ಚಿಕ್ಕಬಳ್ಳಾಪುರ: ಕೋವಿಡ್ ಸೋಂಕು ಹರಡದಂತೆ ಏನೆಲ್ಲಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಸಹ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುವ ರೀತಿಯಲ್ಲಿ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸಮರೋಪಾದಿಯಾಗಿ ಕಾರ್ಯನಿರ್ವಹಿಸಿ ಕೋವಿಡನ್ನು ಜಿಲ್ಲೆಯಿಂದ ತೊಲಗಿಸೋಣ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಶುಕ್ರವಾರ ಡೀಸಿ ಕಚೇರಿ ಸಭಾಂಗಣದಲ್ಲಿ ನಡೆದ ಸರ್ಕಾರಿ ನೌಕರರ ಕುಂದು- ಕೊರತೆಗಳ ಕುರಿತು ಜಿಲ್ಲಾ ಜಂಟಿ ಸಮಾಲೋಚನಾ ಸಮಿತಿ ಸಭೆಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು, ಜಿಲ್ಲಾ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ, ನೌಕರರು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಆಲಿಸಿದರು.
ಬೆದರಿಸುವವರ ಮೇಲೆ ಕ್ರಮ: 2005 ರ ಮಾಹಿತಿ ಹಕ್ಕು ಕಾಯ್ದೆಯಡಿ ಕಾನೂನಾತ್ಮಕವಾಗಿ ಮಾಹಿತಿಯನ್ನು ಯಾರೇ ಕೇಳಲಿ ಅವರಿಗೆ ಮಾಹಿತಿಒದಗಿಸಿ, ಅದರ ಹೊರತಾಗಿ ಮಾಹಿತಿಹಕ್ಕು ಹೆಸರಲ್ಲಿ ಹೆದರಿಸಿ ಬೆದರಿಸಿ ಅನಾವಶ್ಯಕವಾಗಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಅಧಿಕಾರಿ, ಸಿಬ್ಬಂದಿ ನಿರ್ಭಿತರಾಗಿ ಕೆಲಸ ನಿರ್ವಹಿಸುವಂತೆ ಆತ್ಮ ವಿಶ್ವಾಸ ತುಂಬಿದರು.
ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿ: ನೌಕರರ ವೈದ್ಯಕೀಯ ವೆಚ್ಚದ ಮರುಪಾವತಿ ಮಾಡಲು ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅಧಿಕಾರಿ, ನೌಕರರ ವಿರುದ್ಧ ಯಾವುದೇ ಇಲಾಖೆ ವಿಚಾರಣೆಗಳಿದ್ದಲ್ಲಿ ಅನಾವಶ್ಯಕ ವಿಳಂಬ ತೋರದೆ, ಶೀಘ್ರ ಇತ್ಯರ್ಥ ಮಾಡಿಕೊಳ್ಳಿ. ನೌಕರರಿಗೆ ಒಳಾಂಗಣ, ಹೊರಾಂಗಣ ಕ್ರೀಡೆ, ಸಭೆ, ಸಮಾರಂಭ ಹಮ್ಮಿಕೊಳ್ಳಲು ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಕೇಂದ್ರದಿಂದ 6 ಕಿ.ಮೀ ದೂರದ ಅಂತರದಲ್ಲಿ ಜಾಗ ನೀಡಲಾಗುವುದು. ಡೀಸಿ ಕಚೇರಿ ಆವರಣದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿ, ಒಂದು ಪಾರ್ಕಿಂಗ್ ಶೇಡ್ ನಿರ್ಮಾಣ ಮಾಡಿ ಎಂದು ತಿಳಿಸಿದರು.
ಕೆ.ಜಿ.ಐ.ಡಿ ಸಾಲಗಳ ಅರ್ಜಿಗಳನ್ನು ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಗಳ ಅರ್ಜಿಗಳನ್ನುಒಂದು ವಾರದ ಒಳಗಡೆ ಇತ್ಯರ್ಥ ಪಡಿಸಬೇಕು. ಕರ್ತವ್ಯ ನಿರ್ವಹಿಸುವ ಯಾವುದೇ ಸರ್ಕಾರಿ ನೌಕರರಿಗೆ ಕೋವಿಡ್ ಬಂದರೆ ಅಂತಹವರಿಗೆ ವಿಶೇಷ ನಿಗಾವಹಿಸಿ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಗುರು ಭವನ ನಿರ್ಮಾಣ: ಜಿಲ್ಲೆಯಲ್ಲಿ ಗುರು ಭವನ ನಿರ್ಮಿಸಲು ಈಗಾಗಲೇ ಜಾಗವನ್ನುಗುರುತಿಸಲಾಗಿದೆ. ಒಂದು ಉತ್ತಮ ಭವನ ನಿರ್ಮಾಣಕ್ಕೆ ನೀಲ ನಕ್ಷೆ ಮಾದರಿ ತಯಾರಿಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್, ಅಪರ ಜಿಲ್ಲಾಧಿಕಾರಿ ಎಚ್. ಅಮರೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ನಾಗರಾಜ್, ತಾಲೂಕು ಸರ್ಕಾರಿ ನೌಕರರ ಸಂಘಗಳ ಅಧ್ಯಕ್ಷರಾದ ಕೆ.ಎನ್ ಸುಬ್ಟಾರೆಡ್ಡಿ (ಶಿಡ್ಲಘಟ್ಟ), ಬಿ. ಜನಾರ್ಧನ್‌ರೆಡ್ಡಿ (ಚಿಂತಾಮಣಿ), ಸತ್ಯನಾರಾಯಣರೆಡ್ಡಿ (ಬಾಗೇಪಲ್ಲಿ), ಕೆ.ವಿ. ನಾರಾಯಣಸ್ವಾಮಿ(ಗುಡಿಬಂಡೆ), ಮಧು ಸೂದನ್‌ರೆಡ್ಡಿ (ಗೌರಿಬಿದನೂರು) ಉಪಸ್ಥಿತರಿದ್ದರು.