ಮಹಾನಗರ, ಅ. 4: ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೆ ದಿನೇ ಏರಿಕೆಯಾಗುತ್ತಿದೆ. ದಿನವೊಂದಕ್ಕೆ 200ಕ್ಕೂ ಮೇಲ್ಪಟ್ಟು ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿದ್ದು, 10 ದಿನಗಳ ಅವಧಿಯಲ್ಲಿ 3,255 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಮಾ. 22ರಿಂದ ಅ. 3ರ ವರೆಗೆ ಒಟ್ಟು 24,019 ಮಂದಿ ಸೋಂಕಿ ಗೊಳಗಾಗಿದ್ದಾರೆ. ಆರಂಭಿಕ ದಿನಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಸೋಂಕು ಪತ್ತೆಯಾದರೆ ಆಗಸ್ಟ್ ಬಳಿಕ ಸೋಂಕು ಹರಡುವಿಕೆಯ ಪ್ರಮಾಣ ಜಾಸ್ತಿಯಾಗುತ್ತಿದೆ. ಸೆಪ್ಟಂಬರ್ ಅನಂತರ ದಿನವೊಂದಕ್ಕೆ 200ಕ್ಕೂ ಹೆಚ್ಚು ಪ್ರಕರಣ ಕಂಡುಬಂದಿದ್ದು, ಸೆ. 26, 27ರಂದು ಕ್ರಮವಾಗಿ 420, 460 ಮಂದಿಯಲ್ಲಿ ಸೋಂಕು ಕಾಣಿಸಿದೆ. ಅ. 1ರಂದು ಈವರೆಗಿನ ಒಂದು ದಿನದ ಪ್ರಕರಣಗಳಲ್ಲೇ ಅತಿಹೆಚ್ಚು ಅಂದರೆ 493 ಮಂದಿ ಸೋಂಕಿಗೊಳಗಾಗಿದ್ದಾರೆ.
ಆದಷ್ಟು ಜಾಗ್ರತೆ ವಹಿಸಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 566 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 10 ದಿನಗಳ ಅವಧಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 74 ಆಗಿದ್ದು, ಇದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಸಾವನ್ನಪ್ಪಿದವರ ಪೈಕಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ಕೋವಿಡ್ ಸೋಂಕಿಗೊಳಗಾದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಗರ್ಭಿಣಿಯರು, ವೃದ್ಧರು, ಪುಟಾಣಿ ಮಕ್ಕಳು ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊರೊನಾ ಮಾರಕ. ಆದಷ್ಟು ಜಾಗರೂಕ ರಾಗಿರಬೇಕು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
5 ದಿನ-687 ಪಾಸಿಟಿವ್ : ಪ್ರಸ್ತುತ ಅತಿ ಗ್ರಾಮೀಣ ಭಾಗದಲ್ಲಿಯೂ ಸೋಂಕು ವ್ಯಾಪಿಸುತ್ತಿದೆ. ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಕೊರೊನಾ ಪರೀಕ್ಷೆ ವೇಳೆ ರ್ಯಾಟ್ ಪರೀಕ್ಷೆಯಲ್ಲಿ 5 ದಿನಗಳಲ್ಲಿ 687 ಮಂದಿಗೆ ಕೊರೊನಾ ದೃಢಪಟ್ಟಿದೆ. ಇಲ್ಲಿ ನಡೆಸಲಾದ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದ್ದು, ದೃಢ ಪ್ರಕರಣಗಳ ಸಂಖ್ಯೆ ಇನ್ನಷ್ಟು ಅಧಿಕಗೊಳ್ಳುವ ಸಾಧ್ಯತೆ ಇದೆ.
ಚಿಕಿತ್ಸಕರಿಗೇ ಕೋವಿಡ್ : ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾದಿಯರಿಗೂ ಕೋವಿಡ್ ಅಂಟಿಕೊಳ್ಳುತ್ತಿರುವುದರಿಂದ ಚಿಕಿತ್ಸೆಗೂ ಸಮಸ್ಯೆಯಾಗುತ್ತಿದೆ. ಕೋವಿಡ್ ರೋಗಿಗಳ ಉಪಚಾರದಲ್ಲಿ ತೊಡಗಿಸಿಕೊಂಡಿರುವ ವೈದ್ಯ ವಿದ್ಯಾರ್ಥಿಗಳಿಗೆ ಸೋಂಕು ದೃಢಪಡುತ್ತಿದೆ. ಈ ಹಿಂದೆ ವೈದ್ಯ ವಿದ್ಯಾರ್ಥಿಯೊಬ್ಬ ಕೋವಿಡ್ ಗೆ ಬಲಿಯಾಗಿದ್ದಾನೆ. ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ವೈದ್ಯ ವಿದ್ಯಾರ್ಥಿಗಳು ಕೋವಿಡ್ ಸೋಂಕಿ ಗೊಳಗಾಗಿದ್ದು,ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಸ್ಕ್ ಮರೆಯದಿರಿ : ಸೋಂಕು ವ್ಯಾಪಿಸಲು ಜನ ಕೋವಿಡ್ ನಿಯಮಗಳನ್ನು ಅನುಸರಿಸದಿರುವುದೇ ಕಾರಣವಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಅತಿ ಅಗತ್ಯ. ನಿಯಮ ಪಾಲನೆಯಿಂದ ನಮ್ಮನ್ನು, ನಮ್ಮ ಮನೆ, ಕಚೇರಿ ಸದಸ್ಯರನ್ನು ಮತ್ತು ಇಡೀ ಸಮಾಜವನ್ನು ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯ ಎಂದು ಆರೋಗ್ಯ ಇಲಾಖೆ ಆಗಾಗ್ಗೆ ಹೇಳುತ್ತಿದೆ.
ಜನರಿಂದ ಉತ್ತಮ ಸ್ಪಂದನೆ : ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾಡುತ್ತಿರುವ ಕೋವಿಡ್ ಪರೀಕ್ಷೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜನರು ಸ್ವಯಂ ಪ್ರೇರಣೆಯಿಂದ ಈ ಉಚಿತ ಪರೀಕ್ಷೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೊನಾ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. –
ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