Advertisement

ರಾಜ್ಯದಲ್ಲಿ ಕೋವಿಡ್ ಅಲೆ : ಜನರೇ ಭೀತಿ ಬೇಡ; ಪ್ರತ್ಯಸ್ತ್ರಗಳಿವೆ

11:22 PM Apr 03, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ವ್ಯಾಪಿಸುತ್ತಿದೆ. ಹಾಗೆಂದು ಜನರು ಭೀತಿಗೆ ಒಳಗಾಗುವ ಅಗತ್ಯವಿಲ್ಲ. ಅದನ್ನು ಎದುರಿಸಲು ಈಗ ಹಲವು ಪ್ರತ್ಯಸ್ತ್ರಗಳಿವೆ.

Advertisement

ಈಗಾಗಲೇ ರಾಜ್ಯದಲ್ಲಿ 40 ಲಕ್ಷಕ್ಕೂ ಅಧಿಕ ಮಂದಿ ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಿ ಕೊಂಡಿದ್ದಾರೆ. ಮೊದಲ ಅಲೆಯಿಂದ ಎಚ್ಚೆತ್ತು ಜನರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಂಡರೆ, ಸರಕಾರ ಕೂಡ ವೈದ್ಯಕೀಯ ಸೌಲಭ್ಯ ಗಳನ್ನು ಬಲಪಡಿಸಿಕೊಂಡಿದೆ. ಈ ಕಾರಣ ಗಳಿಂದಲೇ ಪ್ರಕರಣಗಳು ಹೆಚ್ಚಾದರೂ ಅದರ ಪರಿಣಾಮದ ತೀವ್ರತೆ ಹಿಂದಿನ ಅಲೆಗೆ ಹೋಲಿಸಿ ದರೆ ತುಸು ಕಡಿಮೆ ಇದೆ ಎನ್ನುತ್ತಾರೆ ತಜ್ಞರು.

ಮೊದಲ ಅಲೆಗೆ ಹೋಲಿಸಿದರೆ ಸದ್ಯ ರಾಜ್ಯ ದಲ್ಲಿ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಹಾಗೂ ಸೋಂಕಿತರ ಮರಣ ದರ, ತುರ್ತುನಿಗಾ ಘಟಕದ ರೋಗಿಗಳ ಪ್ರಮಾಣ ಕಡಿಮೆ ಇರುವುದು ಆಶಾದಾಯಕ ಅಂಶವಾಗಿದೆ.

ಅನುಭವದ ಪಾಠ
ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ಒಂದು ವರ್ಷದ ಕೊರೊನಾ ಸೋಂಕಿನ ಅನುಭವವಿದೆ.
ಜನರಿಗೆ ಲಾಕ್‌ಡೌನ್‌, ಕ್ವಾರಂಟೈನ್‌ ಪಾಠವೂ ಆಗಿದೆ. ಇವುಗಳಿಂದ ಸೋಂಕಿನ ಮುಂಜಾಗ್ರತಾ ಕ್ರಮ, ಅರಿವು ಹೆಚ್ಚಳವಾಗಿದೆ.

ಆಹಾರಪದ್ಧತಿ, ಜೀವನ ಶೈಲಿ ಬದಲಾಯಿಸಿಕೊಂಡಿದ್ದಾರೆ. ಹಿರಿಯರು, ರೋಗಿಗಳು ಮನೆಗೆ ಸೀಮಿತವಾಗಿದ್ದಾರೆ. ಕಳೆದ ವರ್ಷ ಅನುಭವಿಸಿರುವ ಪರದಾಟದಿಂದ ಪಾಠ ಕಲಿತಿರುವ ಸರಕಾರವು ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ ಹಾಸಿಗೆ, ಐಸಿಯು ಘಟಕ, ವೆಂಟಿಲೇ ಟರ್‌ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

