ವರದಿ : ಜೀಯು, ಹೊನ್ನಾವರ
ಹೊನ್ನಾವರ: ಕೋವಿಡ್‌ನ ಎಲ್ಲ ನಿರ್ಬಂಧಗಳು ಸೋಮವಾರ ಅಂತ್ಯವಾಗುವುದರಲ್ಲಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ನೆರೆಯ ರಾಜ್ಯಗಳ ನೇರಸಂಪರ್ಕ ಇರುವ ಕರ್ನಾಟಕ, ವಿಶೇಷವಾಗಿ ನಿತ್ಯ ಎಂಬಂತೆ ಜನ ಓಡಾಡುವ ಕರಾವಳಿ ಭಾಗಕ್ಕೆ ಡೆಲ್ಟಾ ಫಸ್ಟ್ ಅಪಾಯ ಕಾಡುವ ಸಂಭವವಿದೆ. ಇತ್ತ ಲಸಿಕೆ ನೀಡಿಕೆಯಲ್ಲೂ ಯಾವುದೇ ವೇಗ ಕಾಣುತ್ತಿಲ್ಲ. ಬೇರೆ ಜಿಲ್ಲೆಯ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರ 780 ರೂ. ಮಾತ್ರ ಪಡೆದು ಸೇವಾ ಶುಲ್ಕವಿಲ್ಲದೆ ಲಸಿಕೆ ಕೊಡುತ್ತೇನೆ ಎಂದರೆ ಉಸ್ತುವಾರಿ ಸಚಿವರು ಬೇಡ ಎನ್ನುತ್ತಿದ್ದಾರೆ.
84 ದಿನ ಪೂರೈಸಿದ 20 ಸಾವಿರ ಜನರಿಗೆ ಇನ್ನೂ ಲಸಿಕೆ ಕೊಡುವುದು ಬಾಕಿ ಇದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 49ಕ್ಕೆ ಇಳಿದಿದ್ದರೂ ಇಬ್ಬರು ಮೃತಪಟ್ಟಿದ್ದಾರೆ. ಸಾವು ಕಡಿಮೆಯಾಗುತ್ತಿಲ್ಲ. ಕುಮಟಾ, ಹೊನ್ನಾವರದಲ್ಲಿ ಹೆಚ್ಚು ಜನ ಆಸ್ಪತ್ರೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 503 ಸಕ್ರೀಯ ಪ್ರಕರಣಗಳಿದ್ದು ಸಾವಿನ ಸಂಖ್ಯೆ 708ಕ್ಕೆ ಏರಿದೆ. ಇತ್ತ ಪದವಿ ಕಾಲೇಜುಗಳು ಆರಂಭವಾಗಲಿದ್ದು, ಜಿಲ್ಲೆಯ 11 ತಾಲೂಕುಗಳಲ್ಲಿ 50 ಸಾವಿರದಷ್ಟು ವಿದ್ಯಾರ್ಥಿಗಳು ಪದವಿ ಓದುತ್ತಿದ್ದಾರೆ. ಇವರಿಗೆ ಸೋಮವಾರದೊಳಗೆ ಕಾಲೇಜು ಆರಂಭವಾಗುವ ಜು.7 ರೊಳಗೆ ಲಸಿಕೆ ಕೊಟ್ಟು ಮುಗಿಸಬೇಕಾಗಿದೆ. ಇದರ ಹೊರತಾಗಿ ಉದ್ಯೋಗ ಅರಿಸಿ ಬೆಂಗಳೂರು, ಮುಂಬೈಗೆ ಹೋಗುವ ಪದವೀಧರರು, ಮನೆಯಲ್ಲಿ ಕೆಲಸ ಮಾಡುತ್ತಿದ್ದವರು ಲಾಕ್‌ಡೌನ್ ಮುಗಿದ ಕಾರಣ ಬೆಂಗಳೂರಿಗೆ ಹೋಗಲು ಸಿದ್ಧರಾಗುತ್ತಿದ್ದಾರೆ.
