ಹೊಸದಿಲ್ಲಿ: ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆ ಕೋವಿಡ್ ಮತ್ತೆ ಏರಿಕೆಯಾಗತೊಡಗಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 35,952 ಪ್ರಕರಣಗಳು ದಾಖಲಾಗಿದ್ದು, 111 ಮಂದಿ ಅಸುನೀಗಿದ್ದಾರೆ. ವಿಶೇಷವಾಗಿ ಮುಂಬಯಿಯಲ್ಲಿ 5,185 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಬೃಹನ್ಮುಂಬಯಿ ಪಾಲಿಕೆ ವ್ಯಾಪ್ತಿಯಲ್ಲಿ ಜನರು ಕೋವಿಡ್ ನಿಯಮಗಳನ್ನು ಪಾಲಿಸದಿದ್ದರೆ ಮತ್ತೆ ಲಾಕ್‌ಡೌನ್ ಜಾರಿ ಮಾಡಬೇಕಾದ ಅಗತ್ಯವಿದೆ ಎಂದು ಮೇಯರ್ ಕಿಶೋರಿ ಪೆಂಡೇಕರ್ ಹೇಳಿದ್ದಾರೆ.
ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ಮತ್ತೆ ಸೋಂಕು ಪತ್ತೆ ಪರೀಕ್ಷೆಗಳನ್ನು ಬಿರುಸುಗೊಳಿಸಲು ನಿರ್ಧರಿಸಲಾಗಿದೆ. ವಸತಿ ಸಮುತ್ಛಯಗಳಿಂದಲೇ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಮೇಯರ್ ದೂರಿದ್ದಾರೆ. ಪುಣೆ ಪಾಲಿಕೆ ವ್ಯಾಪ್ತಿಯಲ್ಲಿ 24 ಗಂಟೆಗಳ ಕಾಲ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಅತೀ ಹೆಚ್ಚು: ದಿಲ್ಲಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 1,547 ಕೇಸುಗಳು ದೃಢಪಟ್ಟಿವೆ ಮತ್ತು ನಾಲ್ಕು ಮಂದಿ ಅಸುನೀಗಿದ್ದಾರೆ. 4 ತಿಂಗಳಿಗೆ ಹೋಲಿಕೆ ಮಾಡಿದರೆ ಇದು ಗರಿಷ್ಠ ಪ್ರಕರಣ. ಇದೇ ವೇಳೆ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಹೋಳಿ ಸಂದರ್ಭದಲ್ಲಿ 2 ದಿನಗಳ ಕಾಲ ಲಾಕ್‌ಡೌನ್ ಜಾರಿ ಮಾಡಲು ಸರಕಾರ ನಿರ್ಧರಿಸಿದೆ.
ನಿಲ್ಲದ ಏರಿಕೆ: ದೇಶದಲ್ಲಿ ಬುಧವಾರದಿಂದ ಗುರುವಾರದ ಅವಧಿಯಲ್ಲಿ 53,476 ಹೊಸ ಕೇಸುಗಳು ಮತ್ತು 251 ಮಂದಿ ಅಸುನೀಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,95,192ಕ್ಕೆ ಏರಿಕೆಯಾಗಿದೆ. ಹೀಗಾಗಿ, ಚೇತರಿಕೆ ಪ್ರಮಾಣ ಶೇ.95.28ಕ್ಕೆ ಕುಸಿದಿದೆ. 153 ದಿನಗಳಿಗೆ ಹೋಲಿಕೆ ಮಾಡಿದರೆ ಇದು ಗರಿಷ್ಠ ಏರಿಕೆ. ಕೇಂದ್ರ ಸರಕಾರ ನೀಡಿದ ಮಾಹಿತಿ ಪ್ರಕಾರ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸೋಂಕು ಏರಿಕೆಯಾಗುತ್ತಿದೆ.
ಹೆಚ್ಚಳವಾಗಲಿದೆ: ಕೋವಿಡ್ ಸೋಂಕು ಎಪ್ರಿಲ್ ಮಧ್ಯಭಾಗದಲ್ಲಿ ಹೆಚ್ಚಾಗಲಿದೆ ಎಂದು ಎಸ್‌ಬಿಐನ ಸಂಶೋಧನ ವರದಿ ಆತಂಕ ವ್ಯಕ್ತಪಡಿಸಿದೆ. ಮಾ.23ರ ವರೆಗಿನ ಪರಿಸ್ಥಿತಿ ಅಂದಾಜು ಮಾಡಿ ಈ ವರದಿ ಸಿದ್ಧಪಡಿ ಸಲಾಗಿದೆ. ಎರಡನೇ ಹಂತದ ಅಲೆಯ ಪ್ರಭಾವ 100 ದಿನಗಳ ವರೆಗೆ ಇರುತ್ತದೆ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.