Advertisement

ಜಿಲ್ಲೆಯ 119 ಗ್ರಾಮದಲ್ಲಿದ್ದಾರೆ ಸೋಂಕಿತರು

11:27 PM May 22, 2021 | Team Udayavani |

ವರದಿ :  ನಾಗರಾಜ್‌ ಹರಪನಹಳ್ಳಿ

Advertisement

ಕಾರವಾರ: ಉತ್ತರ ಕನ್ನಡದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ನಾಲ್ಕಾರು ದಿನಗಳಿಗೆ ಹೋಲಿಸಿದರೆ ಸ್ವಲ್ಪ ಇಳಿಮುಖವಾಗಿದೆ. ಆದರೂ ಶುಕ್ರವಾರ ಲಭ್ಯವಾದ ಮಾಹಿತಿ ಪ್ರಕಾರ ಈ ದಿನ ಪತ್ತೆಯಾದ ಕೋವಿಡ್‌ ಪೀಡಿತರ ಸಂಖ್ಯೆ 681. ಜಿಲ್ಲೆಯ 119 ಗ್ರಾಮಗಳಲ್ಲಿ ಕೋವಿಡ್‌ ಬಾಧಿತರಿದ್ದಾರೆ.

ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ 26 ಕೋವಿಡ್‌ ಕಾಳಜಿ ಕೇಂದ್ರಗಳನ್ನು ತೆರೆದಿದ್ದರೂ, ಕೋವಿಡ್‌ ಪೀಡಿತರು ಹೆಚ್ಚಾಗಿ ಹೋಂಐಸೋಲೇಶನ್‌ (ಗೃಹಬಂಧನ)ದಲ್ಲಿದ್ದಾರೆ. ಸಿದ್ದಾಪುರ ಕೋವಿಡ್‌ ಕಾಳಜಿ ಕೇಂದ್ರದಲ್ಲಿ 15 ಜನ ಹಾಗೂ ಕಾರವಾರ ನಗರದ ಕೋವಿಡ್‌ ಕೇರ್‌ ಕೇಂದ್ರದಲ್ಲಿ ಒಬ್ಬರು ದಾಖಲಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹಾಸ್ಟೆಲ್‌ಗ‌ಳನ್ನು ಕೋವಿಡ್‌ ಕೇರ್‌ ಕೇಂದ್ರಗಳಾಗಿ ಸಿದ್ಧತೆಯಲ್ಲಿ ಇಡಲಾಗಿದೆ. ಆದರೆ ಈ ಸಲ ಯಾರು ಕೇರ್‌ ಸೆಂಟರ್‌ಗಳಿಗೆ ಹೋಗಿಲ್ಲ. ಉತ್ತರ ಕನ್ನಡ 119 ಗ್ರಾಮಗಳ ಪೈಕಿ ಅತೀ ಹೆಚ್ಚು ಕೋವಿಡ್‌ ಪೀಡಿತ ಗ್ರಾಮಗಳಲ್ಲಿ ಡಬಲ್‌ ಡಿಜಿಟ್‌ ಕೋವಿಡ್‌ ರೋಗಿಗಳನ್ನು ಹೊಂದಿದ ಸಾಲಿನಲ್ಲಿ ಕೆಲ ಗ್ರಾಮಗಳಿವೆ.

