ಮುಂಬಯಿ, ಜು. 24: ನಾವು ಕೋವಿಡ್ ಸೋಂಕನ್ನು ಸೋಲಿಸುತ್ತೇವೆ ಎಂಬ ವಿಶ್ವಾಸವಿದೆ. ಅದಕ್ಕಾಗಿ ಮಿಷನ್ ಝೀರೋ, ಮೊಬೈಲ್ ಡಿಸ್ಪೆನ್ಸರಿ ವ್ಯಾನ್, ಫೀವರ್ ಕ್ಲಿನಿಕ್, ಮನೆ ಮನೆ ಪರೀಕ್ಷೆ, ಚೇಸ್ ದಿ ವೈರಸ್ ಮತ್ತು ಇತರ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಇದು ಮುಂಬಯಿಯಲ್ಲಿ ಕೋವಿಡ್ ಸೋಂಕಿಗೆ ಬ್ರೇಕ್ ಹಾಕಲು ನಮಗೆ ಸಹಾಯ ಮಾಡಿದೆ. ಇದರಿಂದ ಚೇತರಿಕೆ ದರವೂ ಸುಧಾಸುತ್ತಿದೆ ಎಂದು ಮುಂಬಯಿ ಮೇಯರ್ ಕಿಶೋರಿ ಪೆಡ್ನೇಕರ್ ಅವರು ಹೇಳಿದ್ದಾರೆ.
ಚೇತರಿಕೆ ಪ್ರಮಾಣ ಹೆಚ್ಚಳವಾಗಿದೆ ಜುಲೈ ತಿಂಗಳ ಅಂತ್ಯಕ್ಕೆ ಮುಂಬಯಿಯಲ್ಲಿ ಕೋವಿಡ್ ಪ್ರಕೋಪ ಕಡಿಮೆಯಾಗಲಿದೆ. ಈ ತಿಂಗಳು ಜೂನ್‌ಗಿಂತಲೂ ಅಧಿಕ ಸೋಂಕಿತರು ಕೋವಿಡ್ ದಿಂದ ಚೆತರಿಸಿ ಕೊಂಡಿದ್ದಾರೆ. ಜೂನ್‌ನಲ್ಲಿ ಮುಂಬಯಿಯಲ್ಲಿ 17,036 ಜನರು ಚೆತರಿಕೆಗೊಂಡಿದ್ದು. ಜುಲೈ 22ರ ಹೊತ್ತಿಗೆ 18,704 ಮಂದಿ ಚೇತರಿಸಿಕೊಂಡಿದ್ದಾರೆ. ಇದರಿಂದ ಮುಂಬಯಿಯಲ್ಲಿ ಚೇತರಿಕೆ ದರ ಹಿಂದಿನ ತಿಂಗಳುಗಳಿಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಜೂನ್ ಅಂತ್ಯಕ್ಕೆ ಮುಂಬಯಿಯಲ್ಲಿ ಸೋಂಕಿ ನಿಂದ 4,554 ಮಂದಿ ಸಾವನ್ನಪ್ಪಿದ್ದು, ಜುಲೈನಲ್ಲಿ ಇದುವರೆಗೆ 1,318 ಮಂದಿಸಾವನ್ನಪ್ಪಿದ್ದಾರೆ. ಹೀಗಾಗಿ ಮುಂಬಯಿಯಲ್ಲಿ ಒಟ್ಟು ಸಾವಿನ ಸಂಖ್ಯೆ 5,872ಕ್ಕೆ ತಲುಪಿದೆ. ಮುಂಬಯಿಯಲ್ಲಿ ಸಾವಿನ ಪ್ರಮಾಣ ಶೇ. 5.68ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಮುಂಬಯಿಯಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ ಶೇ. 71ಕ್ಕೆ ತಲುಪಿದೆ. ಜೂನ್ 30ರ ಹೊತ್ತಿಗೆ ಮುಂಬಯಿಯಲ್ಲಿ ಚೇತರಿಕೆ ಪ್ರಮಾಣವು ಶೇ. 57ರಷ್ಟಿತ್ತು. ಜುಲೈ 21ಕ್ಕೆ ಇದು ಶೇ. 14ರಷ್ಟು ಹೆಚ್ಚಾಗಿದೆ. ಬಿಎಂಸಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಜೂನ್ 30ರ ವೇಳೆಗೆ ಮುಂಬಯಿಯಲ್ಲಿ ಒಟ್ಟು ಕೋವಿಡ್ ರೋಗಿಗಳ ಸಂಖ್ಯೆ 77,197 ಆಗಿದೆ. ಅದರಲ್ಲಿ 44,170 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 22ಕ್ಕೆ ಮುಂಬಯಿಯಲ್ಲಿ ಸೋಂಕಿತರ ಸಂಖ್ಯೆ 27,375ರಷ್ಟು ಹೆಚ್ಚಾಗಿದೆ. ಒಟ್ಟು ರೋಗಿಗಳ ಸಂಖ್ಯೆ 1,04,572 ಏರಿಕೆಯಾಗಿದ್ದು, ಈ ಅವಧಿಯಲ್ಲಿ 30,948 ರೋಗಿಗಳು ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ಚೇತರಿಸಿಕೊಂಡವರ ಸಂಖ್ಯೆ ಒಟ್ಟು ಸಂಖ್ಯೆ 75,118ಕ್ಕೆ ಏರಿಕೆಯಾಗಿದೆ. ಜೂನ್ 30ರಂದು 28,473 ಮುಂಬಯಿಯಲ್ಲಿ ಸಕ್ರಿಯ ರೋಗಿಗಳನ್ನು ಹೊಂದಿತ್ತು. ಜುಲೈ 22ರಂದು ಸಕ್ರಿಯ ರೋಗಿಗಳ ಸಂಖ್ಯೆ 23,582 ಏರಿಕೆಯಾಗಿದೆ. ಮುಂಬಯಿಯಲ್ಲಿ ಚೇತರಿಕೆ ದರವು ಸಾಕಷ್ಟು ಪರಿಹಾರವನ್ನು ನೀಡಲಿದೆ ಎಂದು ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾಗುವವರ ಚೇತರಿಕೆ ವೇಗ ಹೆಚ್ಚಾಗಿದೆ. ಉದ್ಧವ್ ಅವರ ನೇತೃತ್ವದಲ್ಲಿ, ರಾಜ್ಯ ಸರಕಾರ ಮತ್ತು ಬಿಎಂಸಿ ಆಡಳಿತವು ಕೋವಿಡ್ ವನ್ನು ಸೋಲಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ, ಇದು ಯಶಸ್ಸನ್ನು ಪಡೆಯುತ್ತಿದೆ ಎಂದು ಹೇಳಿದ್ದಾರೆ.