ಕೊರೊನಾ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹಬ್ಬಿರುವುದು ಸರಕಾರಕ್ಕೆ ದೊಡ್ಡ ತಲೆನೋವು ಹಾಗೂ ಸವಾಲಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದಲ್ಲಿ ನಗರ ಪ್ರದೇಶಗಳಂತೆ ತ್ವರಿತ ತಪಾಸಣೆ, ಚಿಕಿತ್ಸೆ ವ್ಯವಸ್ಥೆ ಹಾಗೂ ಶೇ.95ರಷ್ಟು ಕಡೆ ಹೋಂ ಐಸೊಲೇಶನ್‌ಗೂ ವ್ಯವಸ್ಥೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೆ ಗ್ರಾಮೀಣ ಭಾಗಕ್ಕೆ ಕೊರೊನಾ ಹಬ್ಬದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೂ ಕರ್ನಾಟಕದಲ್ಲಿ ಕೊರೊನಾ ಗ್ರಾಮೀಣ ಭಾಗಕ್ಕೆ ಹಬ್ಬಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ.
ಹೀಗಾಗಿ ರಾಜ್ಯ ಸರಕಾರ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿತರು, ನಗರ ಮತ್ತು ಪಟ್ಟಣ ಪ್ರದೇಶದ ಕೊಳಗೇರಿಗಳಲ್ಲಿನ ಸೋಂಕಿತರು ಹೋಂ ಐಸೊಲೇಶನ್‌ನಲ್ಲಿ ಇರದಂತೆ ನೋಡಿಕೊಳ್ಳಲು ಮುಂದಾಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಾಪಿಸಿ ಅಲ್ಲಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಕೆಲಸಕ್ಕೆ ಮುಂದಾಗಿದೆ. ಈ ಕೆಲಸ ಮುಂಚೆಯೇ ಆಗಬೇಕಿತ್ತು. ನಿಧಾನವಾದರೂ ಪರಿಸ್ಥಿತಿಯ ತೀವ್ರತೆ ಅರಿತು ಸರಕಾರ ಅಗತ್ಯ ಹಾಗೂ ಅನಿವಾರ್ಯತೆಯ ನಿರ್ಧಾರ ಕೈಗೊಂಡಿದೆ.
ಆದರೆ ಗ್ರಾಮೀಣ ಭಾಗ ಹಾಗೂ ನಗರ ಪಟ್ಟಣದ ಕೊಳೆಗೇರಿ ಪ್ರದೇಶ ಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಹಾಗೂ ಅದಕ್ಕೆ ಬೇಕಾದ ಮೂಲಸೌಕರ್ಯ ಕಲ್ಪಿಸುವುದು ಹೇಳಿದಷ್ಟು ಅಥವಾ ಅಂದುಕೊಂಡಷ್ಟು ಸುಲಭವಲ್ಲ. ಮನೆಯಿಂದ ಕಿ.ಲೋ. ಮೀಟರ್‌ಗಟ್ಟಲೆ ದೂರ ಇದ್ದರೆ ಕೊರೊನಾ ಕೇರ್ ಸೆಂಟರ್‌ಗೆ ದಾಖಲಾಗಲು ಜನ ಒಪ್ಪುವುದಿಲ್ಲ, ಅವರವರ ಮನೆಯ ಹತ್ತಿರವೇ ಕೊರೊನಾ ಕೇರ್ ಸೆಂಟರ್ ಸ್ಥಾಪಿಸಲು ಜಾಗದ ಕೊರತೆ ಇದೆ. ಜತೆಗೆ ವೈದ್ಯಕೀಯ ಸಿಬಂದಿ ಮತ್ತು ಮೂಲಸೌಕರ್ಯ ಒದಗಿಸುವುದು ಸವಾಲಿನ ಕೆಲಸ. ಕೊರೊನಾ ಕಾರ್ಯಪಡೆ ಪರಿಣಿತರ ಸಲಹೆಯಂತೆ ಎಲ್ಲ ಸಾಧಕ ಬಾಧಕ ಯೋಚಿ ಸಿಯೇ ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ನ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವ ಕಾರ್ಯಕ್ಕೆ ಮುಂದಾಗಿದೆ. ಆ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಿರುವುದು ಸ್ವಾಗತಾರ್ಹ.
ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ವರದಿಗಳ ಹಿನ್ನೆಲೆ ಯಲ್ಲೂ ಇದು ಮಹತ್ವ ಪಡೆದಿದೆ. ಎರಡನೇ ಅಲೆ ಬಗ್ಗೆ ಸ್ವಲ್ಪ ಮಟ್ಟಿಗೆ ಮೈ ಮರೆತ ಸರಕಾರ ಮೂರನೇ ಅಲೆ ವಿಚಾರದಲ್ಲಿ ಈಗಿನಿಂದಲೇ ಎಚ್ಚೆತ್ತು ಕೊಂಡು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಗ್ರಾಮೀಣ ಭಾಗದಲ್ಲಿ ಸರಕಾರ ಈಗ ಯೋಚಿಸಿರುವಂತೆ ತತ್‌ಕ್ಷಣವೇ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪಂಚಾ ಯತ್, ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಶಾಶ್ವತ ವ್ಯವಸ್ಥೆ ಮಾಡ ಬೇಕು. ಇದಕ್ಕಾಗಿ ವಿಶೇಷ ಅನುದಾನ ಸಹ ನಿಗದಿ ಮಾಡಬೇಕು. ವೈದ್ಯಕೀಯ ಸಿಬಂದಿ ಮತ್ತು ಸೌಕರ್ಯದ ಬಗ್ಗೆಯೂ ಗಮನ ಹರಿಸಬೇಕು. ಕೇವಲ ಕೋವಿಡ್ ಕೇರ್ ಸೆಂಟರ್ ಮಾಡಿ ಸವಲತ್ತು ಇಲ್ಲದಿದ್ದರೂ ಉದ್ದೇಶ ಸಾಕಾರವಾಗದು. ಕೊರೊನಾ ಸೋಂಕಿತರು ಮೊದಲಿಗೆ ಆರೈಕೆ ಕೇಂದ್ರದಲ್ಲಿ ದಾಖಲಾದ ಅನಂತರವಷ್ಟೇ ಆಸ್ಪತ್ರೆಯಲ್ಲಿ ಹಾಸಿಗೆ ಅಥವಾ ಇತರ ಚಿಕಿತ್ಸೆ ಬೇಕಾ ಬೇಡವಾ ಎಂಬ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿರುವುದು ಒಂದು ರೀತಿಯಲ್ಲಿ ಅಗತ್ಯ ಇಲ್ಲದವರೂ ಹಾಸಿಗೆ ಪಡೆದು ತುರ್ತು ಇರುವವರು ಹಾಸಿಗೆ ಸಿಗದೆ ಸಾವನ್ನಪ್ಪುವ ಪ್ರಕರಣ ತಡೆಗಟ್ಟಲು ಸಹಕಾರಿಯಾಗಿದೆ.