Advertisement

ಹಿಂದೆ ತ್ರಿಸ್ತರ ವ್ಯವಸ್ಥೆ, ಮುಂದೆ ದ್ವಿಸ್ತರ ವ್ಯವಸ್ಥೆ

09:02 PM Aug 01, 2021 | Team Udayavani |

ಉಡುಪಿ: ಇನ್ನು ಮುಂದೆ ಜಿಲ್ಲೆಯಲ್ಲಿ ಹೋಂ ಐಸೊಲೇಶನ್‌ ಪ್ರಮಾಣ ಕಡಿಮೆಯಾಗಲಿದ್ದು ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ (ಸಿಸಿಸಿ) ದಾಖಲಿಸಲು ಕ್ರಮ ವಹಿಸಲಾಗುತ್ತಿದೆ.

Advertisement

ಇಷ್ಟು ಸಮಯ ರೋಗಲಕ್ಷಣಗಳಿರದ, ಮನೆಯಲ್ಲಿ ಸಾಕಷ್ಟು ವ್ಯವಸ್ಥೆಗಳಿರುವವರಿಗೆ ಹೋಂ ಐಸೊಲೇಶನ್‌, ಮನೆ ವ್ಯವಸ್ಥೆ ತಕ್ಕಷ್ಟು ಇಲ್ಲದವರಿಗೆ ಕೋವಿಡ್‌ ಕೇರ್‌ ಸೆಂಟರ್‌ ಮತ್ತು ಹೆಚ್ಚಿನ ಮಟ್ಟದ ಚಿಕಿತ್ಸೆ ಅಗತ್ಯವುಳ್ಳವರಿಗೆ ಆಸ್ಪತ್ರೆಗಳ ಚಿಕಿತ್ಸೆ ಈ ಮೂರು ಹಂತಗಳಲ್ಲಿ ಕೊರೊನಾ ಸೋಂಕಿತರನ್ನು ನಿಭಾಯಿಸಲಾಗುತ್ತಿತ್ತು. ಇನ್ನು ಮುಂದೆ ಈ ತ್ರಿಸ್ತರ ವ್ಯವಸ್ಥೆ ದ್ವಿಸ್ತರ ವ್ಯವಸ್ಥೆಯಾಗಲಿದೆ.

ಮುಖ್ಯಮಂತ್ರಿ ವೀಡಿಯೋ ಕಾನ್ಫರೆನ್ಸ್‌ ಹೋಂ ಐಸೊಲೇಶನ್‌ಗೆ ಉತ್ತೇಜನ ನೀಡದೆ ಸಿಸಿಸಿಯಲ್ಲಿ ನಿಗಾ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರ ಜಿಲ್ಲಾಡಳಿತ ತಂಡದೊಂದಿಗೆ ನಡೆದ ವೀಡಿಯೋ  ಕಾನ್ಫರೆನ್ಸ್‌ನಲ್ಲಿ ನಿರ್ದೇಶನ ನೀಡಿದ್ದಾರೆ.