ವ್ಯಾಪಾರ, ವಾಣಿಜ್ಯ ಮಳಿಗೆಗಳು ತೆರೆಯಲಿವೆ. ಇಲ್ಲಿ ಕೆಲಸ ನಿರ್ವಹಿಸುವವರಿಗೂ ಲಸಿಕೆ ಬೇಕು. ದಿನಕ್ಕೆ 100-200 ಡೋಸ್ ಪ್ರತಿ ತಾಲೂಕಿಗೆ ಬಂದರೆ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗುತ್ತದೆ. ಕೆಲವರು ನಸುಕಿನ 4ರಿಂದ ಲಸಿಕೆಗೆ ಸರದಿಯಲ್ಲಿ ನಿಂತು ಮಧ್ಯಾಹ್ನದೊಳಗೆ ಲಸಿಕೆ ಮುಗಿದು ಸಪ್ಪೆ ಮುಖಮಾಡಿಕೊಂಡು ಮನೆಗೆ ಹೋಗುತ್ತಿದ್ದಾರೆ. ಎರಡನೇ ಡೋಸ್ ಲಸಿಕೆಗೆ ಕಾದಿದ್ದವರಿಗೆ ಸಂದೇಶವೂ ಬರುತ್ತಿಲ್ಲ. ಈ ತಿಂಗಳಿಂದ ಜಿಲ್ಲೆಗೆ ಸುಮಾರು 1ಲಕ್ಷ ಡೋಸ್ ಪೂರೈಕೆಯಾದರೆ ಕೊರೊನಾ 3ನೇ ಅಲೆಯ ಒಳಗೆ ಲಸಿಕೆ ಕೊಟ್ಟು ಮುಗಿಸಬಹುದಾಗಿದೆ. ದಿನಕ್ಕೆ 2-3ಸಾವಿರ ಲಸಿಕೆ ಬಂದರೆ 11 ತಾಲೂಕುಗಳ 15 ಲಕ್ಷ ಜನಸಂಖ್ಯೆಯಿರುವ ಈ ಜಿಲ್ಲೆಯಲ್ಲಿ ಎಲ್ಲರಿಗೂ ಕೊಟ್ಟು ಪೂರೈಸಲು ಎಷ್ಟು ಕಾಲ ಬೇಕಾಗಬಹುದು. ಜಿಲ್ಲೆಯ ಜನಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಜನರಿಗೆ ಮೊದಲ ಡೋಸ್ ನೀಡಲಾಗಿದ್ದು 1ಲಕ್ಷ ಜನರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಬಾಕಿ ಇರುವ 4ಲಕ್ಷ ಜನರಿಗೆ 2ನೇ ಡೋಸ್ ಲಸಿಕೆ ಬೇಕು. ಅಭಿಯಾನ ನಡೆದ ಒಂದು ದಿನ ಹೆಚ್ಚು ಜನಕ್ಕೆ ಲಸಿಕೆ ಕೊಟ್ಟರೆ ಸಾಲುವುದಿಲ್ಲ.
ಕೋವಿಶೀಲ್ಡ್ ಲಸಿಕೆಯನ್ನು 84 ದಿನದಿಂದ 112 ದಿನಗಳ ಒಳಗೆ ಪಡೆದುಕೊಳ್ಳಬೇಕು. ಕೋವ್ಯಾಕ್ಸಿನ್ ಮಾತ್ರ 28-42ದಿನಗಳ ಒಳಗೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ವೈದ್ಯರು. ಯೋಗ ದಿನಾಚರಣೆ ದಿನ ಜಿಲ್ಲೆಯಲ್ಲಿ 38ಸಾವಿರ ಜನರಿಗೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಇವರಲ್ಲಿ ಮೊದಲ ಡೋಸ್ ಪಡೆದವರೇ ಹೆಚ್ಚು. 84 ದಿನಗಳ ನಂತರ ಮತ್ತೆ 30 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಬೇಕು. ಹೇಗೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈ ಮಧ್ಯೆ ಕೆಲವು ಹಾಲಿ, ಮಾಜಿ ಶಾಸಕರು ತಮ್ಮ ಆತ್ಮೀಯರಿಗಾಗಿ 100-200 ಡೋಸ್ ಲಸಿಕೆ ಕೊಡಿಸಿದ್ದಿದೆ. ಕೆಲವು ಆಡಳಿತ ಪಕ್ಷದ ಕಾರ್ಯಕರ್ತರಂತೂ ಲಸಿಕೆ ಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಂದು ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾರೆ. ಆಡಳಿತ ಪಕ್ಷದವರು ಲಸಿಕೆಯನ್ನು ರಾಜಕಾರಣಕ್ಕೆ ಬಳಸುವುದು ಆರೋಗ್ಯಕರವಲ್ಲ. ಮೊದಲು ಜಿಲ್ಲೆಯ ಎಲ್ಲ ಜನ ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಡಳಿತ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಬಗೆಹರಿಸಬೇಕಾಗಿದೆ.