ಬೀದರ: ಮಹಾರಾಷ್ಟ್ರದಲ್ಲಿ ಅಪ್ಪಳಿಸಿರುವ ಕೋವಿಡ್ ಸೋಂಕಿನ ಎರಡನೇ ಅಲೆ ಗಂಡಾಂತರ ಗಡಿನಾಡು ಬೀದರಗೂ ಬಿಸಿ ತಟ್ಟಿದೆ. ತಿಂಗಳ ಹಿಂದೆ ಒಂದಂಕಿಗೆ ಇಳಿದಿದ್ದ ಕೋವಿಡ್ ಸೋಂಕಿತರ ಪ್ರಕರಣ ಈಗ ನಿತ್ಯ ಎರಡಂಕಿ ದಾಖಲಾಗುತ್ತಿದ್ದು, ಕೇವಲ ಒಂದೇ ವಾರದಲ್ಲಿ ಶತಕದ ಗಡಿ ದಾಟುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಮೆರೆಯುವ ಮುನ್ಸೂಚನೆ ತೋರಿದೆ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಬೀದರ ಜಿಲ್ಲೆಗೂ ನಿಧಾನವಾಗಿ ಹಬ್ಬುತ್ತಿದೆ ಎಂಬ ಆತಂಕ ಬಿಸಿಲೂರಿನ ಜನರನ್ನು ಕಾಡಲಾರಂಭಿಸಿದೆ. ಒಂದು ವಾರದಲ್ಲಿ (ಮಾ.6ರಿಂದ 13ರವರೆಗೆ) 120 ಹೊಸ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ನಿತ್ಯ ಸರಾಸರಿ 15 ಕೇಸ್‌ಗಳು ಪತ್ತೆಯಾಗಿವೆ. ಈ ಸಂಖ್ಯೆ ಗಮನಿಸಿದರೆ ಸೋಂಕಿತರು ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ಸ್ಪಷ್ಟವಾಗಿದೆ. ದೇಶದ ಹಾಟ್‌ಸ್ಪಾಟ್ ಜಿಲ್ಲೆಗಳಲ್ಲಿ ಬೆಂಗಳೂರು ನಂತರ ಬೀದರ ಸಹ ಒಂದಾಗಿತ್ತು. ನಂತರ ಸೋಂಕಿತರ ಕೇಸ್‌ಗಳು ಕುಸಿಯುತ್ತ ಬಂದಿದ್ದರಿಂದ ಜಿಲ್ಲೆಯ ಜನರು ನಿಟ್ಟಿಸಿರುವ ಬಿಟ್ಟಿದ್ದರು. ಇದರಿಂದ ಜನಜೀವನ ಸಹ ಯಥಾಸ್ಥಿತಿಗೆ ತಲುಪುತ್ತಿತ್ತು. ಆದರೆ ಅಷ್ಟರಲ್ಲೇ ಈಗ ಮತ್ತೂಮ್ಮೆ ಜಿಲ್ಲೆಗೆ “ಮಹಾ’ ಕಂಟಕ ಶುರುವಾಗಿದೆ. ವ್ಯಾಪಾರ ವಹಿವಾಟು, ಉದ್ಯೋಗ ಮತ್ತು ಕೌಟುಂಬಿಕ ಸಂಬಂಧ ಹಿನ್ನೆಲೆ ಮಹಾರಾಷ್ಟ್ರಕ್ಕೆ ಓಡಾಟ ಹೆಚ್ಚಾಗಿರುವುದು ಮತ್ತೆ ಕೋವಿಡ್ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗುತ್ತಿದೆ.
ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ 120 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಈ ಸಂಖ್ಯೆ ಕಳೆದ ಮೂರು ತಿಂಗಳಲ್ಲೇ ಅತಿ ಹೆಚ್ಚಿನ ದಾಖಲೆ ಎನಿಸಿದೆ. ಪಾಸಿಟಿವ್ ಪ್ರಕರಣಗಳ ಹೆಚ್ಚಳದೊಂದಿಗೆ ಜಿಲ್ಲೆಯಲ್ಲಿ ಮಾ.13ರವರೆಗೆ ಸಕ್ರಿಯ ಕೇಸ್ ಗಳ ಒಟ್ಟು ಸಂಖ್ಯೆ ಈಗ 108ಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಈವರೆಗೆ 7722 ಸೋಂಕಿತರು ಪತ್ತೆಯಾಗಿದ್ದು, 7436 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಟ್ಟು 174 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಕೋವಿಡ್ ಸೋಂಕಿನ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿದ್ದರೂ ಜಿಲ್ಲೆಯಲ್ಲಿ ಸಾರ್ವಜನಿಕರು ನಿಯಮಗಳನ್ನು ಪಾಲಿಸುವಲ್ಲಿ ಮೈಮರೆತ್ತಿರುವುದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಬರುವ ದಿನಗಳಲ್ಲಿ ದೊಡ್ಡ ಅಪಾಯ ಎದುರಾಗುವಂತೆ ಕಾಣಿಸುತ್ತಿದೆ. ಜತೆಗೆ ಮಹಾರಾಷ್ಟ್ರ ಗಡಿಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯದಲ್ಲೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ಕ್ರಮ ವಹಿಸುವ ಮೂಲಕ ಮುಂದೆ ಎದುರಾಗಬಹುದಾದ ಗಂಡಾಂತರ ತಪ್ಪಿಸಬೇಕಿದೆ.
ಶಶಿಕಾಂತ ಬಂಬುಳಗೆ