Advertisement

ಕೋವಿಡ್‌ ಪ್ರಕರಣಗಳ ಹೆಚ್ಚಳ ಅಸಡ್ಡೆ ಖಂಡಿತ ಬೇಡ

01:13 PM Sep 07, 2020 | sudhir |

ಕೋವಿಡ್‌-19 ಭಾರತದಲ್ಲಿ ವೇಗವಾಗಿ ಹರಡುತ್ತಿದೆ. 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 90 ಸಾವಿರದ ಗಡಿ ದಾಟಿರುವುದು ಆತಂಕದ ಸಂಗತಿಯೇ ಸರಿ. ಆದರೆ ಇದೇ ವೇಳೆಯಲ್ಲೇ ಚೇತರಿಕೆ ಪ್ರಮಾಣವೂ ಉತ್ತಮವಾಗುತ್ತಿದೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಪ್ರಮಾಣ 41 ಲಕ್ಷದ ಗಡಿ ದಾಟಿದ್ದರೆ, ಇವರಲ್ಲಿ ಈಗಾಗಲೇ 32 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಎನ್ನುವುದು ಸಮಾಧಾನದ ವಿಷಯ. ಹಾಗೆಂದು ಇದನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ಕಾರಣಕ್ಕೂ ದೇಶವಾಸಿಗಳು ಮೈಮರೆ ಯುವಂತೆಯೇ ಇಲ್ಲ.

Advertisement

ಕಟ್ಟುನಿಟ್ಟಿನ ಲಾಕ್‌ಡೌನ್‌ ಹಂತಗಳೆಲ್ಲ ಮುಗಿದು ಈಗ ಬಹುತೇಕ ವಲಯಗಳು ಬಾಗಿಲು ತೆರೆದಿವೆ. ಆರ್ಥಿಕ ಚಕ್ರಕ್ಕೆ ಮರುಚಾಲನೆ ನೀಡಲೇಬೇಕಾದ ಅನಿವಾರ್ಯವಿರುವುದರಿಂದ ಹೀಗೆ ಮಾಡಲೇಬೇಕಿತ್ತು. ಹಾಗೆಂದು ನಿರ್ಬಂಧಗಳು ಸಡಿಲವಾಗಿವೆಯೆಂದರೆ ಅಪಾಯದ ತೀವ್ರತೆ ಕಡಿಮೆಯಾಗಿದೆ ಎಂದರ್ಥವಲ್ಲ. ದಿನಕ್ಕೆ 90 ಸಾವಿರ ಸೋಂಕಿತರು ಪತ್ತೆಯಾಗುತ್ತಾರೆ ಎಂದರೆ, ಇನ್ನೂ ಪರೀಕ್ಷೆಗೊಳಪಡದ ಎಷ್ಟು ಸೋಂಕಿತರು ಇದ್ದಾರೋ, ಸೋಂಕಿತರ ಸಂಪರ್ಕಕ್ಕೆ ಎಷ್ಟು ಜನರು ಬಂದಿರುತ್ತಾರೋ ತಿಳಿಯದು. ಹೆಚ್ಚುತ್ತಿರುವ ಪ್ರಕರಣಗಳ ಕಾರಣದಿಂದಾಗಿ ಈಗ ಕಾಂಟ್ಯಾಕ್ಟ್ ಟ್ರೇಸಿಂಗ್‌ ಪ್ರಕ್ರಿಯೆಗೂ ಬಹಳ ಹಿನ್ನಡೆಯಾಗಿದೆ.

