Advertisement
15 ಸಾವಿರ ಕೋವಿಡ್ ಯೋಧರಿಗೆ ಸೋಂಕು: ಆರೋಗ್ಯ ಸೇವಾ ಕಾರ್ಯಕರ್ತರು ಸೇರಿದಂತೆ ದೇಶದ 15 ಸಾವಿರಕ್ಕೂ ಅಧಿಕ ಮಂದಿ ಕೋವಿಡ್ ವಾರಿಯರ್ಸ್‌ಗೆ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ. ಜುಲೈ 17ರವರೆಗೆ ವೈದ್ಯರು, ದಾದಿಯರು, ಆಸ್ಪತ್ರೆಯ ಇತರೆ ಸಿಬಂದಿ ಸೇರಿದಂತೆ 15,200ರಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ. 90ಕ್ಕೂ ಹೆಚ್ಚು ವೈದ್ಯರು ಸೋಂಕಿಗೆ ಬಲಿಯಾಗಿರುವುದಾಗಿ ಇತ್ತೀಚೆಗೆ ರಾಷ್ಟ್ರೀಯ ಕೋವಿಡ್ ರಿಜಿಸ್ಟ್ರಿಯಲ್ಲಿ ಉಲ್ಲೇಖೀಸಲಾಗಿತ್ತು.
ಕೇರಳದ ತಿರುವನಂತಪುರ ಜಿಲ್ಲೆಯ ಕರಾವಳಿ ಭಾಗದ ಮೂರು ಕಂಟೈನ್‌ಮೆಂಟ್ ವಲಯಗಳ ಮೇಲೆ ಶನಿವಾರ 10 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಜಾರಿ ಗೊಳಿಸಲಾಗಿದೆ. ತಿರುವನಂತಪುರಂನಲ್ಲಿ ಕೋವಿಡ್ ಸೋಂಕು ಸಮುದಾಯ ಮಟ್ಟದಲ್ಲಿ ಹರಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ ಮರು ದಿನವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜು. 18ರ ಮಧ್ಯರಾತ್ರಿ 12 ಗಂಟೆಯಿಂದ, ಜು. 28ರ ಮಧ್ಯರಾತ್ರಿ 12 ಗಂಟೆ ವರೆಗೆ ಮೂರು ವಲಯಗಳಲ್ಲಿ ಕಠಿಣ ಲಾಕ್‌ಡೌನ್ ವಿಧಿಸಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಕೋವಿಡ್ ಕೇಂದ್ರಕ್ಕೆ ಅಸ್ತು
ಹೊಸದಿಲ್ಲಿ: ಗೇಟೆಡ್ ಸಮುದಾಯಗಳು, ಅಪಾರ್ಟ್‌ಮೆಂಟ್‌ಗಳು, ಸಂಕೀರ್ಣದೊಳಗೆ ಸಣ್ಣ ಪ್ರಮಾಣದ “ಕೋವಿಡ್ ಕೇರ್ ಸೆಂಟರ್’ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಕೇಂದ್ರಗಳು ತಾತ್ಕಾಲಿಕ ಸೌಲಭ್ಯಗಳಾಗಿದ್ದು, ಎನ್‌ಜಿಒಗಳೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಲಕ್ಷಣರಹಿತ, ಆರಂಭಿಕ ಹಂತದಲ್ಲಿರುವ, ಸೌಮ್ಯರೂಪದ ಕೋವಿಡ್ ಸೋಂಕು ಹೊಂದಿದ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಬಹುದು. ಆದರೆ, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು/ಹಾಲುಣಿಸುವ ತಾಯಂದಿರಿಗೆ, ವಯಸ್ಸಾದ ಕೋವಿಡ್ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡುವಂತಿಲ್ಲ.