ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದು ರಾಜ್ಯದಲ್ಲೇ ಪಾಸಿಟಿವಿಟಿ ರೇಟ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ಜಿಲ್ಲೆಯಲ್ಲಿ ಸೋಂಕು ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಆದರೆ, ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.
ಸದ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.2.60ಕ್ಕೆ ಇಳಿದಿದ್ದು, ಜಿಲ್ಲೆ ಅನ್‌ಲಾಕ್‌ನತ್ತ ಮುಖ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಜಿಲ್ಲಾದ್ಯಂತ ಜೂ.19ರಂದು 3,874 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು 177 ಮಂದಿಯಲ್ಲಿ ಸೋಂಕುದೃಢಪಡುವ ಮೂಲಕ ಶೇ.4.56 ಸೋಂಕು ಇಳಿಕೆಯಾಗಿತ್ತು. 7 ಮಂದಿ ಮೃತಪಟ್ಟಿದ್ದರು. ಜೂ.20ರಂದು 986 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು 197 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. 3 ಮಂದಿ ಮೃತಪಟ್ಟಿದ್ದರು.
ಜೂ.21ರಂದು 3,460 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು 152 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಶೇ.4.39ಕ್ಕೆ ಇಳಿಕೆಯಾದರೂ 3 ಮಂದಿ ಮೃತಪಟ್ಟಿದ್ದರು. ಜೂ.22ರಂದು 3,178 ಮಂದಿಯನ್ನು ಪರೀಕ್ಷೆಗೆಒಳಪಡಿಸಿದ್ದು 183 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿನ ಪ್ರಮಾಣ 5.75ಕ್ಕೆ ಏರಿಕೆಯಾಗಿತ್ತು. 3 ಮಂದಿ ಸಾವನ್ನಪ್ಪಿದ್ದರು. ಜೂ.23ರಂದು 3,393 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು 163 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ರೇಟ್ 4.80ಕ್ಕೆ ಇಳಿಕೆಯಾಗಿತ್ತು. ಇಬ್ಬರು ಮೃತಪಟ್ಟಿದ್ದರು. ಜೂ.24 ರಂದು 4,224 ಜನರು ಪರೀಕ್ಷೆ ಮಾಡಿಸಿಕೊಂಡಾಗ ಅದರಲ್ಲಿ 110 ಜನರಲ್ಲಿ ಸೋಂಕುಕಾಣಿಸಿಕೊಂಡು ಸೋಂಕಿನ ಪ್ರಮಾಣ ಶೇ.2.60 ಕನಿಷ್ಟ ಮಟ್ಟ ತಲುಪಿದೆ. ಆದರೆ ಸೋಂಕಿಗೆ 6 ಮಂದಿ ಬಲಿಯಾಗಿದ್ದಾರೆ. ಒಂದು ವಾರದ ಅಂಕಿ-ಅಂಶಗಳನ್ನು ಗಮನಿಸಿದರೆ ಗಣನೀಯವಾಗಿ ಸೋಂಕಿನ ಪ್ರಮಾಣ ಕಡಿಮೆಯಾಗಿರುವುದು ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ, ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಆತಂಕವನ್ನು ಮೂಡಿಸಿದೆ.
ಕೊರೊನಾ ಸೋಂಕಿನ ಮೊದಲ ಅಲೆಯಲ್ಲಿ 139 ಮಂದಿ ಮೃತಪಟ್ಟಿದ್ದರು. ಎರಡನೇ ಅಲೆಯಲ್ಲಿ 197 (ಗುರುವಾರಕ್ಕೆ) ಮೃತರ ಸಂಖ್ಯೆ ತಲುಪಿದ್ದು ಚಿಂತೆಗೀಡು ಮಾಡಿದೆ.