ಕೇರಳದಲ್ಲಿ ಸೋಂಕು ಹೆಚ್ಚುತ್ತಿರುವುದರಿಂದ ಗಡಿ ತಪಾಸಣೆ ಗರಿಷ್ಠಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿ ದ್ದಾರೆ. ಉಡುಪಿ ಜಿಲ್ಲೆಯಲ್ಲಿ ಹತ್ತು ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ. ಇಲ್ಲಿ ಕೇರಳದ ಸಂಖ್ಯೆ ಹೊಂದಿರುವ ವಾಹನಗಳ ಮೇಲೆ ಪೊಲೀಸರು ನಿಗಾ ಇಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರಗತಿ ಪರಿ ಶೀಲನೆಯಲ್ಲಿ ಬೊಮ್ಮಾಯಿ ಅವರು ಕೊರೊನಾ ಪಾಸಿಟಿವ್‌ ಬಂದವರಿಗೆ ಹೋಂ ಐಸೊಲೇಶನ್‌ ಸಲ್ಲದು, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ (ಸಿಸಿಸಿ) ದಾಖಲಿಸಬೇಕು ಎಂದಿದ್ದರು. ಇದಕ್ಕೆ ಅವರು ಆಗ ಕೊಟ್ಟ ಕಾರಣವೆಂದರೆ ಸೋಂಕಿತರು ಮನೆಯಲ್ಲಿದ್ದಾಗ ಎಲ್ಲೆಂದರಲ್ಲಿ ಹೋಗುತ್ತಾರೆ, ಕನಿಷ್ಠ ಹೆಂಡತಿ, ಮಕ್ಕಳ ಸಂಪರ್ಕಕ್ಕಾದರೂ ಬರುತ್ತಾರೆ. ಇವರನ್ನು ನಿಗಾ ವಹಿಸಲು ನೇಮಿಸಿದ ಸಿಬಂದಿ  ವರದಿ ಕೊಡುತ್ತಿದ್ದರೂ ವರದಿ ಎಷ್ಟು ಸಾಚಾ ಇರುತ್ತದೆ ಎಂಬುದು ಗೊತ್ತಿರುತ್ತದೆ. ಸ್ಥಳಕ್ಕೆ ಹೋಗದೆ ವರದಿಯನ್ನು ಅಪ್‌ಲೋಡ್‌ ಮಾಡುತ್ತಾರೆ. ಆದ್ದರಿಂದ ಎಷ್ಟು ಮಾತ್ರಕ್ಕೂ ಐಸೊಲೇಶನ್‌ ಕೂಡದು, ನಾನು ಹಿಂದೆಯೇ ಹೇಳಿದ್ದೆ. ಆದರೆ ಹೀಗೆ ಮಾಡಲಿಲ್ಲ ಎಂದು ಅಸಮಾಧಾನ ಸೂಚಿಸಿದ್ದನ್ನು ನೆನಪಿಸಬಹುದು.

Advertisement

ದೇವಸ್ಥಾನಗಳು ಈಗ ತೆರೆದಿರುವುದರಿಂದ ಭಕ್ತರಿಗೆ ಸೋಂಕು ವ್ಯಾಪಿಸದಂತೆ ಕ್ರಮ ವಹಿಸಬೇಕಾಗಿದೆ. ಇದಕ್ಕಾಗಿ ಆಡಳಿತ ಮೊಕ್ತೇಸರರ ಸಭೆ ಕರೆದು ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಲಾಗುತ್ತದೆ. ಸಾರ್ವಜನಿಕ ಸಭೆಗಳನ್ನು ನಡೆಸಬಾರದು ಎಂಬ ಆದೇಶ ಹೊರಬೀಳುವ ಸಾಧ್ಯತೆಗಳಿವೆ.

ಇದುವರೆಗೆ ರೈಲ್ವೇ ನಿಲ್ದಾಣಗಳಲ್ಲಿ ಬಂದಿಳಿಯುವವರನ್ನು ಕಟ್ಟುನಿಟ್ಟಿನಲ್ಲಿ ತಪಾಸಣೆ ನಡೆಸುತ್ತಿಲ್ಲ. ಮುಂದೆ ಪ್ರಯಾಣಿಕರು ವ್ಯಾಕ್ಸಿನ್‌ ಪಡೆದಿರಬೇಕು ಮತ್ತು ಗಂಟಲುದ್ರವ ಪರೀಕ್ಷೆಯ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಬೇಕು ಎಂಬ ನಿಯಮ ಕಡ್ಡಾಯವಾಗಲಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸೋಂಕಿತರ ಪ್ರಮಾಣ ಹೆಚ್ಚು ಇದ್ದು ಇವರು ಬೇರೆಡೆ ತೆರಳಿ ಸೋಂಕು ಹೆಚ್ಚಿಸುವುದನ್ನು ತಡೆಗಟ್ಟಲು ಈ ಕ್ರಮ ವಹಿಸಲಾಗುತ್ತಿದೆ.

