ಜಿನೀವಾ: ಕೆಲವು ದೇಶಗಳು ಜಾರಿಯಲ್ಲಿರುವ ಲಾಕ್‌ಡೌನ್ ತೆರವು ಮಾಡಿದ ಬೆನ್ನಿಗೇ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಆದ್ದರಿಂದ ಜನರು ಜಾಗೃತರಾಗಿರಬೇಕು ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಪೂರಕವಾದ ಮುಂಜಾಗರೂಕತೆಯನ್ನು ಅನುಸರಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಪ್ರಸ್ತುತ ಈ ಮಾರಕ ಸಾಂಕ್ರಾಮಿಕ ರೋಗದ ಕೇಂದ್ರಬಿಂದುವು ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೆರಿಕದ ದೇಶಗಳಲ್ಲಿದೆ. ಅದರಲ್ಲೂ ಮುಖ್ಯವಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿದೆ ಎಂದು ಡಬ್ಲ್ಯುಎಚ್‌ಒ ವಕ್ತಾರೆ ಮಾರ್ಗರೇಟ್ ಹ್ಯಾರಿಸ್ ಹೇಳಿದ್ದಾರೆ.
“ನಾನು ಕೇವಲ ಯೂರೋಪ್ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಜಗತ್ತಿನ ಎಲ್ಲ ದೇಶಗಳಲ್ಲೂ ಈ ಸೋಂಕು ಹೆಚ್ಚಾಗುತ್ತಲೇ ಇದೆ. ಲಾಕ್‌ಡೌನ್ ಹಿಂಪಡೆದಿರುವುದರಿಂದ ಎಲ್ಲವೂ ಸರಿಯಾಗಿದೆ ಎಂಬ ಭಾವನೆ ಜನರಲ್ಲಿ ಇರಬಾರದು. ಕೊರೊನಾ ಅಪಾಯ ಇನ್ನೂ ಜೀವಂತವಾಗಿದೆ’ಎಂದು ಅವರು ಹೇಳಿದ್ದಾರೆ.
ಜಗತ್ತಿನ ಯಾವ ಮೂಲೆಯಲ್ಲೂ ಒಂದು ವೈರಸ್ ಕೂಡ ಇಲ್ಲ ಎಂದು ಹೇಳವಲ್ಲಿಯವರೆಗೆ ಇದರ ಅಪಾಯ ಮುಗಿದಿಲ್ಲ ಎಂದು ಮಾರ್ಗರೆಟ್ ಹೇಳಿದ್ದಾರೆ.
ಸುಮಾರು 10 ದಿನಗಳ ಹಿಂದೆ ಜಾರ್ಜ್ ಪ್ಲಾಯ್ಡ್ ಅವರ ಹತ್ಯೆಯ ಬಳಿಕ ಅಮೆರಿಕದಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಮತ್ತು ಹಿಂಸೆಯನ್ನು ಉಲ್ಲೇಖೀಸಿ ಮಾತನಾಡಿದ ಅವರು, ಈ ಪ್ರತಿಭಟನೆಗಳಲ್ಲಿ ಪಾಲ್ಗೊಂಡವರು ಮುನ್ನೆಚ್ಚರಿಕೆ ಕೈಗೊಳ್ಳುವುದು ಅಗತ್ಯ ಎಂದಿದ್ದಾರೆ. ನೀವು ನಿಮ್ಮನ್ನು ಹಾಗೂ ಇತರರನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದೀರಿ. ಅದಕ್ಕೆ ತಕ್ಕಂತೆ ನಿಮ್ಮ ವರ್ತನೆ ಇರಬೇಕಾಗಿದೆ, ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸಲಹೆಯಂತೆ ಕನಿಷ್ಠ ಒಂದು ಮೀಟರ್ ದೂರವಿರಬೇಕು, ಮಾಸ್ಕ್ ಧರಿಸಬೇಕು ಹಾಗೂ ಕೈಗಳನ್ನು ಆಗಾಗ ತೊಳೆಯುತ್ತಿರಬೇಕು ಎಂದು ಅವರು ಹೇಳಿದ್ದಾರೆ. ಪ್ರತಿಭಟನೆ ಹೆಸರಲ್ಲಿ ಜನರು ಗುಂಪುಸೇರುವ ಮೊದಲು ಸೋಂಕಿನ ಅಪಾಯವನ್ನೂ ತಿಳಿದಿರಬೇಕು ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ.