ಬಾಗಲಕೋಟೆ: ಜಿಲ್ಲೆಯಲ್ಲಿ ಶನಿವಾರ ಮತ್ತೆ 57 ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1225ಕ್ಕೆ ಏರಿಕೆಯಾಗಿದೆ.
ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ಗಳಿಂದ ಒಟ್ಟು 186 ಜನರು ಗುಣಮುಖರಾಗಿದ್ದು, ಈವರೆಗೆ 680 ಜನರ ಕೋವಿಡ್ ಮುಕ್ತರಾಗಿದ್ದಾರೆ. ಇನ್ನೂ 509 ಜನರಿಗೆ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ ಹೊಸದಾಗಿ ದೃಢಪಟ್ಟ ಸೋಂಕಿತರ ಪೈಕಿ ಬಾಗಲಕೋಟೆ ತಾಲೂಕಿನಲ್ಲಿ 20, ಜಮಖಂಡಿ 13, ಮುಧೋಳ ಮತ್ತು ಬಾದಾಮಿ ತಲಾ 8, ಗುಳೇದಗುಡ್ಡ 2, ಇಳಕಲ್ಲ, ಬೀಳಗಿ, ಹುನಗುಂದ ಹಾಗೂ ಬೇರೆ ಜಿಲ್ಲೆ ತಲಾ ಒಂದು ಸೇರಿ 57 ಪ್ರಕರಣ ಪತ್ತೆಯಾಗಿವೆ. ಹುನಗುಂದ ತಾಲೂಕಿನ ಕಮತಗಿ ಪಟ್ಟಣ ಪಂಚಾಯತಿಯ ಸಿಬ್ಬಂದಿಗೆ ಸೋಂಕು ತಗುಲಿದೆ.
ಕೋವಿಡ್ ಚಿಕಿತ್ಸೆಯಿಂದ ಒಟ್ಟು 186 ಜನ ಗುಣಮುಖರಾಗಿದ್ದು, ಶನಿವಾರ ಬಿಡುಗಡೆ ಮಾಡಲಾಗಿದೆ. ಬಾಗಲಕೋಟೆ ನವನಗರದ ಕೋವಿಡ್ ಕೇರ್ ಸೆಂಟರನಿಂದ 86, ಜಮಖಂಡಿ ಕೋವಿಡ್ ಕೇರ್ ಸೆಂಟರನಿಂದ 27, ಹುನಗುಂದ ಕೋವಿಡ್ ಕೇರ್ ಸೆಂಟರ್‌ನಿಂದ 14 ಹಾಗೂ ಜಿಲ್ಲಾ ಆಸ್ಪತ್ರೆಯಿಂದ 42 ಜನ ಗುಣಮುಖರಾಗಿದ್ದಾರೆ. ನವನಗರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಗ್ಯ ಸಿಬ್ಬಂದಿಯು ಗುಣಮುಖರಾಗಿದ್ದು ಅವರನ್ನು ತಾಲೂಕು ಆರೋಗ್ಯಾಧಿಕಾರಿ ಡಾ| ಬಿ.ಜಿ. ಹುಬ್ಬಳ್ಳಿ, ವೈದ್ಯಕೀಯ ಪ್ರಮಾಣ ಪತ್ರ ನೀಡಿ, ಬಿಡುಗಡೆ ಮಾಡಿದರು.
811 ಜನರ ವರದಿ ಬಾಕಿ: ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 811 ಸ್ಯಾಂಪಲ್ ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 1264 ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 23,096ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 20820 ನೆಗಟಿವ್ ಬಂದಿದ್ದು, 1225 ಪಾಸಿಟಿವ್ ಬಂದಿವೆ. 40 ಜನರು ಮೃತಪಟ್ಟಿದ್ದಾರೆ.
ಕೋವಿಡ್-19 ದಿಂದ ಒಟ್ಟು 680 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 509 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿವರೆಗೆ ಒಟ್ಟು 160 ಸ್ಯಾಂಪಲ್‌ಗಳು ರಿಜೆಕ್ಟ ಆಗಿರುತ್ತವೆ. ಕಂಟೇನ್ಮೆಂಟ್ ಝೋನ್ 95 ಇದ್ದು, ಇನ್‌ಸ್ಟಿಟ್ಯೂಶನ್ ಕ್ವಾಂರಂಟೈನ್ ನಲ್ಲಿದ್ದ 6296 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.