ಮುಂಬಯಿ, ಸೆ. 17: ನಗರದ ವಿಲೇಪಾರ್ಲೆಯಿಂದ ಬೊರಿವಲಿವರೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಬೊರಿವಲಿಯೊಂದಿಗೆ ಪ್ರಸ್ತುತ ಮಲಾಡ್ ಮತ್ತು ಅಂಧೇರಿ ಕೂಡಾ ಹತ್ತು ಸಾವಿರ ಕೋವಿಡ್ ಪ್ರಕರಣಗಳನ್ನು ಹೊಂದಿರುವ ಗುಂಪಿಗೆ ಸೇರಿದ್ದು, ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ.
ಸೋಂಕು ಹರಡುತ್ತಿರುವ ಆರ್ ಸೆಂಟ್ರಲ್ ವಾರ್ಡ್‌ನ ಬೊರಿವಲಿಯಲ್ಲಿ ಈಗಾಗಲೇ ಹತ್ತು ಸಾವಿರ ಪ್ರಕರಣಗಳ ಗಡಿದಾಟಿದ್ದು, ಪಿ ನಾರ್ಥ್ ವಾರ್ಡ್‌ನ ಮಲಾಡ್ ಕೂಡಾ 10,079 ಪ್ರಕರಣಗಳನ್ನು ಹೊಂದಿದೆ. ಕೆ-ಈಸ್ಟ್ ವಾರ್ಡ್‌ನಲ್ಲಿರುವ ಜೋಗೇಶ್ವರಿ, ಅಂಧೇರಿ, ವಿಲೇಪಾರ್ಲೆ ಪೂರ್ವ ಭಾಗದಲ್ಲೂ 10,027 ಪ್ರಕರಣಗಳಿವೆ. ಮೇ-ಜೂನ್ ಅವಧಿಯಲ್ಲಿ ಕೋವಿಡ್ ಉತ್ತುಂಗದಲ್ಲಿದ್ದಾಗ ಈ ವಾರ್ಡ್ ಗಳು ದಕ್ಷಿಣ ಮಧ್ಯ ಮುಂಬಯಿಯ ಹಾಟ್ ಸ್ಪಾಟ್‌ಗಳಿಗಿಂತ ಕಡಿಮೆ ಪ್ರಕರಣಗಳನ್ನು ವರದಿ ಮಾಡಿದ್ದವು. ಅಂಧೇರಿ ಪಶ್ಚಿಮ, ಭಾಂಡೂಪ್,ಮುಲುಂಡ್, ದಹಿಸಾರ್ ಮತ್ತು ಘಾಟ್ಕೊàಪರ್ ಒಳಗೊಂಡ ವಾರ್ಡ್‌ಗಳು ಆತಂಕದ ಇತರ ತಾಣಗಳಾಗಿವೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿನ ಹಾಟ್‌ಸ್ಪಾಟ್‌ಗಳಾದ ಐ ಸೌತ್ ವಾರ್ಡ್‌ನ ವರ್ಲಿ, ಎಂ-ಈಸ್ಟ್ ವಾರ್ಡ್‌ದ ಗೋವಾಂಡಿ, ಎಫ್ -ನಾರ್ತ್ ವಾರ್ಡ್‌ನ ವಡಾಲಾ, ಎಲ್ ವಾರ್ಡ್‌ನಲ್ಲಿರುವ ಕುರ್ಲಾ ಮತ್ತು ಎಚ್ ಈಸ್ಟ್ ವಾರ್ಡ್‌ನ ಬಾಂದ್ರಾದಲ್ಲೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಉತ್ತರ ಉಪನಗರಗಳಲ್ಲಿ ಕಳೆದ ತಿಂಗಳು ಲಾಕ್‌ಡೌನ್ ಸಡಿಲಗೊಂಡ ಬಳಿಕ ಜನರು ಮುಖಗವಸು ಬಳಸದಿರುವುದು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಸೋಂಕಿತರು ಲಕ್ಷಣರಹಿತರಾಗಿದ್ದು, ಹರಡು ವಿಕೆಯನ್ನು ಪತ್ತೆಹಚ್ಚಲು