ಬೆಂಗಳೂರು : ರಾಜಧಾನಿ ಬೆಂಗಳೂರಿನಾದ್ಯಂತ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವುದು ಹಾಗೂ ಕೊವೀಡ್-19 ಗೆ ಮೀಸಲಿಟ್ಟ ಆಸ್ಪತ್ರೆಗಳನ್ನು ಪರಿಶೀಲಿಸುವ ಸಲುವಾಗಿ, ಕರ್ನಾಟಕ ಸರ್ಕಾರದ ವಸತಿ ಸಚಿವರು ಹಾಗೂ ಬೆಂಗಳೂರು ಉತ್ತರ ವಿಭಾಗದ ಕೊವೀಡ್ ಉಸ್ತುವಾರಿ ವಹಿಸಿಕೊಂಡಿರುವ ವಿ.ಸೋಮಣ್ಣ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರವರು ಕೋವಿಡ್ ಕೇಂದ್ರಗಳ ಪರಿವೀಕ್ಷಣೆ ನಡೆಸಿದರು.
ಸಂಜಯ್ ನಗರದಿಂದ ಕಾರ್ಯಚರಣೆ ಆರಂಭಿಸಿದ ಮಾನ್ಯ ಸಚಿವರು ಹಾಗೂ ಮಾಜಿ ಸಚಿವರು ಹೆಬ್ಬಾಳ, ಬ್ಯಾಪ್ಟಿಸ್ಟ್, ಗಂಗಾ ನಗರ, ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೋವಿಡ್-19 ಪರೀಕ್ಷೆಗೆ ಮೀಸಲಿಟ್ಟ ಅಸ್ಪತ್ರೆಗಳಿಗೆ ಭೇಟಿ ನೀಡಿ, ಆಸ್ಪತ್ರೆಗಳಲ್ಲಿ ಒದಗಿಸಿರುವ ಮೂಲಭೂತ ಸೌಕರ್ಯಗಳು, ಹಾಗೂ ಸೋಂಕಿತರನ್ನು ಗುಣಪಡಿಸಲು ತೆಗೆದುಕೊಳುತ್ತಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿದರು.
ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಕೋವಿಡ್19 ಪ್ರಕರಣಗಳು ದಾಖಲಾಗುತ್ತಿದ್ದು, ಆಸ್ಪತ್ರೆಗಳು ಹಾಗೂ ಕೊರೋನಾ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸುವ ಸಲುವಾಗಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿರುವ ವೆಟರ್ನರಿ ಕಾಲೇಜಿನ ಬಾಲಕರ ಹಾಸ್ಟೆಲ್ ಗೆ ಭೇಟಿ ನೀಡಿ, ಕೋವಿಡ್ ಕೇರ್ ಸೆಂಟರ್ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಲಾಯಿತು.
ಕೋವಿಡ್19 ಸೋಂಕಿತರಿಗೆ ಚಿಕಿತ್ಸೆ ನೀಡಲು, ಹಾಸ್ಟೆಲ್ ಕಟ್ಟಡವನ್ನು 250 ಹಾಸಿಗೆಯ ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತಿಸಲು ನಿರ್ಧರಿಸಿದ್ದು, ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳನ್ನು ಅವರ ಊರಿಗೆ ಕಳಿಸುವುದು, ಇಲ್ಲವೇ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರ ಕುರಿತಂತೆ ಸಚಿವರಾದ ವಿ ಸೋಮಣ್ಣ ಹಾಗೂ ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಶೀಘ್ರವಾಗಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಅಧಿಕಾರಿಗೆ ಸೂಚಿಸಿದರು.
ಇದೆ ವೇಳೆ ಸಂಜಯನಗರ ಫೀವರ್ ಕ್ಲಿನಿಕ್ ಗೆ ಭೇಟಿ ನೀಡಿದ ಸಚಿವರು,ಹಾಗೂ ಮಾಜಿ ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳು, ಹಾಗೂ ವೈದ್ಯರನ್ನು ಭೇಟಿ ಮಾಡಿ, ಕೋವಿಡ್ ನಿಯಂತ್ರಣಕ್ಕೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಕುರಿತಂತೆ ಚರ್ಚೆ ನಡೆಸಲಾಯಿತು.