ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು, ಜಿಲ್ಲೆಯಲ್ಲಿ ಮೂವರು ಸೋಂಕಿತರು ಸಾವನ್ನಪ್ಪಿದ್ದು, ಮತ್ತೆ 39 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಶನಿವಾರ ರಾಜ್ಯ ಆರೋಗ್ಯ ಬುಲೆಟಿನ್ ಬಿಡುಗಡೆ ಮಾಡಿದ ವರದಿಯಲ್ಲಿ ಜಿಲ್ಲೆಯ ಮಾಹಿತಿ ಹೀಗಿದೆ. ಸೋಂಕಿನಿಂದ ಆಸ್ಪತ್ರೆಗೆ ಜು.26ರಂದು ದಾಖಲಾಗಿದ್ದ 65 ವರ್ಷದ ಮಹಿಳೆ ಪಿ-104865, ಜು.31ರಂದು ದಾಖಲಾಗದ್ದ 32 ವರ್ಷದ ಪುರುಷ ಪಿ-131360, 28 ರಂದು ದಾಖಲಾಗಿದ್ದ 40 ವರ್ಷದ ಮಹಿಳೆ ಪಿ-132347 ಅಂದೇ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಈವರೆಗೆ 7 ಜನ ಮರಣ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿನ ಸಂಪರ್ಕವೇ ಪತ್ತೆಯಾಗದ ಜನರಲ್ಲಿ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಯಾದಗಿರಿ ನಗರ ಮತ್ತು ಗ್ರಾಮೀಣ, ಗುರುಮಠಕಲ್, ಶಹಾಪುರ ಹಾಗೂ ಸುರಪುರ ತಾಲೂಕಿನ ವಿವಿಧ ಗ್ರಾಮಗಳ ಜನರಿಗೆ ಸೋಂಕು ಹರಡುತ್ತಿದ್ದು, ಇಂದಿಗೆ 2386 ಜನರು ಸೋಂಕಿಗೆ ತುತ್ತಾಗಿದ್ದಾರೆ. 13 ಮಹಿಳೆಯರು ಮತ್ತು 27 ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.
270 ಹೊಸ ಮಾದರಿ ಸಂಗ್ರಹ: ಮಹಾಮಾರಿ ಕೋವಿಡ್ ವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಶನಿವಾರ 270 ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದೆ. 210 ಜನರ ವರದಿ ನೆಗೆಟಿವ್ ಬಂದಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 4395 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 6492 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 214 ಕಂಟೇನ್ಮೆಂಟ್ ಝೋನ್‌ಗಳನ್ನು ರಚಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 191 ಜನರನ್ನು ಪತ್ಯೇಕವಾಗಿರಿಸಲಾಗಿದೆ.
ಶಹಾಪುರ 85, ಸುರಪುರ 117 ಜನ ಹಾಗೂ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 93 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಎಸ್.ಸೋಮನಾಳ ತಿಳಿಸಿದ್ದಾರೆ.