Advertisement

ತಾಲೂಕು ಕೇಂದ್ರಗಳಲ್ಲೂ ಕೋವಿಡ್‌ ಕೇರ್‌ ಸೆಂಟರ್‌

01:57 PM Aug 01, 2020 | Suhan S |

ಕಲಬುರಗಿ: ಕೋವಿಡ್ ಲಕ್ಷಣಗಳಿಲ್ಲದ ಸೋಂಕಿತರಿಗೆ ಆಯಾ ತಾಲೂಕು ಕೇಂದ್ರಗಳಲ್ಲೇ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮುಂದಾಗಿದ್ದು, ವಾರದೊಳಗೆ ಚಿಕಿತ್ಸಾ ಸೌಲಭ್ಯಕ್ಕೆ 100 ಹಾಸಿಗೆಗೆ ವ್ಯವಸ್ಥೆಯಾಗಲಿದೆ.

Advertisement

ವಯಸ್ಸಾದವರಿಗೆ ಹಾಗೂ ವಿವಿಧ ರೋಗಗಳ ಜತೆಗೆ ಕೋವಿಡ್ ಸೋಂಕಿತರಿಗೆ ಐಸಿಯು ವಾರ್ಡ್‌ ನಲ್ಲಿ ಚಿಕಿತ್ಸೆಗೆ ಕ್ರಮ ಕೈಗೊಂಡರೆ ಲಕ್ಷಣಗಳಿಲ್ಲದ ಸೋಂಕಿತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಜತೆಗೆ ಜಿಮ್ಸ್‌, ಇಎಸ್‌ಐ ಆಸ್ಪತ್ರೆ ಜತೆಗೆ ಟ್ರಾಮಾ ಸೆಂಟರ್‌ನಲ್ಲಿ ತೆರೆಯಲಾಗಿರುವ ಚಿಕಿತ್ಸಾ ವಾರ್ಡ್‌ ಫುಲ್ ಆಗುತ್ತಿರುವುದರಿಂದ ಆಯಾ ತಾಲೂಕು ಕೇಂದ್ರಗಳಲ್ಲೇ ಕೇರ್‌ ಸೆಂಟರ್‌ ತೆರೆಯುವ ಮುಖಾಂತರ ತಕ್ಷಣ ಸ್ಪಂದಿಸಲು ಹೆಜ್ಜೆ ಇಡಲಾಗುತ್ತಿದೆ.

ಕೋವಿಡ್ ಸೋಂಕಿತರಲ್ಲಿ ಅರ್ಧದಷ್ಟು ಜನರಿಗೆ ಕೋವಿಡ್ ಸೋಂಕಿನ ಲಕ್ಷಣಗಳೇ ಕಂಡು ಬರುತ್ತಿಲ್ಲ. ಹೀಗಾಗಿ ಇಂತವರಿಗೆ ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿಟ್ಟು ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈಗಾಗಲೇ ತಾಲೂಕು ಕೇಂದ್ರ ಸ್ಥಾನದಲ್ಲಿ ಸೆಂಟರ್ ಗೆ ಸ್ಥಳಾವಕಾಶ ಗುರುತಿಸಲಾಗಿದ್ದು, ಆದರೆ ತಾಲೂಕು ಆಸ್ಪತ್ರೆ ಬಿಟ್ಟು ಬೇರೆಡೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ ತಿಳಿಸಿದ್ದಾರೆ.