ಕೋವಿಡ್‌ ಮಾರಣಾಂತಿಕವಲ್ಲ ಎನ್ನುವ ವಿಚಾರ ಯಾವ ಕಾರಣಕ್ಕೂ ಅಸಡ್ಡೆಗೆ ಕಾರಣವಾಗಬಾರದು. ಈ ಅಸಡ್ಡೆಯು ನಮ್ಮ ಸುತ್ತಲೂ ಇರುವ ಅನಾರೋಗ್ಯ ಪೀಡಿತರನ್ನು, ವಯಸ್ಸಾದವರನ್ನು ಅಪಾಯದಂಚಿಗೆ ತಳ್ಳಿಬಿಡಬಲ್ಲದು. ಪ್ರತಿಯೊಂದು ಜೀವವೂ ಅಮೂಲ್ಯವಾಗಿರುವುದರಿಂದ, ಅಂಕಿ ಸಂಖ್ಯೆಗಳಲ್ಲಿ ಸಾವುಗಳನ್ನು ಅಳೆಯುವುದು ಖಂಡಿತ ತಪ್ಪಾಗುತ್ತದೆ. ಅದೂ ಅಲ್ಲದೇ ಈಗಲೂ ಈ ವೈರಾಣುವಿನ ಪೂರ್ಣ ಜೀನೋಮಿಕ್‌ ಗುಣಗಳು ಅಪರಿಚಿತವೇ ಆಗಿವೆ. ಈ ರೋಗ ಶ್ವಾಸಕೋಶಗಳ ಮೇಲೆ, ಹೃದಯ ಸೇರಿ ದಂತೆ ಇತರ ಅಂಗಗಳ ಮೇಲೆ ಯಾವ ರೀತಿಯ ಪರಿಣಾಮವುಂಟುಮಾಡುತ್ತದೆ ಎನ್ನುವುದು ಈಗಲೂ ಸ್ಪಷ್ಟವಿಲ್ಲ. ಈ ಕಾರಣಕ್ಕಾಗಿಯೇ, ವಿಶ್ವ ಆರೋಗ್ಯ ಸಂಸ್ಥೆಯೂ ಸಹ ಇದನ್ನು ಕೇವಲ ಸಣ್ಣ ಫ್ಲ್ಯೂ ಎಂಬಂತೆ ನೋಡಬಾರದು ಎಂದು ಅನೇಕ ಬಾರಿ ಎಚ್ಚರಿಸಿದೆ. ರೋಗ ಲಕ್ಷಣ ಇಲ್ಲದವರ ಆರೋಗ್ಯದ ಮೇಲೂ ಈ ವೈರಾಣು ಪರಿಣಾಮಬೀರಬಲ್ಲದೇ ಎನ್ನುವ ಕುರಿತು ಈಗ ಅಧ್ಯಯನಗಳು ನಡೆದೇ ಇವೆ. ಬ್ರಿಟನ್‌ನಲ್ಲಿ ಈ ವೈರಸ್‌ನಿಂದ ಗುಣಮುಖರಾದವರಲ್ಲಿ ಹೃದಯ, ಶ್ವಾಸಕೋಶ ಸೇರಿದಂತೆ ಅನ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ.

ಯಾವುದೇ ದೇಶಕ್ಕಾಗಲಿ ದೀರ್ಘ‌ಕಾಲದವರೆಗೆ ಅರ್ಥವ್ಯವಸ್ಥೆಯ ಚಕ್ರವನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ದೇಶಾದ್ಯಂತ ಸರಕಾರಗಳು, ಆರೋಗ್ಯ ವ್ಯವಸ್ಥೆ ತಮ್ಮ ಪಾಲಿನ ಜವಾಬ್ದಾರಿಯನ್ನಂತೂ ನಿರ್ವಹಿಸಿವೆ, ನಿರ್ವಹಿಸುತ್ತಿವೆ. ಈಗ ಜನ ಸಾಮಾನ್ಯರು ಎಚ್ಚರಿಕೆ ವಹಿಸಲೇಬೇಕಾದ ಅಗತ್ಯವಿದೆ. ನನ್ನ ರೋಗ ನಿರೋಧಕ ಶಕ್ತಿ ಉತ್ತಮವಾಗಿದೆ, ನನಗೇನೂ ಆಗದು ಎಂಬ ಮನಃಸ್ಥಿತಿಯೇ ರೋಗ ಪ್ರಸರಣಕ್ಕೆ ಕಾರಣವಾಗುತ್ತಿದೆ. ನಮ್ಮಿಂದಾಗಿ ಇನ್ನೊಬ್ಬರಿಗೆ ಅಪಾಯ ಆಗಬಾರ ದಲ್ಲವೇ? ಈ ನಿಟ್ಟಿನಲ್ಲಿಯೇ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ಸ್ವತ್ಛಗೊಳಿಸಿಕೊಳ್ಳುವಂಥ ವಿಚಾರದಲ್ಲಿ ಅಸಡ್ಡೆ ಸಲ್ಲದು.

Advertisement

Udayavani is now on Telegram. Click here to join our channel and stay updated with the latest news.

Next