ಹಾಸನ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ, ದಿನೆ ಹೆಚ್ಚಳವಾಗುತ್ತಿರುವುದು ಜನರನ್ನು ತಲ್ಲಣ ಗೊಳಿಸಿದೆ. ಈ ಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗಲು ಕಾರಣವೇನು ? ಜನರಲ್ಲಿ ಜಾಗೃತಿ ಮೂಡಿಲ್ಲವೇ ? ರೋಗ ಹರಡುವುದನ್ನು ನಿಯಂತ್ರಿಸುವುದು ಹೇಗೆ ಎಂಬ ಪ್ರಶ್ನೆಗಳು ಕಾಡುತ್ತಿವೆ.
ಅರಿವು ಮೂಡಿಸಿದ ಸರ್ಕಾರ: ಲಾಕ್‌ಡೌನ್ ತೆರವು ಗೊಳಿಸಿದ ನಂತರ ಕೊರೊನಾ ಸೋಂಕು ನಿಯಂತ್ರಣ ತಪ್ಪಿತು ಎಂಬುದು ಸಾಮಾನ್ಯ ಅನಿಸಿಕೆ. ಆದರೆ ಜನರು ಮುಂಜಾಗ್ರತೆ ವಹಿಸಿ ವ್ಯವಹರಿಸಬೇಕೆಂದು ಸಾಕಷ್ಟು ಅರಿವು ಮೂಡಿಸುವ ಕೆಲಸವನ್ನು ಸರ್ಕಾರವಂತೂ ಮಾಡಿದೆ. ಈಗ ಪ್ರತಿಯೊಬ್ಬರಿಗೂ ಕೋವಿಡ್ ಭಯ ಇದ್ದೇ ಇದೆ. ವ್ಯವಸ್ಥಿತವಾಗಿ ಮಾಸ್ಕ್ ಧರಿಸುತ್ತಿಲ್ಲವಾದರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂಬುದು ಪ್ರತಿಯೊಬ್ಬರೂ ಗೊತ್ತಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊ ಳ್ಳುವುದನ್ನು ಮಾತ್ರ ಜನರು ಬಹುತೇಕ ಮರೆತಂತಿದೆ.
ಸಾಮಾಜಿಕ ಅಂತರ ಮರೆತ ಜನ: ಕೋವಿಡ್ ಹರ ಡುವ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿದೆ. ಗ್ರಾಮೀಣ ಮಟ್ಟದಲ್ಲೂ ಅರಿವು ಮೂಡಿಸುವ ಕೆಲಸ ವನ್ನು ಆಶಾ ಕಾರ್ಯಕರ್ತೆಯರು ಮಾಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಹೊರಗಿನವರು ಊರಿಗೆ ಬಂದರೆ ಜನರು ಸ್ವಯಂ ಪ್ರೇರಿತರಾಗಿ ದೂರು ನೀಡುತ್ತಿದ್ದರು. ಕ್ವಾರಂಟೈನ್ ನಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಜನ ಸಂದಣಿಯಲ್ಲಿ ಸೇರಿದರೆ ಕೊರೊನಾ ಹರಡುತ್ತದೆ ಎಂಬುದು ಜನರಿಗೆ ಗೊತ್ತಿದೆ. ಹಾಗಾಗಿಯೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿಲ್ಲ. ಆದರೆ ವ್ಯವಹರಿಸುವಾಗ ಮಾತ್ರ ವ್ಯವಸ್ಥಿತವಾಗಿ ಮಾಸ್ಕ್ ಧರಿಸುವುದನ್ನು ಹಾಗೂ ಅಂತರ ಕಾಯ್ದುಕೊಳ್ಳುವುದನ್ನು ಮರೆಯುತ್ತಾರೆ.
ಆಘಾತಕಾರಿ ಸಂಗತಿ: ಕೋವಿಡ್ ಲಕ್ಷಣಗಳು ಕಾಣಿಸಿಕೊಂಡರೂ ಪರೀಕ್ಷೆಗೊಳಪಡದೆ ಉಪೇಕ್ಷೆ ಮಾಡುತ್ತಿ ದ್ದಾರೆ. ಜನರ ಬೇಜವಾಬ್ದಾರಿತನದಿಂದಲೇ ಕೋವಿಡ್ ಶರವೇಗದಲ್ಲಿ ಹರಡುತ್ತಿದೆ ಎಂಬುದು ಸಾಮಾನ್ಯವಾಗಿ ಕೇಳಿ ಬರುತ್ತಿರುವ ಆರೋಪ. ಇದು ಬಹುತೇಕ ಸತ್ಯವೂ ಹೌದು. ಈಗಾಗಲೇ 7214 ಜನರಿಗೆ ಸೋಂಕು ತಗುಲಿದ್ದು, 177 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಮರಣ ಪ್ರಮಾಣವು ಶೇ. 2.5ನ್ನು ಮೀರಿರುವುದು ಆಘಾತಕಾರಿ ಸಂಗತಿ.
ಜನತೆ ಮುಂಜಾಗ್ರತೆ ವಹಿಸಿ: ಲಾಕ್‌ಡೌನ್ ಅವಧಿಯಲ್ಲಿದಂತೆ ಜನರು ಈಗ ಸ್ವಯಂ ಪ್ರೇರಿತವಾಗಿ ಮನೆಯಿಂದ ಅನಗತ್ಯವಾಗಿ ಹೊರಬರುವುದನ್ನು ತಡೆಯ ದಿದ್ದರೆ, ಅನಿವಾರ್ಯವಾಗಿ ಮನೆಯಿಂದ ಹೊರ ಹೋಗಬೇಕಾಗಿದ್ದರೂ ಕಡ್ಡಾಯವಾಗಿ ಮತ್ತು ಬಾಯಿ ಮತ್ತು ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ, ಯಾವುದೇ ವಸ್ತು ವನ್ನು ಮುಟ್ಟಿದ ನಂತರ ಕೈತೊಳೆದುಕೊಳ್ಳದೆ ಉದಾಸೀನ ಮಾಡಿದರೆ ಕೋವಿಡ್ ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ಜನರು ಈ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಬೇಕಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಸೋಕು ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನುಕೈಗೊಳ್ಳಬೇಕು. ರೋಗ ಲಕ್ಷಣಗಳಿದ್ದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು.
–ಆರ್.ಗಿರೀಶ್, ಜಿಲ್ಲಾಧಿಕಾರಿ