ಕುಂದರಗಿಯಲ್ಲಿ 12 ಜನ, ಚಂದಗುಳಿಯಲ್ಲಿ 27, ಶೀಗೆಮನೆ ಹುಮ್ಮಚಗಿಯಲ್ಲಿ 20, ಶಿರಸಿಯ ಹುತಗಾರದಲ್ಲಿ 10, ಸಿದ್ದಾಪುರದ ಕವಂಚೂರಿನಲ್ಲಿ 29, ಕೋಲಸಿರ್ಸಿಯಲ್ಲಿ 29, ಕುಮಟಾದ ಹೆಗಡೆಯಲ್ಲಿ 11, ಹಳಿಯಾಳದ ಹಾವಗಿಯಲ್ಲಿ 13 ಜನ ಕೋವಿಡ್‌ನಿಂದ ಬಾಧಿತರಾಗಿದ್ದಾರೆ. ಅಂಕೋಲಾ ತಾಲೂಕಿನ 11 ಗ್ರಾಮಗಳಲ್ಲಿ, ಭಟ್ಕಳದ 1 ಗ್ರಾಮ, ದಾಂಡೇಲಿಯ 3, ಹಳಿಯಾಳದ 14, ಹೊನ್ನಾವರದ 22, ಜೊಯಿಡಾದ 3, ಕುಮಟಾದ 10, ಸಿದ್ದಾಪುರದ 18, ಶಿರಸಿಯ 21, ಯಲ್ಲಾಪುರದ 12 ಗ್ರಾಮಗಳಲ್ಲಿ ಕೋವಿಡ್‌ ಪೀಡಿತರು ಇದ್ದಾರೆ. ಬಹುತೇಕ ಗ್ರಾಮಗಳಲ್ಲಿ ಕೋವಿಡ್‌ ಬಾಧಿತರ ಸಂಖ್ಯೆ 9 ಸಂಖ್ಯೆಯನ್ನು ದಾಟಿಲ್ಲ.

ಉತ್ತರ ಕನ್ನಡ ಜಿಲ್ಲೆಯ 494 ಹಳ್ಳಿಗಳಲ್ಲಿ ಕೋವಿಡ್‌ ಪೀಡಿತರು ಕಾಣಿಸಿಕೊಂಡಿದ್ದಾರೆ. 272 ಸಾವು: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆಯಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‌ ಕೊರತೆ ಆಗಿಲ್ಲ. ಆದರೆ ಸಾವಿನ ಸಂಖ್ಯೆ ಮಾತ್ರ ಎರಡನೇ ಅಲೆಯಲ್ಲಿ ಜೋರಾಗಿದೆ. ಮೊದಲ ಅಲೆಯಲ್ಲಿ 191 ಜನ ಮೃತಪಟ್ಟಿದ್ದರು. ಆದರೆ ಎರಡನೇ ಅಲೆಯಲ್ಲಿ ಮೇ 20ರ ಮಧ್ಯರಾತ್ರಿ ತನಕ 272 ಜನ ಮೃತಪಟ್ಟಿದ್ದಾರೆ. ಒಟ್ಟು ಎರಡೂ ಅಲೆಗಳಲ್ಲಿ ಮೃತಪಟ್ಟವರ ಸಂಖ್ಯೆ 463 ಆಗಿದೆ. ಇದರಲ್ಲಿ ಹಲವರು ಯುವಕರು ಸಹ ಸಾವನ್ನಪ್ಪಿದ್ದಾರೆ. ಪುಣೆ ಹಾಗೂ ಬೆಂಗಳೂರಿನಿಂದ ಬಂದವರಲ್ಲಿ ಕೆಲವರು ಸಾವನ್ನಪ್ಪಿದ್ದಾರೆ.

