ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಮತ್ತೂಮ್ಮೆ ಬಿರುಸಾಗಿರುವ ಸೋಂಕು 2ನೇ ಹಂತದ್ದಾಗಿದೆ. ಅದು ಕಡಿಮೆ ತೀವ್ರತೆಯದ್ದಾದರೂ, ಹೆಚ್ಚಿನ ರೀತಿಯಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಸೋಂಕು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ರವಿವಾರ 30,355, ಮುಂಬಯಿಯಲ್ಲಿ 3,775 ಸೋಂಕು ಪ್ರಕರಣ ದೃಢಪಟ್ಟಿದೆ.
ಈ ನಡುವೆ, ದೇಶದ 6 ರಾಜ್ಯಗಳಲ್ಲಿ ಹೊಸದಾಗಿ ವರದಿಯಾಗುತ್ತಿರುವ ಶೇ.83ರಷ್ಟು ಸೋಂಕು ಕೇಸುಗಳು ಇವೆ. ಶನಿವಾರದಿಂದ ರವಿವಾರದ ಅವಧಿಯಲ್ಲಿ ದೇಶದಲ್ಲಿ 43,846 ಹೊಸದಾಗಿ ಸೋಂಕು ದೃಢಪಟ್ಟಿದೆ ಮತ್ತು 197 ಮಂದಿ ಅಸುನೀಗಿದ್ದಾರೆ. ಸತತ 11ನೇ ದಿನ ಈ ಏರಿಕೆಯಾಗುತ್ತಿದೆ. ಚೇತರಿಕೆ ಪ್ರಮಾಣ ಶೇ.95.96ಕ್ಕೆ ಕುಸಿತವಾಗಿದೆ. ಸಕ್ರಿಯ ಸೋಂಕು ಸಂಖ್ಯೆ 3,09,087ಕ್ಕೆ ಏರಿಕೆಯಾಗಿದೆ.
ಮರೆಯಬೇಡಿ: ಉತ್ತರಾಖಂಡದಲ್ಲಿ ನಡೆಯಲಿರುವ ಕುಂಭ ಮೇಳದ ವೇಳೆ ಸೋಂಕು ಹರಡದಂತೆ ಕ್ರಮ ಕೈಗೊಳ್ಳಿ. ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ನಡೆಸಿ ಎಂದು ಕೇಂದ್ರ ಸರಕಾರ, ಉತ್ತರಾಖಂಡ ಸರಕಾರಕ್ಕೆ ಪತ್ರ ಮೂಲಕ ಸೂಚಿಸಿದೆ. ಜತೆಗೆ ಅಗತ್ಯ ನೆರವು ನೀಡುವುದಾಗಿ ಹೇಳಿದೆ.
ನಾಳೆಗೆ ಲಾಕ್‌ಡೌನ್ ಜಾರಿಯಾಗಿ ವರ್ಷ :
ಕೋವಿಡ್ ಹಿನ್ನೆಲೆಯಲ್ಲಿ ದೇಶಾದ್ಯಂತ 2020ರ ಮಾ. 23ಕ್ಕೆ ಲಾಕ್‌ಡೌನ್ ಪ್ರಕಟಿಸಲಾಗಿತ್ತು. ಮಂಗಳವಾರಕ್ಕೆ (ಮಾ.23) ಸರಿಯಾಗಿ ಒಂದು ವರ್ಷ ಪೂರ್ತಿಯಾಗಲಿದೆ. ಅದಕ್ಕೆ ಪೂರ್ವ ಭಾವಿಯಾಗಿ 2020ರ ಮಾ. 21ರಂದು ಜನತಾ ಕರ್ಫ್ಯೂ ಜಾರಿಯಾಗಿತ್ತು. ರವಿವಾರಕ್ಕೆ ಅದು ಜಾರಿಯಾಗಿ 1 ವರ್ಷ ಪೂರ್ತಿಗೊಂಡಿದೆ. ಮೊದಲ ಹಂತದ ಲಾಕ್‌ಡೌನ್ 2020ರ ಮಾ.23ರಿಂದ ಎ.14ರ ವರೆಗೆ, 2ನೇ ಹಂತ ಎ.15 ರಿಂದ ಮೇ 3, ಮೇ 4ರಿಂದ 17ರ ವರೆಗೆ 3ನೇ ಮತ್ತು 2020 ಮೇ 18ರಿಂದ 2020 ಮೇ 31ರ ವರೆಗೆ ಕೊನೆಯ ಹಂತದ ಲಾಕ್‌ಡೌನ್ ಜಾರಿಯಾಗಿತ್ತು.