ಹೊಸದಿಲ್ಲಿ: ಹೊಸತಾಗಿ ದೃಢಪಡುತ್ತಿರುವ ಸೋಂಕು ಪ್ರಮಾಣದ ಶೇ.50ರಷ್ಟು ಕೇರಳದಲ್ಲಿಯೇ ಇದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿ ವಾಲಯ ಕಳವಳ ವ್ಯಕ್ತಪಡಿಸಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ ಶೇ.64ರಷ್ಟು ಪ್ರಕರಣಗಳು ಇವೆ. ಮಲಪ್ಪುರಂನಲ್ಲಿ ಶೇ.59, ಎರ್ನಾಕುಳಂನಲ್ಲಿ ಶೇ.46.5, ತೃಶೂರ್‌ನಲ್ಲಿ ಶೇ.45.4 ಪ್ರಕರಣ ದಾಖಲಾಗಿದೆ. ಸೋಂಕು ಹೆಚ್ಚಳದ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ವಕ್ತಾರ ಸಂಭಿತ್ ಪಾತ್ರ ರಾಜ್ಯ ಸರಕಾರದ ಕ್ರಮಗಳನ್ನು ಟೀಕಿಸಿದ್ದಾರೆ. ಬುಧವಾರ ಒಂದೇ ದಿನ 22,056 ಹೊಸ ಪ್ರಕರಣ ಮತ್ತು 131 ಮಂದಿ ಅಸುನೀಗಿದ್ದಾರೆ.
ಈ ಬಗ್ಗೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಇತ್ತೀಚೆಗೆ ನಡೆದ ಕಾರ್ಯಕ್ರಮಗಳೇ ಸೂಪರ್ ಸ್ಪ್ರೆಡರ್ ಆಗಲು ಕಾರಣ ಎಂದಿದ್ದಾರೆ. ಹೋಮ್ ಐಸೊಲೇಷನ್‌ನಲ್ಲಿರುವವರ ಬಗ್ಗೆ ನಿಗಾ ಇರಿಸಿ ಎಂದಿದ್ದಾರೆ.
43,645 ಹೊಸ ಕೇಸು: ದೇಶದಲ್ಲಿ ಮಂಗಳ ವಾರದಿಂದ ಬುಧವಾರದ ಅವಧಿಯಲ್ಲಿ 43,645 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದೇ ಅವಧಿಯಲ್ಲಿ 640 ಮಂದಿ ಅಸುನೀಗಿ ದ್ದಾರೆ. ಸೋಮವಾರದಿಂದ ಮಂಗಳವಾರದ ಅವಧಿ ಯಲ್ಲಿ 29,689 ಪ್ರಕರಣಗಳು ದೃಢ ಪಟ್ಟಿದ್ದವು. ಸಕ್ರಿಯ ಸೋಂಕು ಪ್ರಮಾಣ 1,336 ಏರಿಕೆಯಾಗಿದ್ದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 3,99,436ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.97.39 ಆಗಿದೆ. ದೇಶದಲ್ಲಿ 44.16 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಆ.31ರ ವರೆಗೆ ವಿಸ್ತರಣೆ: ಮತ್ತೂಂದೆಡೆ ಸೋಂಕು ಪ್ರತಿಬಂಧಕ ಕ್ರಮಗಳನ್ನು ಆ.31ರ ವರೆಗೆ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ಪರೀಕ್ಷೆ, ನಿಗಾ, ಚಿಕಿತ್ಸೆ, ಲಸಿಕೆ ಹಾಕಿಸಿಕೊಳ್ಳುವುದು ಮತ್ತು ಕೊರೊನಾ ನಿಯಮ ಪಾಲನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಹೆಚ್ಚು ಜನರು ಸೇರುವ ಪ್ರದೇಶದಲ್ಲಿ ಸೋಂಕು ನಿಯಂತ್ರಣ ಕ್ರಮ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದ್ದಾರೆ. ಕರ್ನಾಟಕವೂ ಸೇರಿದಂತೆ ಎಂಟು ಪ್ರಮುಖ ರಾಜ್ಯಗಳ ಶೇ.70ಕ್ಕಿಂತಲೂ ಅಧಿಕ ಮಂದಿಯಲ್ಲಿ ಸೋಂಕಿನ ಪ್ರತಿಕಾಯಗಳು ಸೃಷ್ಟಿಯಾಗಿವೆ. ಹೀಗೆಂದು ಕೇಂದ್ರ ಸರಕಾರದ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಜೂನ್‌ನಿಂದ ಜುಲೈ ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.