ನವದೆಹಲಿ: ಭಾರತದಲ್ಲಿ ಜನವರಿ ಅಂತ್ಯದ ವೇಳೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದ್ದು, ದಿನಂಪ್ರತಿ 4ರಿಂದ 8 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದ್ದಿರುವುದಾಗಿ ಐಐಟಿ ಕಾನ್ಪುರ್ ಪ್ರೊ. ಮಣೀಂದ್ರ ಅಗರ್ವಾಲ್ ಎಚ್ಚರಿಸಿದ್ದಾರೆ.
ಕಠಿಣ ಲಾಕ್ ಡೌನ್ ಕ್ರಮವನ್ನು ಜಾರಿಗೆ ತಂದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗಲು ಸಾಧ್ಯವಾಗಲಿದೆ. ಆದರೆ ಇದರಿಂದ ಆರೋಗ್ಯ ವ್ಯವಸ್ಥೆಗೆ ಹೊರೆಯಾಗುವುದಿಲ್ಲ ಎಂದು ಅಗರ್ವಾಲ್ ಹೇಳಿದರು.
ಒಮಿಕ್ರಾನ್ ಭೀತಿಯ ನಡುವೆಯೇ ನವದೆಹಲಿ ಮತ್ತು ಮುಂಬಯಿಯಲ್ಲಿ ಇನ್ನು ಹತ್ತು ದಿನಗಳ ಕಾಲಾವಧಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಅಧಿಕವಾಗಲಿದೆ. ಈ ಮೊದಲು ದೇಶದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಎರಡನೇ ಅಲೆ ಹರಡಿದಂತೆ, ಮಾರ್ಚ್ ನೊಳಗೆ ದೇಶದಲ್ಲಿ 3ನೇ ಅಲೆ ಕಾಣಿಸಿಕೊಳ್ಳಲಿದೆ ಎಂಬುದನ್ನು ನಿರೀಕ್ಷಿಸುವುದಿಲ್ಲ ಎಂದು ಡಾ. ಅಗರ್ವಾಲ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಮತ್ತು ನವದೆಹಲಿಯಲ್ಲಿ ಜನವರಿ ಅಂತ್ಯದ ವೇಳೆಗೆ 30,000ದಿಂದ 50 ಸಾವಿರದವರೆಗೆ ದಿನಂಪ್ರತಿ ಕೋವಿಡ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಭಾರತದಲ್ಲಿ ಒಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ ಜನವರಿ ಅಂತ್ಯದಲ್ಲಿ ಅಥವಾ ಫೆಬ್ರುವರಿಯಲ್ಲಿ ಅಧಿಕವಾಗಲಿದೆ ಎಂದು ಈ ಮೊದಲು ಡಾ.ಕ್ರಿಸ್ಟೋಫರ್ ಮುರ್ರೈ ತಿಳಿಸಿದ್ದರು.
ಜನವರಿ ಅಂತ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಲಿದ್ದು, ದೇಶಾದ್ಯಂತ ಮಾರ್ಚ್ ವೇಳೆಗೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗಲಿದೆ. ಯಾಕೆಂದರೆ ಒಮಿಕ್ರಾನ್ ಸೋಂಕಿನಲ್ಲಿನ ತೀವ್ರತೆ ಕಡಿಮೆಯಾಗಲಿದೆ ಎಂದು ವರದಿ ತಿಳಿಸಿದೆ.