Advertisement

ಹೆಚ್ಚುತ್ತಿದೆ ಕೋವಿಡ್ ಸಾವು

12:10 AM Jul 30, 2021 | Team Udayavani |

ಜಿನೇವಾ/ಹೊಸದಿಲ್ಲಿ: ಸ್ವಲ್ಪಮಟ್ಟಿಗೆ ಇಳಿಮುಖವಾಗಿದ್ದ ಕೊರೊನಾ ಸೋಂಕು ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯು ಈಗ ಮತ್ತೆ ಏರುಮುಖವಾಗಿ ಸಾಗುತ್ತಿರುವುದು ಇಡೀ ಮನುಕುಲಕ್ಕೇ ಎಚ್ಚರಿಕೆಯ ಕರೆಗಂಟೆಯಾಗಿದೆ. ಜುಲೈ 19ರಿಂದ 25ರ ವರೆಗಿನ ಅವಧಿಯಲ್ಲಿ ಜಾಗತಿಕ ಕೊರೊನಾ ಸಾವಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿರುವುದು ಕಳವಳ ಮೂಡಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)  ಗುರುವಾರ ಹೇಳಿದೆ.

Advertisement

19ರಿಂದ 25ರ ಅವಧಿಯಲ್ಲಿ ವಿಶ್ವಾದ್ಯಂತ 69 ಸಾವಿರ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅಂದರೆ ಅದರ ಹಿಂದಿನ ವಾರಕ್ಕೆ ಹೋಲಿಸಿದರೆ ಇದು ಶೇ.21ರಷ್ಟು ಏರಿಕೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ. ಈ ಪೈಕಿ ಹೆಚ್ಚಿನ ಸಾವು ಸಂಭವಿಸಿರುವುದು ಅಮೆರಿಕ ಮತ್ತು ಆಗ್ನೇಯ ಏಷ್ಯಾ ಭಾಗಗಳಲ್ಲಿ. ಇದೇ ವೇಳೆ, ಸೋಂಕು ದೃಢಪಟ್ಟವರ ಸಂಖ್ಯೆಯೂ ಜಾಗತಿಕವಾಗಿ ಏರಿಕೆಯಾಗಿದ್ದು, ಜು.19ರಿಂದ 25ರ ವರೆಗೆ 38 ಲಕ್ಷ ಮಂದಿಗೆ ಸೋಂಕು ತಗಲಿದೆ ಎಂದೂ ವರದಿ ಹೇಳಿದೆ.

ವೀಕೆಂಡ್‌ ಕರ್ಫ್ಯೂ ಜಾರಿ: ಕೇರಳ ಸರಕಾರ ಜು.31 ಮತ್ತು ಆ.1ರಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದೆ. ಪ್ರತೀ  ದಿನ ಕೊರೊನಾ ಪ್ರಕರಣಗಳ ಸಂಖ್ಯೆ 22 ಸಾವಿರಕ್ಕೂ ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್‌ ಲಾಕ್‌ಡೌನ್‌ ಘೋಷಿಸಲಾಗಿದೆ. ಇದೇ ವೇಳೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ಕೇರಳ ಸರಕಾರಕ್ಕೆ ಪತ್ರ ಬರೆದು, ಇತ್ತೀಚೆಗಿನ ಕೆಲವು ಸೂಪರ್‌ಸ್ಪ್ರೆಡರ್‌ ಕಾರ್ಯಕ್ರಮಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ರಾಜ್ಯಾದ್ಯಂತ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುವಂತೆ ನೋಡಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ.

ಕೇರಳಕ್ಕೆ ತಜ್ಞರ ತಂಡ ರವಾನೆ :

ಕೇರಳದಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಸತತ 2ನೇ ದಿನವೂ ದೇಶದ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಗೆ ಕಾರಣವಾಗಿದೆ. ಬುಧವಾರದಿಂದ ಗುರುವಾರಕ್ಕೆ 24 ಗಂಟೆಗಳಲ್ಲಿ 43,509 ಹೊಸ ಪ್ರಕರಣ ಪತ್ತೆಯಾಗಿದ್ದು, 640 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 4,03,840ಕ್ಕೇರಿಕೆಯಾಗಿದೆ. ಈ ಪೈಕಿ ಕೇರಳದ ಪಾಲು ಶೇ.37.1ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕೇರಳದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, 6 ಮಂದಿ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿದೆ.

Advertisement

ವಯನಾಡ್‌ನ‌ ವೈಥಿರಿಯಲ್ಲಿ ಲಸಿಕೆ ವಿತರಣೆ ಪೂರ್ಣ :

ಕೇರಳದ ವಯನಾಡ್‌ ಜಿಲ್ಲೆಯ ವೈಥಿರಿಯಲ್ಲಿ ಶೇ.100ರಷ್ಟು ಜನಸಂಖ್ಯೆಗೆ ಲಸಿಕೆ ವಿತರಣೆ ಮಾಡಲಾಗಿದೆ. ಈ ಮೂಲಕ ಲಸಿಕೆ ವಿತರಣೆ ಪೂರ್ಣಗೊಂಡಿರುವ ಮೊದಲ ಪ್ರವಾಸಿತಾಣ ಎಂಬ ಖ್ಯಾತಿಗೆ ವೈಥಿರಿ ಪಾತ್ರವಾಗಿದೆ. ಎಲ್ಲ ಪ್ರವಾಸಿ ತಾಣಗಳನ್ನೂ ರಿಸ್ಕ್ ಮುಕ್ತಗೊಳಿಸಬೇಕೆಂಬ ಅಭಿಯಾನವನ್ನು ಮುಂದುವರಿಸಲಾಗಿದೆ ಎಂದು ಸರಕಾರ ತಿಳಿಸಿದೆ. ಏತನ್ಮಧ್ಯೆ, ಮಧ್ಯಪ್ರದೇಶದಲ್ಲಿ ಈವರೆಗೆ ಸುಮಾರು 3 ಕೋಟಿ ಜನರಿಗೆ ಲಸಿಕೆ ವಿತರಣೆ ಪೂರ್ಣಗೊಂಡಿದೆ. ಇಲ್ಲಿ ಲಸಿಕೆ ಪಡೆಯುವ ಅರ್ಹ ಜನಸಂಖ್ಯೆ 5.40 ಕೋಟಿಯಿದ್ದು, ಸದ್ಯದಲ್ಲೇ ನಾವು ಶೇ.100ರಷ್ಟು ಮಂದಿಗೆ ಲಸಿಕೆ ವಿತರಣೆ ಪೂರ್ಣಗೊಳಿಸಲಿದ್ದೇವೆ ಎಂದು ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ಕೇರಳ ಸರಕಾರವು ಮಾರ್ಗಸೂಚಿಗಳನ್ನು ಪಾಲಿಸಲೇ ಇಲ್ಲ. ತನ್ನದೇ ಆದ “ಸ್ವಂತ ಫಾರ್ಮುಲಾ’ವನ್ನು ಬಳಸಿತು. ಈಗ ಅವರ ಫಾರ್ಮುಲಾ ವಿಫ‌ಲವಾಗಿರುವುದು ಜಗಜ್ಜಾಹೀರಾಗುತ್ತಿದೆ. –ವಿ. ಮುರಳೀಧರನ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next