Advertisement

ಮೂರು ಪಟ್ಟು ಕಡಿಮೆ
ಕಳೆದ ವರ್ಷ ಸೋಂಕು 4,000 ಆಸುಪಾಸಿನಲ್ಲಿದ್ದಾಗ (ಜುಲೈ) ಮರಣ ದರ ಶೇ. 2ರಷ್ಟಿತ್ತು.ಅಂದರೆ ಸೋಂಕಿಗೊಳಗಾಗುವ 100 ಮಂದಿಯಲ್ಲಿ ಇಬ್ಬರು ಸಾವಿಗೀಡಾಗುತ್ತಿದ್ದರು. ಈಗ ಶೇ. 0.5ಕ್ಕಿಂತಲೂ ಕಡಿಮೆ ಇದೆ. ಅಂದರೆ, ಇಬ್ಬರು ಮಂದಿಗೆ ಒಬ್ಬರು ಸಾವಿಗೀಡಾಗುತ್ತಿದ್ದಾರೆ.

ಕಳೆದ ಜುಲೈಯಲ್ಲಿ ಸೋಂಕು ಪರೀಕ್ಷೆ ಪಾಸಿಟಿವಿಟಿ ದರ ಶೇ. 15ರಷ್ಟಿತ್ತು. ಸದ್ಯ 3.5ರಷ್ಟಿದೆ. ಆಗ ಪರೀಕ್ಷೆಗೊಳಗಾದ 100ರಲ್ಲಿ 15 ಮಂದಿಯಲ್ಲಿ ಸೋಂಕು ದೃಢಪಡುತ್ತಿತ್ತು. ಸದ್ಯ ಮೂರು ಅಥವಾ ನಾಲ್ಕು ಮಂದಿಯಲ್ಲಿ ಸೋಂಕು ದೃಢಪಡುತ್ತಿದೆ.

ನಿಯಂತ್ರಣದಲ್ಲಿದೆ
ಸದ್ಯ ರಾಜ್ಯದ 9 ಜಿಲ್ಲೆಗಳಲ್ಲಿ ಮಾತ್ರ ಸೋಂಕು ಹೆಚ್ಚಿದ್ದು, ಬಾಕಿ ಜಿಲ್ಲೆಗಳಲ್ಲಿ ನಿಯಂತ್ರಣದಲ್ಲಿದೆ. ಬಾಗಲಕೋಟೆ, ಗದಗ, ಚಿತ್ರದುರ್ಗ, ಕೊಪ್ಪಳ ಕೊಡಗು, ಯಾದಗಿರಿ, ದಾವಣಗೆರೆ, ಚಾಮರಾಜನಗರ, ಯಾದಗಿರಿ, ಹಾವೇರಿಯಲ್ಲಿ ಬೆರಳೆಣಿಕೆ ಪ್ರಕರಣಗಳು ವರದಿಯಾಗುತ್ತಿವೆ.

ಐಸಿಯುನಲ್ಲಿ ಶೇ. 1ಕ್ಕಿಂತಲೂ ಕಡಿಮೆ
ಸದ್ಯ ರಾಜ್ಯದಲ್ಲಿ 36,614 ಸಕ್ರಿಯ ಸೋಂಕಿತರಿದ್ದು, 327 ಮಂದಿ ತುರ್ತು ನಿಗಾ ಘಟಕದಲ್ಲಿದ್ದಾರೆ. ಶೇ. 9ರಷ್ಟು ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ನಾಳೆ ಶಿಕ್ಷಣ ಇಲಾಖೆ ಸಭೆ
ಒಂದರಿಂದ ಒಂಬತ್ತನೇ ತರಗತಿ ವರೆಗೆ ಮಕ್ಕಳಿಗೆ ಪರೀಕ್ಷೆ ನಡೆಸುವ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಎ. 5ರಂದು ಸಚಿವ ಎಸ್‌. ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಸಭೆ ಕರೆದಿದೆ. ಖಾಸಗಿ ಶಾಲೆಗಳ ಸಂಘಟನೆಗಳ ಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಸಭೆಗೆ ಪೋಷಕರ ಒಕ್ಕೂಟಕ್ಕೆ ಆಹ್ವಾನ ನೀಡದೇ ಇರುವುದರ ಬಗ್ಗೆಯೂ ಅತೃಪ್ತಿ ವ್ಯಕ್ತವಾಗಿದೆ.

