ಟೋಕಿಯೊ: ಜಾಗತಿಕ ಕ್ರೀಡಾ ಕೂಟವಾದ ಒಲಿಂಪಿಕ್ಸ್ ಆರಂಭಕ್ಕೆ ಐದು ದಿನ ಬಾಕಿ ಉಳಿದಿರುವಂತೆ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಮೊದಲ ಕೋವಿಡ್ ಪ್ರಕರಣ ದಾಖಲಾಗಿದೆ. ಶನಿವಾರ ಕೂಟದ ಸಂಘಟಕರು ಈ ಕುರಿತು ಮಾಹಿತಿ ನೀಡಿದ್ದಾರೆ.
“ಕ್ರೀಡಾ ಗ್ರಾಮದಲ್ಲಿ ಒಬ್ಬ ವ್ಯಕ್ತಿಗೆ ಸ್ಕ್ರೀನಿಂಗ್ ಪರೀಕ್ಷೆ ವೇಳೆ ಕೋವಿಡ್ ದೃಢಪಟ್ಟಿದೆ. ಇದು ಇಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ’ ಎಂದು ಟೋಕಿಯೊ ಒಲಿಂಪಿಕ್ಸ್ ಸಂಘಟನಾ ಸಮಿತಿಯ ವಕ್ತಾರ, ಮಾಸ ಟಕಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿಯ ಗುರುತು ಮತ್ತು ಹೆಚ್ಚಿನ ಮಾಹಿತಿ ನೀಡಲಾಗಿಲ್ಲ. ಆದರೆ ಈತ ಆ್ಯತ್ಲೀಟ್ ಅಲ್ಲ ಎಂದಷ್ಟೇ ತಿಳಿಸಲಾಗಿದೆ. ಸಾವಿರಾರು ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಇರುವ ಕ್ರೀಡಾಗ್ರಾಮದಿಂದ ಸೋಂಕಿತನನ್ನು ಬೇರೆಡೆಗೆ ಸ್ಥಳಾಂತರಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
“ಕೋವಿಡ್ ಹರಡುವಿಕೆ ತಡೆಗಟ್ಟಲು ನಾವು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಕೋವಿಡ್ ನಿರ್ವಹಣೆಗೆ ನಮ್ಮ ಬಳಿ ಸೂಕ್ತ ಯೋಜನೆ ಇದೆ’ ಎಂಬುದು ಕ್ರೀಡಾಕೂಟದ ಮುಖ್ಯ ಸಂಘಟಕ ಸೀಕೊ ಹಶಿಮೊಟೊ ಹೇಳಿಕೆ.
ಇದನ್ನೂ ಓದಿ :ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತಿ ದುಬಾರಿ “ಫ್ರೆಂಚ್ ಫ್ರೈಸ್’
ಒಟ್ಟು 44 ಮಂದಿಗೆ ಸೋಂಕು
ಜುಲೈ ಒಂದರಿಂದ ಈ ವರೆಗೆ ಒಲಿಂಪಿಕ್ಸ್ ಕ್ರೀಡಾಗ್ರಾಮದ ವ್ಯಾಪ್ತಿಯಲ್ಲಿ 44 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ ಒಬ್ಬ ಆ್ಯತ್ಲೀಟ್, ಉಳಿದ ಮೂವರು ಮಾಧ್ಯಮವರಾಗಿದ್ದಾರೆ. ಉಳಿದವರ್ಯಾರೂ ಕ್ರೀಡೆಗೆ ಸಂಬಂಧಿಸಿ ದವರಲ್ಲ. ಬಹುತೇಕ ಸೋಂಕಿತರು ಅಲ್ಲಿನ ಕಾಮಗಾರಿಗಳ ಗುತ್ತಿಗೆದಾರರು. ಸೋಂಕಿತರ ಪೈಕಿ 12 ಮಂದಿ ಅನಿವಾಸಿ ಜಪಾನೀಯರೂ ಇದ್ದಾರೆ.