ಕೇರಿತ್ತು. ಇಂದಿಗೂ ಅಲ್ಲಿಯೇ ಮುಂದುವರೆದಿದೆ. ಮೊದಲ ಸ್ಥಾನದಲ್ಲಿ 6.34 ಲಕ್ಷ ಪ್ರಕರಣಗಳೊಂದಿಗೆ ದೆಹಲಿ, ಮೂರನೇ ಸ್ಥಾನದಲ್ಲಿ 3.88 ಲಕ್ಷ ಪ್ರಕರಣಗಳೊಂದಿಗೆ ಪುಣೆ ನಗರವಿದೆ.
ನವೆಂಬರ್‌ನಲ್ಲಿ 50 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳನ್ನು ಹೊಂದುವ ಮೂಲಕ ಹೆಚ್ಚು ಸಕ್ರಿಯೆ ಪ್ರಕರಣ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೊದಲು ಸ್ಥಾನದಲ್ಲಿದ್ದ ಬೆಂಗಳೂರು ಸದ್ಯ ಕೆಳಗಿಳಿದಿದೆ. ಪ್ರಸ್ತುತ, ಆಸುಪಾಸಿನಲ್ಲಿ ಸಕ್ರಿಯ ಪ್ರಕರಣಗಳಿವೆ. ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ನಗರಗಳ ಪೈಕಿ ಮೊದಲ ಐದು ಸ್ಥಾನದಲ್ಲಿ ಕ್ರಮವಾಗಿ ಪುಣೆ, ಮುಂಬೈ, ಥಾಣೆ, ನಾಗಪುರ ಹಾಗೂ ಕಲ್ಲಿಕೋಟೆ ಇವೆ.
ಸೋಂಕು ಪರೀಕ್ಷೆಗಳು ಇಳಿಕೆ; ಮತ್ತೆ ಸೋಂಕು ಹೆಚ್ಚಳಕ್ಕೆ ಹಾದಿ?: ನವೆಂಬರ್‌ನಲ್ಲಿ ರಾಜ್ಯದಲ್ಲಿ ನಿತ್ಯ ಒಂದು ಲಕ್ಷ ಗಡಿದಾಟುತ್ತಿದ್ದ ಸೋಂಕು ಪರೀಕ್ಷೆಗಳ ಸಂಖ್ಯೆ ಸದ್ಯ 60 ಸಾವಿರಕ್ಕೆ ಕುಸಿದಿದೆ. ಅಂತೆಯೇ 50 ಸಾವಿರ ಆಸುಪಾಸಿನಲ್ಲಿದ್ದ ಬೆಂಗಳೂರಿನ ಪರೀಕ್ಷೆಗಳ ಸಂಖ್ಯೆ ಜನವರಿಯಲ್ಲಿ 35 ಸಾವಿರ ಆಸುಪಾಸಿಗೆ ಇಳಿಕೆಯಾಗಿವೆ. ಅದರಲ್ಲೂ ಕಳೆದ ಒಂದು ವಾರದಿಂದ 30 ಸಾವಿರ ಆಸುಪಾಸಿನಲ್ಲಿವೆ. ಈ ಹಿಂದೆ ಹೆಚ್ಚು ಪರೀಕ್ಷೆಗಳನ್ನು ನಡೆಸುವ ಮೂಲಕ ಸೋಂಕಿತರನು ಶೀಘ್ರ ಪತ್ತೆ ಮಾಡಿ ಸೋಂಕನ್ನು ಹತೋಟಿಗೆ ಞತರಲಾಗಿತ್ತು. ಈಗ ರಾಜ್ಯ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಪರೀಕ್ಷೆಗಳನ್ನು ತಗ್ಗಿಸಿದ್ದು, ಮತ್ತೆ ಸೋಂಕು ಹೆಚ್ಚಳಕ್ಕೆ ಹಾದಿಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು. ಇನ್ನು ಈವರೆಗೂ ಒಟ್ಟಾರೆ ರಾಜ್ಯದಲ್ಲಿ 1.69 ಕೋಟಿ, ರಾಜಧಾನಿಯಲ್ಲಿ 68 ಲಕ್ಷ ಸೋಂಕು ಪರೀಕ್ಷೆಗಳು ನಡೆದಿವೆ.
ಶೇ.98 ರಷ್ಟು ಗುಣಮುಖ: ನಗರದಲ್ಲಿ ಸೋಂಕು ತಗುಲಿದ್ದ 3.98 ಲಕ್ಷ ಮಂದಿ ಪೈಕಿ 3.90 ಮಂದಿ ಗುಣಮುಖರಾಗಿದ್ದಾರೆ. ಗುಣಮುಖ ಪ್ರಮಾಣ ಶೇ.98 ರಷ್ಟಿದೆ. ಇಂದಿಗೂ 3,876 ಸೋಂಕಿತರು ಆಸ್ಪತ್ರೆ/ ಕೊರೊನಾ ಕೇರ್ ಸೆಂಟರ್/ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4,387 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದು, ಮರಣ ಪ್ರಮಾಣ ಶೇ. 1.1 ರಷ್ಟಿದೆ. ಅಂತೆಯೇ ರಾಜ್ಯದಲ್ಲಿಯೂ 9.38 ಲಕ್ಷ ಪ್ರಕರಣಗಳಲ್ಲಿ 9.19 ಲಕ್ಷ ಸೋಂಕಿತರು ಗುಣಮುಖರಾಗಿದ್ದು, 12,209 ಮಂದಿ ಸಾವಿಗೀಡಾಗಿದ್ದಾರೆ. ಗುಣಮುಖ ದರ ಶೇ 98 ರಷ್ಟಿದೆ
ಕಳೆದ 10 ದಿನದಲ್ಲಿ ಹೆಚ್ಚು ಕೊರೊನಾ ಕೇಸ್ ವರದಿಯಾದ ವಾರ್ಡ್‌ಗಳು
ಸುದ್ದಗುಂಟೆ ಪಾಳ್ಯ, ಬೆಳ್ಳಂದೂರು, ದೊಡ್ಡಾನೆಕುಂದಿ, ಉತ್ತರಹಳ್ಳಿ, ಅತ್ತೂರು, ಹೊರಮಾವು, ಬೇಗೂರು, ಎಚ್‌ಬಿಆರ್ ಲೇಔಟ್, ತಣಿಸಂದ್ರ, ಅರಕೆರೆ.
ಕಳೆದ 10 ದಿನದಲ್ಲಿ ಶೂನ್ಯ ಕೊರೊನಾ ಕೇಸ್ ವರದಿಯಾದ ವಾರ್ಡ್‌ಗಳು
ಡಾ.ರಾಜ್‌ಕುಮಾರ್ ವಾರ್ಡ್, ಎಚ್.ಎ.ಎಲ್ ಏರ್‌ಪೋರ್ಟ್, ಕೆಂಪಾಪುರ ಅಗ್ರಹಾರ, ಲಿಂಗರಾಜಪುರ, ಪಾದರಾಯನಪುರ, ಜಗಜೀವನ್‌ರಾಮ್ ನಗರ
ಜಯಪ್ರಕಾಶ್ ಬಿರಾದರ್