ಲಕ್ನೋ: ತಜ್ಞರ ಪ್ರಕಾರ ಭಾರತದಲ್ಲಿ ಕೋವಿಡ್ ಸೋಂಕು ಕೊನೆಯ ಹಂತದಲ್ಲಿದೆ. ಕೊನೆಯ ಹಂತದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗಿ ಆ ಬಳಿಕ ಸೋಂಕು ಕಡಿಮೆ ಆಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಶುಕ್ರವಾರ ದೇಶದಲ್ಲಿ 11,109 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡಿತ್ತು. ಶನಿವಾರ ( ಏ.15 ರಂದು) 10,753 ಮಂದಿಗೆ ಸೋಂಕು ಕಾಣಿಸಿಕೊಂಡು, 27 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.
ಐಐಟಿ ಕಾನ್ಪುರದ ಪ್ರಾಧ್ಯಾಪಕ ಡಾ. ಮನೀಂದ್ರ ಅಗರ್ವಾಲ್ ಮುಂದಿನ ಎರಡು ತಿಂಗಳಿನಲ್ಲಿ ದೇಶದಲ್ಲಿ ಕೋವಿಡ್ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ವರ್ಷದ ಮಧ್ಯಭಾಗದಲ್ಲಿ ಅಂದರೆ ಮೇ ತಿಂಗಳಿನ ಮಧ್ಯದಲ್ಲಿ ದೇಶದಲ್ಲಿ ಕೋವಿಡ್ 50 -60 ಸಾವಿರದವರೆಗೆ ಕಾಣಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೂರನೇ ಮಹಡಿಯಿಂದ ಕುಸಿದ ಲಿಫ್ಟ್: 9 ಮಂದಿಗೆ ಗಾಯ, ಮೂವರ ಮೂಳೆ ಮುರಿತ
ಈ ಸೋಂಕು ಹೆಚ್ಚಾಗಲು ಅವರು ಎರಡು ಕಾರಣಗಳನ್ನು ಕೊಟ್ಟಿದ್ದಾರೆ. ಮೊದಲ ಕಾರಣವೆಂದರೆ ವೈರಸ್ ವಿರುದ್ಧ ಹೋರಾಡುವ ನೈಸರ್ಗಿಕ ರೋಗನಿರೋಧಕ ಶಕ್ತಿ ಈಗ ಶೇಕಡಾ 5 ರಷ್ಟು ಜನರಲ್ಲಿ ಕಡಿಮೆಯಾಗಿದೆ. ಎರಡನೆಯ ಕಾರಣವೆಂದರೆ ಕೋವಿಡ್‌ನ ಹೊಸ ರೂಪಾಂತರವು ವೇಗವಾಗಿ ಹರಡುತ್ತಿದೆ ಎಂದಿದ್ದಾರೆ.
ಭಾರತದಲ್ಲಿ, 90% ಕ್ಕಿಂತ ಹೆಚ್ಚು ಮತ್ತು ಉತ್ತರ ಪ್ರದೇಶದಲ್ಲಿ, ಸುಮಾರು 95% ಜನರು ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ.
50 ಸಾವಿರ ಪ್ರಕರಣಗಳು ಭಾರತದಂಥ ದೊಡ್ಡ ದೇಶಕ್ಕೆ ಅಷ್ಟಾಗಿ ಪರಿಣಾಮ ಬೀರದು. ಹೆಚ್ಚಿನ ಸಂದರ್ಭಗಳಲ್ಲಿ, ರೋಗಲಕ್ಷಣಗಳು ಕೆಮ್ಮು ಮತ್ತು ಶೀತದಲ್ಲಿ ಇರುತ್ತದೆ. ಇಂಥವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನ್ನು ಸಾಮಾನ್ಯ ಜ್ವರದಂತೆ ಪರಿಗಣಿಸಬೇಕು. ಈ ಸೋಂಕುಗಳು ಎರಡನೇ ಅಲೆಯಲ್ಲಿ ಇದ್ದಷ್ಟು ಅಪಾಯಕಾರಿಯಾಗಿ ಇರುವುದಿಲ್ಲ ಎಂದವರು ಹೇಳಿದ್ದಾರೆ.