ಅಥವಾ ನಿಲ್ಲಿಸಲು ಕಷ್ಟವಾಗುತ್ತದೆ ಎಂದು ಹಿರಿಯ ವಾರ್ಡ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಅಂತರ ಮತ್ತು ಮುಖಗವಸುಗಳ ಮಹತ್ವದ ಬಗ್ಗೆ ತಮ್ಮ ಸದಸ್ಯರಿಗೆ ತಿಳಿಸಲು ವಸತಿ ಕಟ್ಟಡಗಳನ್ನು ಸಂಪರ್ಕಿಸಲು ಬಿಎಂಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಾಂದಿವಲಿ, ಬೊರಿವಲಿ, ದಹಿಸರ್ ಪರಿಸರದಲ್ಲಿ ಪ್ರಕರಣಗಳು ಇದೇ ರೀತಿಯಲ್ಲಿ ಏರುತ್ತಲೇಹೋದರೆ ಬಿಎಂಸಿ ಸಂಪೂರ್ಣ ಕಟ್ಟಡಗಳನ್ನುಮೊದಲಿನಂತೆ ಮೊಹರು ಮಾಡುತ್ತದೆ. ಈ ಪ್ರದೇಶಗಳು ಬಿಎಂಸಿಯ ವಲಯ 7ರ ವ್ಯಾಪ್ತಿಗೆ ಬರುತ್ತವೆ. ವಲಯದ ಉಪ ಪುರಸಭೆ ಆಯುಕ್ತ ವಿಶ್ವಾಸ್ ಶಂಕರ್‌ವಾರ್, ಒಂದೇ ಆವರಣದಿಂದ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದರೆ ಕಟ್ಟಡಗಳಿಗೆಮೊಹರು ಹಾಕುವಂತಹ ಕಠಿನ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದರು.
ಪರೀಕ್ಷಿಸುವ ಮತ್ತು ಚಿಕಿತ್ಸೆ ನೀಡುವ ನೀತಿಯನ್ನು ಇಲ್ಲಿ ಆಕ್ರಮಣಕಾರಿಯಾಗಿ ಅನುಸರಿಸಲಾಗುತ್ತದೆ. ನನ್ನ ಕುಟುಂಬ, ನನ್ನ ಜವಾಬ್ದಾರಿ ಎಂಬ ಹೊಸ ನಾಗರಿಕ ಅಭಿಯಾನವನ್ನು ಜಾರಿಗೆ ತರುವ ಬಿಎಂಸಿ ಜನದಟ್ಟಣೆ ಇರುವ ಸ್ಥಳಗಳಲ್ಲಿ ಮುಖಗವಸು ಧರಿಸದವರಿಗೆ ದಂಡ ವಿಧಿಸಲು ಪ್ರಾರಂಭಿಸಿದೆ. ಎರಡನೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಪಿ ನಾರ್ತ್‌ನ ಮಲಾಡ್ ವಾರ್ಡ್ ನ ಸಹಾಯಕ ಮುನ್ಸಿಪಲ್ ಕಮಿಷನರ್ ಸಂಜೋಗ್ ಕಬ್ರೆ ಮಾತನಾಡಿ, ವಾರ್ಡ್ ಕಚೇರಿ ಆರಂಭಿಕ ಪತ್ತೆಹಚ್ಚುವಿಕೆಯನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ ಎಂದಿದ್ದಾರೆ. ಜನಸಂದಣಿಯನ್ನು ನಿರ್ವಹಿಸಲು ವಿಫಲವಾದರೆ ಮೀನು ಮಾರುಕಟ್ಟೆಗಳನ್ನು ಮುಚ್ಚುವುದಾಗಿ ವಾರ್ಡ್ ಅಧಿಕಾರಿಗಳು ಎಚ್ಚರಿಸಿದ್ದಾರೆ.