ನವದೆಹಲಿ: ಇಡೀ ದೇಶಾದ್ಯಂತ ಕೊರೊನಾ ಹಾವಳಿ ತೀವ್ರವಾಗಿ ಮುಂದುವರಿಯುತ್ತಲೇ ಇದೆ. ದಿನೇದಿನೇ ಪ್ರಕರಣಗಳ ಸಂಖ್ಯೆ ಏರುತ್ತಲೇ ಇರುವುದರಿಂದ ಆತಂಕ ಹೆಚ್ಚಿದೆ. ಶನಿವಾರದಿಂದ ಭಾನುವಾರದ 24 ಗಂಟೆ ಅವಧಿಯಲ್ಲಿ ಒಟ್ಟು 62,714 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದು ಕಳೆದ ಅಕ್ಟೋಬರ್ ನಂತರ ಗರಿಷ್ಠ ಏರಿಕೆಯಾಗಿದೆ. 2020ರ ಅಕ್ಟೋಬರ್‌ನಲ್ಲಿ ದಿನವೊಂದರಲ್ಲಿ 63,371ಪ್ರಕರಣಗಳು ದಾಖಲಾಗಿದ್ದವು. ಇದೇ ಇದುವರೆಗೆ ದಿನವೊಂದರಲ್ಲಿ ಕಂಡುಬಂದ ಗರಿಷ್ಠ ಸೋಂಕಿನ ಸಂಖ್ಯೆ. ಕಳೆದ 24 ಗಂಟೆಗಳಲ್ಲಿ ಒಟ್ಟು 312 ಮಂದಿ ಸಾವನ್ನಪ್ಪಿದ್ದಾರೆ. ಇದು 3 ತಿಂಗಳಲ್ಲೇ ಗರಿಷ್ಠ ಮರಣ ಪ್ರಮಾಣ.
ಸದ್ಯ ದೇಶದ ಕೊರೊನಾ ರಾಜಧಾನಿಯೆನಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ ಪ್ರಸ್ತುತ 35,726 ಹೊಸ ಪ್ರಕರಣಗಳು ಕಂಡುಬಂದಿವೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 37,776ಕ್ಕೆ ಮುಟ್ಟಿದೆ. ಹೊಸತಾಗಿ ಮೃತಪಟ್ಟವರು 166 ಮಂದಿ.
ಇದೇ ವೇಳೆ, ದೇಶದಲ್ಲಿ ಶುರುವಾಗಿರುವ ಲಸಿಕಾ ಪ್ರಕ್ರಿಯೆಯಲ್ಲಿ ಈವರೆಗೆ 6 ಕೋಟಿಗೂ ಹೆಚ್ಚಿನ ಮಂದಿಗೆ (ಒಟ್ಟು 6,02,69,782 ಜನರಿಗೆ) ಲಸಿಕೆ ನೀಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೆಹಲಿಯಲ್ಲಿ ನಿರ್ಬಂಧ: ಕೊರೊನಾ ಸೋಂಕಿನ ಪ್ರಮಾಣಗಳು ಏರುತ್ತಿದ್ದಂತೆ ದೆಹಲಿ ಸರ್ಕಾರ ಎಚ್ಚೆತ್ತುಕೊಂಡಿದೆ. ಅಲ್ಲಿನ ವಿಪತ್ತು ನಿರ್ವಹಣಾ ಸಮಿತಿ, ತೆರೆದ ಜಾಗದಲ್ಲಿ ನಡೆಯುವ ವಿವಾಹಗಳಲ್ಲಿ 200 ಅತಿಥಿಗಳು, ಒಳಾಂಗಣದಲ್ಲಿ ನಡೆಯುವ ವಿವಾಹ ಮತ್ತಿತರೆ ಕಾರ್ಯಕ್ರಮಗಳಿಗೆ ಕೇವಲ 100 ವ್ಯಕ್ತಿಗಳು ಪಾಲ್ಗೊಳ್ಳಲು ಅನುಮತಿ ನೀಡಿದೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಇದನ್ನೂ ಓದಿ :ಮೂರೂ ಸರಣಿಗೆ ಭಾರತವೇ ಸರದಾರ : ಸೋತರೂ ಸ್ಯಾಮ್ ಕರನ್ ಸಾಹಸಕ್ಕೊಂದು ಸಲಾಂ!
25 ಐಐಟಿ ವಿದ್ಯಾರ್ಥಿಗಳಿಗೆ ಸೋಂಕು: ಗುಜರಾತ್‌ನ ಎರಡು ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಅಹ್ಮದಾಬಾದ್‌ನ ಐಐಎಂ-ಎನಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿ 40ಕ್ಕೂ ಅಧಿಕ ಮಂದಿಗೆ ಹಾಗೂ ಗಾಂಧಿನಗರ ಐಐಟಿಯ 25 ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದಾರೆ.
ಲಾಕ್‌ಡೌನ್ ಮಾರ್ಗಸೂಚಿಗೆ ಉದ್ಧವ್ ಸೂಚನೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಲಾಕ್‌ಡೌನ್ ಮಾರ್ಗಸೂಚಿಗಳನ್ನು ತಯಾರಿಸುವಂತೆ ತಮ್ಮ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ. ಇದರಿಂದ ಆ ರಾಜ್ಯದಲ್ಲಿ ಸದ್ಯದಲ್ಲೇ ಲಾಕ್‌ಡೌನ್ ಜಾರಿಗೊಳ್ಳುವ ಸಾಧ್ಯತೆಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಅಲ್ಲದೆ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗಾಗಿ ಹೆಚ್ಚು ಹಾಸಿಗೆ, ಆಕ್ಸಿಜನ್ ವ್ಯವಸ್ಥೆ, ಔಷಧಗಳ ಏರ್ಪಾಟನ್ನು ಮಾಡಿಕೊಳ್ಳುವಂತೆಯೂ ಸೂಚಿಸಿದ್ದಾರೆಂದು ಹೇಳಲಾಗಿದೆ.