ಮುಂಬಯಿ, ಆ. 18: ಮಹಾರಾಷ್ಟ್ರದ ಜೈಲುಗಳಲ್ಲಿರುವ ಕೈದಿಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಶುಕ್ರವಾರ 1 ಸಾವಿರದಗಡಿ ದಾಟಿದೆ. ಪ್ರಸ್ತುತ ಸೋಂಕಿತರ ಸಂಖ್ಯೆ 1,007ರಷ್ಟಿದೆ. ಈ ವರೆಗೆ 6 ಸಾವು ಮತ್ತು 814 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದೆ.
ರಾಜ್ಯದ 45 ಜೈಲುಗಳಲ್ಲಿ 26,308 ಕೈದಿಗಳನ್ನು ಇರಿಸಲಾಗಿದೆ. ಈ ಪೈಕಿ 6 ಸಾವುಗಳು ಪುಣೆಯ ಯೆರವಾಡ ಕೇಂದ್ರ ಕಾರಾಗೃಹ, ನವಿಮುಂಬಯಿಯ ತಲೋಜ ಕೇಂದ್ರ ಕಾರಾಗೃಹ ಹಾಗೂ ಧುಳೆ ಮತ್ತು ಅಮರಾವತಿಯ ಜೈಲುಗಳಿಂದ ವರದಿಯಾಗಿವೆ. ನಾಗಪುರ ಕೇಂದ್ರ ಕಾರಾಗೃಹದಲ್ಲಿ ಗರಿಷ್ಠ 219 ಪ್ರಕರಣಗಳು ದಾಖಲಾಗಿವೆ. ಆದಾಗ್ಯೂ ಅಲ್ಲಿನ ಎಲ್ಲ 219 ಕೈದಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ನಾಗಪುರ ಜೈಲು ಅಧಿಕಾರಿಗಳು ಅದರ 616 ಕೈದಿಗಳ ಕೋವಿಡ್ ಪರೀಕ್ಷೆ ನಡೆಸಿದ್ದಾರೆ. ರಾಜ್ಯದ ಅತ್ಯಂತ ಜನದಟ್ಟಣೆಯ ಕಾರಾಗೃಹಗ ಳಲ್ಲಿ ಒಂದಾಗಿರುವ ಹಾಗೂ ಹಲವಾರು ದರೋಡೆ ಕೋರರು, ಭಯೋತ್ಪಾದಕ ಶಂಕಿತರು ಮತ್ತು ಉನ್ನತ ಮಟ್ಟದ ಆರ್ಥಿಕ ಅಪರಾ ಗಳನ್ನು ಹೊಂದಿರುವ ಮುಂಬಯಿಯ ಆರ್ಥರ್ ರೋಡ್ ಜೈಲಿನಲ್ಲಿರುವ ಕೈದಿಗಳಲ್ಲಿ 182 ಪ್ರಕರಣಗಳು ವರದಿಯಾಗಿದ್ದರೆ, 46 ಜೈಲು ಅಧಿಕಾರಿಗಳು ಸೋಂಕಿಗೆ ಒಳಗಾಗಿದ್ದಾರೆ. ರಾಜ್ಯದ ಜೈಲುಗಳ ಪೈಕಿ ಮೊದಲ ಕೋವಿಡ್ ಪ್ರಕರಣ ಕೂಡ ಇದೇ ಜೈಲಿನಿಂದ ವರದಿಯಾಗಿದೆ.
ಸಾಂಗ್ಲಿ ಮತ್ತು ಅಕೋಲಾ ಜಿಲ್ಲಾ ಕಾರಾಗೃಹಗಳಲ್ಲಿ ಕ್ರಮವಾಗಿ 145 ಮತ್ತು 99 ಪ್ರಕರಣಗಳು ವರದಿಯಾಗಿವೆ. ಅಧಿಕಾರಿಗಳ ಪ್ರಕಾರ, ರಾಜ್ಯದ ಎಲ್ಲ ಕೇಂದ್ರ, ಜಿಲ್ಲಾ ಮತ್ತು ತೆರೆದ ಜೈಲುಗಳಲ್ಲಿ ನಡೆಸಿದ 6,177 ಪರೀಕ್ಷೆಗಳಲ್ಲಿ 781 ಪರೀಕ್ಷೆಗಳನ್ನು ಆರ್ಥರ್ ರೋಡ್ ಜೈಲಿನಲ್ಲಿ ನಡೆಸಲಾಗಿದೆ. ಈ ಜೈಲು ತನ್ನ 800 ಕೈದಿಗಳ ಸಾಮರ್ಥ್ಯದ ವಿರುದ್ಧ 2,500ಕ್ಕೂ ಅಧಿಕ ಕೈದಿಗಳನ್ನು ಹೊಂದಿದೆ. ಆರ್ಥರ್ ರೋಡ್ ಮತ್ತು ನಾಗಪುರ ಜೈಲುಗಳ ಅನಂತರ ಅಕೋಲಾ (569), ಔರಂಗಾಬಾದ್ (517) ಮತ್ತುಯೆರವಾಡ ಕಾರಾಗೃಹಗಳಲ್ಲಿ (506) ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ, 8 ಕಾರಾಗೃಹಗಳಾದ ಸಾವಂತ್ವಾಡಿ ಜಿಲ್ಲಾ ಕಾರಾಗೃಹ, ಸಿಂಧುದುರ್ಗ ಜಿಲ್ಲಾ ಕಾರಾಗೃಹ, ಯೆರವಾಡ ತೆರೆದ ಜೈಲು, ನಾಂದೇಡ್ ಜಿಲ್ಲಾ ಕಾರಾಗೃಹ, ನಂದೂರ್ಬಾರ್ ಜಿಲ್ಲಾ ಕಾರಾಗೃಹ, ವಾಶಿಮ್ ಜಿಲ್ಲಾ ಕಾರಾಗೃಹ, ಭೂಸಾವಳ್ ಉಪ ಜೈಲು, ಮೊರ್ಷಿ ತೆರೆದ ಜೈಲು ಮತ್ತು ನಾಸಿಕ್ ಬೊರ್ಸ್ಟಲ್ ಶಾಲೆಯಲ್ಲಿ ಯಾವುದೇ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನದಟ್ಟಣೆ ತಡೆಗಟ್ಟಲು ಮಾ. 25ರಿಂದ ಒಟ್ಟು 10,476 ಕೈದಿಗಳನ್ನು ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.