ದೇವದುರ್ಗ: ತಾಲೂಕಿನಾದ್ಯಂತ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಪತ್ತೆಗೆ ತಾಲೂಕು ಆಡಳಿತ ಸರ್ಕಾರಿ ಕಚೇರಿ, ವಾರದ ಸಂತೆಗೆಬರುವ ಪ್ರತಿಯೊಬ್ಬರಿಗೂ ಕೊರೊನಾ ಟೆಸ್ಟ್ ಮಾಡುತ್ತಿದೆ.
ಅತಿ ಹೆಚ್ಚು ಪ್ರಕರಣಗಳು: ದೇವದುರ್ಗ ತಾಲೂಕಲ್ಲಿ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ 543 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇದರಲ್ಲಿ ದೇವದುರ್ಗ ಪಟ್ಟಣ ಮತ್ತು ಜಾಲಹಳ್ಳಿ ಗ್ರಾಮದಲ್ಲೇ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಅರಕೇರಾ, ಗಬ್ಬೂರು ಗ್ರಾಮದಲ್ಲಿ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ. ಕೋವಿಡ್ ಚಿಕಿತ್ಸೆ ಕೇಂದ್ರದಲ್ಲಿ 16 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 14 ಜನ ಖಾಸಗಿ ಆಸ್ಪತ್ರೆಯಲ್ಲಿ,124 ಜನ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 300ಕ್ಕೂ ಹೆಚ್ಚು ಜನ ಗುಣಮುಖರಾಗಿದ್ದು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರು ಹೋಂ ಕ್ವಾರಂಟೈನ್ ಆಗಿದ್ದಾರೆ.
ಸಂತೆಯಲ್ಲಿ ತಪಾಸಣೆ: ಕೋವಿಡ್ ಸೋಂಕು ತಡೆಗೆ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ವಾರದ ಸಂತೆ ಮತ್ತು ಸರ್ಕಾರಿ ಕಚೇರಿಗೆ ಆಗಮಿಸುವವರ ತಪಾಸಣೆ ಮಾಡುತ್ತಿದೆ. ಬುಧವಾರ ಗಾಣಧಾಳ ಸಂತೆಯಲ್ಲಿ ಜನರ ತಪಾಸಣೆ ನಡೆಸಲಾಯಿತು. ಅರಕೇರಾ, ಜಾಲಹಳ್ಳಿ, ಗಲಗ, ಮುಂಡರಗಿ, ದೇವದುರ್ಗ ಪಟ್ಟಣ ಸೇರಿ ತಾಲೂಕಿನಲ್ಲಿ ನಡೆಯುವ ವಾರದ ಸಂತೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನು ಸರ್ಕಾರಿ ಕಚೇರಿಗೆ ಆಗಮಿಸುವವರಿಗೆ ಕೋವಿಡ್ ಪರೀಕ್ಷೆಗೆ ಒಳಪಟ್ಟ ನಂತರವೇ ಅವರ ಕೆಲಸ ಮಾಡಿಸಿಕೊಳ್ಳಲು ಅನುಮತಿ ನೀಡಲಾಗುತ್ತಿದೆ. ಜಿಲ್ಲಾಡಳಿತ ಸೂಚನೆಯಂತೆ ಇಲ್ಲಿನ ಅಧಿಕಾರಿಗಳು ತಪಾಸಣೆಗೆ ಮುಂದಾಗಿದ್ದಾರೆ.
ತಂಡ ರಚನೆ: ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆಯಿಂದ ಲ್ಯಾಬ್ ಸಿಬ್ಬಂದಿ ಸ್ಟಾಫ್‌ನರ್ಸ್ ಸೇರಿ ಮೂರು ತಂಡ ರಚಿಸಲಾಗಿದೆ. ಪಟ್ಟಣದಲ್ಲಿ ಶನಿವಾರ ಸಂತೆ ನಡೆಯುತ್ತದೆ. ಬೇರೆ ಬೇರೆ ತಾಲೂಕಿನಿಂದ ಹೆಚ್ಚು ಜನ ಬರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ಎರಡು ತಂಡ ರಚಿಸಲಾಗಿದೆ. ಖಾಸಗಿ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಕೋವಿಡ್ ತಪಾಸಣೆಗೂ ಸಿಬ್ಬಂದಿ ನಿಯೋಜಿಸಲಾಗಿದೆ.
ಹಳ್ಳಿಗಳ ಆಯ್ಕೆ ಚಿಂತನೆ: ಜಾಲಹಳ್ಳಿ, ಅರಕೇರಾ, ಗಬ್ಬೂರು, ಗಲಗ ಸೇರಿ ಹೋಬಳಿ ವ್ಯಾಪ್ತಿಯ ದೊಡ್ಡ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಕೋವಿಡ್ ತಪಾಸಣೆ ಮಾಡಲು ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಅಜೀಂ ಫೌಂಡೇಶನ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಕಿಟ್ ನೀಡಲಾಗಿದೆ. ಈಗಾಗಲೇ 33 ಗ್ರಾಪಂ ವ್ಯಾಪ್ತಿಯ ಕೆಲಗ್ರಾಮಗಳಲ್ಲಿ ತಪಾಸಣೆ ಮಾಡಲಾಗಿದೆ. ಒಟ್ಟಾರೆ ತಾಲೂಕನ್ನು ಕೊರೊನಾ ಮುಕ್ತವಾಗಿಸಲು ಆರೋಗ್ಯ ಇಲಾಖೆ, ತಾಲೂಕು ಆಡಳಿತ ಪಣ ತೊಟ್ಟಂತಿದೆ.
ವಾರದ ಸಂತೆ, ಸರಕಾರಿ ಕಚೇರಿಯಲ್ಲಿ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಗ್ರಾಪಂ. ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಜತೆಗೆ ತಪಾಸಣೆ ಮಾಡಲಾಗಿದೆ. ಸೋಂಕು ದೃಢಪಟ್ಟಲ್ಲಿ ಹೋಂ ಐಸೋಲೆಷನ್‌ನಲ್ಲಿ 11 ದಿನ ಚಿಕಿತ್ಸೆ ಪಡೆಯಬೇಕು. ಖಾಸಗಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.-
ಡಾ| ಬನದೇಶ್ವರ ತಾಲೂಕು ಆರೋಗ್ಯಾಧಿಕಾರಿ
-ನಾಗರಾಜ ತೇಲ್ಕರ್