ಗಂಟಲುದ್ರವ ಪರೀಕ್ಷೆಯ ಪ್ರಮಾಣವನ್ನೂ ಹೆಚ್ಚಿಸಲಾಗುತ್ತದೆ. ಈಗ ನಿರೀಕ್ಷಿಸಿದಷ್ಟು ವ್ಯಾಕ್ಸಿನ್‌ ಪೂರೈಕೆ ಆಗುತ್ತಿಲ್ಲ. ಸದ್ಯ ಒಂದು ಕೋಟಿ ಡೋಸ್‌ನ್ನು ರಾಜ್ಯಕ್ಕೆ ಕಳುಹಿಸಲು ಮುಖ್ಯಮಂತ್ರಿಗಳು ಕೇಂದ್ರ ಸರಕಾರವನ್ನು ಕೋರಿರುವುದರಿಂದ ಜಿಲ್ಲೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಆಗಲಿದೆ.   ಮೂರನೆಯ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಶಂಕೆ ಇದ್ದು ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ಯಾವ ಕಾಯಿಲೆಗಳಿಗೆ ಉಚಿತ ಸೇವೆ ಸಿಗುವುದಿಲ್ಲವೋ ಅಂತಹ ಕಾಯಿಲೆಗಳಿಗೂ ಉಚಿತ ಸೇವೆ ಸಿಗುವಂತೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ :

3ನೇ ಅಲೆ ಮುನ್ನೆಚ್ಚರಿಕೆ ಕ್ರಮವಾಗಿ ವಾತ್ಸಲ್ಯ ಯೋಜನೆಯಡಿ ಜಿಲ್ಲೆಯ ಎಲ್ಲ ಶಾಲಾ ವಿದ್ಯಾರ್ಥಿ ಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಎಂಡೋ ಪೀಡಿತ ಮನೆಯವರಿಗೆ ಲಸಿಕೆ ವಿತರಿಸಲಾಗುತ್ತಿದೆ. ಅಪೌಷ್ಟಿಕತೆ ಹೊಂದಿರುವ ಮಕ್ಕಳ ಮನೆಯವರಿಗೆ ಲಸಿಕೆ ವಿತರಿಸಲು ಕ್ರಮ ವಹಿಸಲಾಗುತ್ತಿದೆ. ಇದರಿಂದ ಆ ಮನೆಯವರಿಗೆ ರಕ್ಷಣೆ ಒದಗಿಸಿದಂತಾಗುತ್ತದೆ ಎಂದು ಜಗದೀಶ್‌ ಹೇಳಿದರು.

ಮಕ್ಕಳ 50 ಐಸಿಯು ಬೆಡ್‌ :

ಮಕ್ಕಳ 50 ಐಸಿಯು ಬೆಡ್‌ ನಿರ್ಮಾಣಕ್ಕೆ ಬೇಕಾದ ಕ್ರಮ ಕೈಗೊಂಡಿದ್ದು ನಿರ್ಮಿತಿ ಕೇಂದ್ರಕ್ಕೆ ಕಾರ್ಯಾದೇಶ ನೀಡಲಾಗಿದೆ. ಆಕ್ಸಿಜನ್‌ ಉತ್ಪಾದನ ಘಟಕಗಳ ಪೈಕಿ ಹೆಬ್ರಿಯಲ್ಲಿ ಆರಂಭವಾಗಿದ್ದು, ಕಾರ್ಕಳದಲ್ಲಿ ಯಂತ್ರಗಳು ಬಂದಿವೆ. ಉಡುಪಿಯಲ್ಲಿ ಇನ್ನೆರಡು ದಿನಗಳಲ್ಲಿ, ಕುಂದಾಪುರದಲ್ಲಿ ಒಂದು ವಾರದಲ್ಲಿ ಬರಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next