ವಾರಿಯರ್ಸ್‌ ಸಿದ್ಧ
ಮೊದಲ ಅಲೆಯಲ್ಲಿ ಚಿಕಿತ್ಸೆ ನೀಡುವ ವೈದ್ಯರು, ಆರೈಕೆ ಮಾಡುವ ಶುಶ್ರೂಷಕರೇ ಹೆಚ್ಚು ಸೋಂಕಿತರಾಗುತ್ತಿದ್ದರು. ಆದರೆ ಈ ಬಾರಿ ಆ ಭಯ ಇಲ್ಲ. ಸದ್ಯ 5.6 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ. 3.5 ಲಕ್ಷ ಕಾರ್ಯಕರ್ತರು ಎರಡನೇ ಡೋಸ್‌ ಪೂರ್ಣ ಗೊಳಿಸಿದ್ದು, ರಕ್ಷಾ ಕವಚವನ್ನು ಪಡೆ ದಂತಾಗಿದೆ. 90 ಸಾವಿರಕ್ಕೂ ಅಧಿಕ ಮುಂಚೂಣಿ ಕಾರ್ಯಕರ್ತರು ಎರಡು ಡೋಸ್‌ ಲಸಿಕೆ ಪಡೆದು ಸೋಂಕಿನ ಹೋರಾಟಕ್ಕೆ ಸನ್ನದ್ಧರಾಗಿದ್ದಾರೆ.

ಹೊಟೇಲು, ಜಿಮ್‌ನವರ ಆಕ್ಷೇಪ
ಹೊಸ ಮಾರ್ಗ ಸೂಚಿಯ ಬಗ್ಗೆ ಹಲವು ವಲಯಗಳಿಂದ ಅಸಮಾಧಾನ ವ್ಯಕ್ತವಾಗಿದೆ. ಈ ಬಗ್ಗೆ ಜಿಮ್‌ ಮಾಲಕರು ಶನಿವಾರ ಸಿಎಂ ಯಡಿಯೂರಪ್ಪ ಅವರ ವಿಶೇಷ ಅಧಿಕಾರಿ ರಾಚಪ್ಪ ಅವ ರನ್ನು ಭೇಟಿ ಮಾಡಿ, ಈ ನಿರ್ಧಾರ ಸರಿಯಲ್ಲ. ಜಿಮ್‌ಗೂ ಶೇ. 50ರಷ್ಟು ಅವಕಾಶ ನೀಡಿ ಎಂದು ಮನವಿ ಸಲ್ಲಿಸಿದರು. ಮಾರ್ಗಸೂಚಿಯನ್ನು ಹೊಟೇಲ್‌ ಮತ್ತು ರೆಸ್ಟೋರೆಂಟ್‌ ಮಾಲಕರು ಪಾಲನೆ ಮಾಡುತ್ತಿದ್ದಾರೆ. ಮಾಸ್ಕ್ ಧರಿಸದೆ ಹೊಟೇಲ್‌ನಲ್ಲಿ ಕುಳಿತುಕೊಳ್ಳುವ ಗ್ರಾಹಕರಿಗೆ ದಂಡಹಾಕುವ ಬದಲು ದಂಡವನ್ನು ಹೊಟೇಲ್‌ ಮಾಲಕರಿಂದ ವಸೂಲಿ ಮಾಡುವ ಬಿಬಿಎಂಪಿ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ರಾಜ್ಯ ಹೊಟೇಲ್‌ ಮತ್ತು ರೆಸ್ಟೋರೆಂಟ್‌ ಮಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಟಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next