Advertisement

ವಯೋವೃದ್ಧರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದವರಿಗೆ ಕೋವಿಡ್‌ ಸೇರಿಕೊಂಡ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ಸಾವಿನ ಸಂಖ್ಯೆ ದಿಗ್ಭ್ರಮೆ ಹುಟ್ಟಿಸುವಂತಿದೆ. ಮೇ 20ರಂದು ಒಂದೇ ದಿನದಲ್ಲಿ (ಮಧ್ಯರಾತ್ರಿ ತನಕ) ಮೃತಪಟ್ಟವರ ಸಂಖ್ಯೆ 16. ಹೊನ್ನಾವರ, ಶಿರಸಿಯಲ್ಲಿ ಸಾವು ಹೆಚ್ಚುತ್ತಿವೆ. ಸಮಾಧಾನಕರ ಸಂಗತಿ ಎಂದರೆ ಗುರುವಾರ ಒಂದೇ ದಿನದಲ್ಲಿ 1069 ಜನ ಕೋವಿಡ್‌ನಿಂದ ಮುಕ್ತರಾಗಿ ಬಿಡುಗಡೆಯಾಗಿ, ನಿರಾಳವಾಗಿದ್ದಾರೆ. ಈ ತನಕ 29769ಜನ ಗುಣಮುಖರಾಗಿದ್ದಾರೆ. 430 ಜನ ಈಗಲೂ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 6150 ಜನ ಕೋವಿಡ್‌ ನಿಂದ ಗೃಹಬಂಧನ (ಹೋಂ ಐಸೋಲೇಶನ್‌) ದಲ್ಲಿದ್ದಾರೆ. ಈತನಕ ಜಿಲ್ಲೆಯಲ್ಲಿ 36382 ಜನ ಕೋವಿಡ್‌ ಪೀಡೆಗೆ ತುತ್ತಾಗಿದ್ದಾರೆ.

ಉತ್ತರ ಕನ್ನಡ ರಾಜ್ಯದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡಿಕೊಂಡ ಜಿಲ್ಲೆ ಎಂಬ ಅಪಕೀರ್ತಿಯನ್ನು ಇದೀಗ ತೊಡೆಯಲು ಪ್ರಯತ್ನಗಳು ಸಾಗಿದೆ. ಕಾರವಾರ ಮೆಡಿಕಲ್‌ ಕಾಲೇಜು ಹಾಗೂ ಶಿರಸಿಯಲ್ಲಿ ಆಕ್ಸಿಜನ್‌ ಪ್ಲಾಂಟ್‌ ಹಾಗೂ ಕೋವಿಡ್‌ ಟೆಸ್ಟ ಕೇಂದ್ರವನ್ನು ಶಿರಸಿಯಲ್ಲಿ ಪ್ರಾರಂಭಿಸುವ ಯತ್ನ ಸಾಗಿವೆ. ಜೊತೆಗೆ ಹಲವು ಕಂಟೋನ್ಮೆಂಟ್‌ ಝೋನ್‌ಗಳಾಗಿವೆ. ಮೇ 22ರಿಂದ 24 ರವರೆಗೆ ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್‌ ಇರಲಿದೆ. ಕೆಲ ಕಡೆ ಕೆಲ ಗ್ರಾಮಪಂಚಾಯತ್‌ಗಳು, ಕೆಲ ನಗರ ಪ್ರದೇಶಗಳು ಸೀಲ್‌ಡೌನ್‌ ಆಗಿವೆ. ಲಸಿಕೆ ನೀಡಿಕೆ ನಿಧಾನ: ಲಸಿಕೆ ನೀಡಿಕೆ ನಿಧಾನಗತಿಯಲ್ಲಿದೆ. ದಿನಕ್ಕೆ ಈ ಸಂಖ್ಯೆ 200 ದಾಟುತ್ತಿಲ್ಲ. ಶುಕ್ರವಾರ 178 ಜನರಿಗೆ ಲಸಿಕೆ ಹಾಕಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 280712 ಜನರಿಗೆ ಲಸಿಕೆ ಹಾಕಲಾಗಿದೆ. ಜಿಲ್ಲೆಯಲ್ಲಿ ಇನ್ನೂ 10 ಲಕ್ಷ ಜನರಿಗೆ ಲಸಿಕೆ ನೀಡಬೇಕಾಗಿದೆ. ಮೊದಲ ಡೋಸ್‌ ಪಡೆದವರು 2,17582 ಇದ್ದರೆ, ಎರಡನೇ ಡೋಸ್‌ ಪಡೆದವರು 63130 ಜನರಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಸತತ ಪ್ರಯತ್ನವನ್ನು ಮುಂದುವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next