Advertisement

ದಕ್ಷಿಣ ಕನ್ನಡ : ಮೂರೂವರೆ ತಿಂಗಳಲ್ಲೇ ಅರ್ಧ ಲಕ್ಷ ಮಂದಿಗೆ ಸೋಂಕು!

03:03 AM Jun 20, 2021 | Team Udayavani |

ಮಂಗಳೂರು: ಕೊರೊನಾ ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆಯ ತೀವ್ರತೆ ಜೋರಾಗಿದೆ. ಇಡೀ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಇಳಿಮುಖವಾಗುತ್ತಿಲ್ಲ. ಆರೋಗ್ಯ ಇಲಾಖೆಯ ಮಾಹಿತಿಯಂತೆ ಕಳೆದ ಮೂರೂವರೆ ತಿಂಗಳುಗಳಲ್ಲಿ ಜಿಲ್ಲೆಯ ಅರ್ಧ ಲಕ್ಷಕ್ಕೂ ಹೆಚ್ಚಿನ ಮಂದಿಗೆ ಕೊರೊನಾ ದೃಢಪಟ್ಟಿದೆ.
ಕೊರೊನಾ ಮೊದಲನೇ ಅಲೆಯಲ್ಲಿ (2021ರ ಮಾರ್ಚ್‌ ಅಂತ್ಯದ ವರೆಗೆ) ಜಿಲ್ಲೆಯಲ್ಲಿ 35,697 ಮಂದಿಗೆ ಕೊರೊನಾ ದೃಢಪಟ್ಟಿತ್ತು.

Advertisement

ಬಳಿಕ ಮೂರೂವರೆ ತಿಂಗಳಿನಲ್ಲಿ ಅಂದರೆ 2021ರ ಜೂನ್‌ 17ರ ವರೆಗೆ 51,903 ಮಂದಿಗೆ ಸೋಂಕು ತಗಲಿದೆ. ಮೊದಲ ಅಲೆಯಲ್ಲಿ ಹಿರಿಯ ನಾಗರಿಕರು ಹೆಚ್ಚಾಗಿ ಕೊರೊನಾ ಸೋಂಕಿಗೆ ಒಳಪಟ್ಟಿದ್ದರು. ಆದರೆ 2ನೇ ಅಲೆ ಯುವಕರನ್ನೇ ಬಾಧಿಸುತ್ತಿದೆ. ಈ ಅವಧಿಯಲ್ಲಿ 21ರಿಂದ 30 ವರ್ಷದೊಳಗಿನ 4,994 ಮಂದಿ ಮಹಿಳೆಯರು 5,437 ಮಂದಿ ಪುರುಷರು ಸೇರಿ ಒಟ್ಟು 10,431 ಮಂದಿಗೆ ಸೋಂಕು ಬಾಧಿಸಿದೆ. ಅನಂತರದ ಸ್ಥಾನದಲ್ಲಿ 31ರಿಂದ 40 ವರ್ಷದೊಳಗಿನವರು ಇದ್ದಾರೆ. ಈ ವಯಸ್ಸಿನ 4,260 ಮಹಿಳೆಯರು ಮತ್ತು 5,220 ಪುರುಷರು ಸಹಿತ 9,480 ಮಂದಿಗೆ ಸೋಂಕು ತಗಲಿದೆ.

ಯುವಕರು ಕೊರೊನಾ ಎರಡನೇ ಅಲೆ ಕುರಿತು ಸಾಕಷ್ಟು ಮುನ್ನೆಚ್ಚರಿಕೆ ವಹಿಸ ದಿರುವುದರಿಂದಲೇ ಅವರಿಗೆ ಹೆಚ್ಚಾಗಿ ಕೊರೊನಾ ಬಾಧಿಸಿದೆ ಎಂದು ತಜ್ಞರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿದೆ ಸಾವು
ದ.ಕ. ಜಿಲ್ಲೆಯಲ್ಲಿ ಪ್ರಕರಣ ಏರಿಕೆಯ ಜತೆಗೆ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಅದರಲ್ಲೂ ಶುಕ್ರವಾರ ದಾಖಲೆಯ 15 ಮಂದಿ ಸಾವನ್ನಪ್ಪಿದ್ದರು. ವೈದ್ಯರ ಪ್ರಕಾರ ಸಾವಿನ ಪ್ರಮಾಣ ಏರಲು ಪ್ರಮುಖ ಕಾರಣವೆಂದರೆ ಕೊರೊನಾ ಲಕ್ಷಣ ಕಾಣಿಸಿಕೊಂಡ ಕೂಡಲೇ ತಪಾಸಣೆ ಗೊಳಗಾಗದಿರುವುದು, ಉಲ್ಬಣಗೊಂಡ ಬಳಿಕವಷ್ಟೇ ಆಸ್ಪತ್ರೆಗೆ ದಾಖಲಾಗುವುದು, ಲಸಿಕೆ ಅಭಿಯಾನಕ್ಕೆ ವೇಗ ಸಿಗದಿರುವುದು, ಕೊರೊನಾ ಬಗ್ಗೆ ಜನರಲ್ಲಿರುವ ನಿರ್ಲಕ್ಷ್ಯ, ಪ್ರಾಥಮಿಕ ಸಂಪರ್ಕ, ಟ್ರಾವೆಲ್‌ ಹಿಸ್ಟರಿ ಮುಚ್ಚಿಡುವುದು ಇತ್ಯಾದಿ.

ಪರೀಕ್ಷೆ ಹೆಚ್ಚಳ
ದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೊರೊನಾ ದೈನಂದಿನ ತಪಾಸಣೆಯನ್ನು ಏರಿಸಲಾಗಿದೆ. ಸದ್ಯ ಸರಾಸರಿ 9ರಿಂದ 10 ಸಾವಿರದಷ್ಟು ಮಂದಿಯ ತಪಾಸಣೆಗೆ ನಡೆಯುತ್ತಿದೆ. ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆ ತೀವ್ರತೆಯಲ್ಲಿದ್ದು, ಇದೇ ಕಾರಣಕ್ಕೆ ರಿಂಗ್‌ ಸರ್ವೇಲೆನ್ಸ್‌ ಮುಖೇನ ಹೆಚ್ಚಿನ ತಪಾಸಣೆಗೆ ಆದ್ಯತೆ ನೀಡಲಾಗಿದೆ.
– ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next