ಈಗಾಗಲೇ ಚಿತ್ತಾಪುರ ತಾಲೂಕು ಕೇಂದ್ರದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭವಾಗಿದೆ. ವಸತಿ ನಿಲಯಗಳಲ್ಲೇ ಸೆಂಟರ್‌ ಆರಂಭವಾಗುವ ಸಾಧ್ಯತೆಗಳೇ ಹೆಚ್ಚು. ರೋಗಿಗಳೇ ಬಂದು ನೇರವಾಗಿ ಐಸಿಯು ಬೆಡ್‌ ಕೇಳುವಂತಾಗಬಾರದು. ವೈದ್ಯರ ಸಲಹೆ ಹಾಗೂ ಶಿಫಾರಸ್ಸು ಮಾಡಬೇಕು. ತಾಲೂಕು ಆಸ್ಪತ್ರೆಯಲ್ಲೂ ಆಕ್ಸಿಜನ್‌ಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಣೆ ನೀಡಿದರು. ಲಕ್ಷಣಗಳಿಲ್ಲದ ಕೊರೊನಾ ಸೋಂಕಿತರು ಮನೆಯಲ್ಲೇ ಇದ್ದು, ಯಾರೊಂದಿಗೆ ಸಂಪರ್ಕಕ್ಕೆ ಬಾರದೇ ವ್ಯವಸ್ಥೆ ಮಾಡಿಕೊಂಡಿದ್ದರೆ ಮನೆಗೆ ಬಂದು ಮಾತ್ರೆಗಳನ್ನು ತಂದು ಕೊಡುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಯವರು ಸ್ಪಷ್ಟಪಡಿಸಿದರು.

ಜೀಮ್ಸ್‌ನಲ್ಲಿ ಇನ್ನೊಂದು ಪರೀಕ್ಷಾ ಕೇಂದ್ರ: ಜಿಮ್ಸ್‌ನಲ್ಲಿ ವಾರದೊಳಗೆ ಇನ್ನೊಂದು ಕೋವಿಡ್‌ ಪತ್ತೆ ಪರೀಕ್ಷಾ ಕೇಂದ್ರ ಕಾರ್ಯಾರಂಭವಾಗಲಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಿರುವ ಕೇಂದ್ರವೊಂದರಲ್ಲಿ ದಿನಕ್ಕೆ ಸಾವಿರ ಮಾದರಿಗಳನ್ನು ಪರೀಕ್ಷೆಯ ಫ‌ಲಿತಾಂಶ ನೀಡಬಹುದಾಗಿದ್ದು, ಇನ್ನೊಂದು ಕೇಂದ್ರವಾದಲ್ಲಿ ದಿನಕ್ಕೆ ಎರಡು ಸಾವಿರ ಫ‌ಲಿತಾಂಶಗಳನ್ನು ಪಡೆಯಬಹುದಾಗಿದೆ. ಇಎಸ್‌ಐಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆ ನಿಟ್ಟಿನಲ್ಲಿ ಪತ್ರ ಬರೆಯಲಾಗಿದೆ.

Advertisement

ಮೊಬೈಲ್‌ ವಾಹನ: ಆ್ಯಂಟಿಜೆನ್‌ ಪರೀಕ್ಷೆಗಳನ್ನು ನಡೆಸಲು ಕೆಲವು ಕಡೆ ಮೊಬೈಲ್‌ ವಾಹನಗಳೇ ತೆರಳಲಿವೆ. ಭಾರತೀಯ ಜೈನ್‌ ಸಂಘಟನೆ (ಬಿಜೆಎಸ್‌) 9 ವಾಹನಗಳನ್ನು ನೀಡಿದ್ದು, ಈ ವಾಹನಗಳಲ್ಲೇ ತಂಡ ತೆರಳಿ ಜನರ ಮಾದರಿಗಳನ್ನು ಪರೀಕ್ಷಿಸಲಿದೆ. ತಾಲೂಕೊಂದರಂತೆ ವಾಹನ ಸಂಚರಿಸಲಿದೆ. ಪಿಪಿಇ ಕಿಟ್‌ಗಳಿಗೆ ಕೊರತೆಯಿಲ್ಲ. ಮೊದಲು ರಾಜ್ಯ ಸರ್ಕಾರ ಮುಖಾಂತರವೇ ಪಡೆಯಬೇಕಿತ್ತು. ಈಗ ಜಿಲ್ಲಾಡಳಿತವೇ ನೇರವಾಗಿ ಪಡೆಯಬಹುದಾಗಿದೆ ಎಂದು ಡಿಸಿ ಶರತ್‌ ವಿವರಿಸಿದರು.

ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ :  ಬಸವೇಶ್ವರ-ಧನ್ವಂತರಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೂರ್‍ನಾಲ್ಕು ದಿನದೊಳಗೆ ಯುನೈಟೆಡ್‌, ವಾತ್ಸಲ್ಯ, ಕ್ರಿಸ್ಟಲ್‌ ಆಸ್ಪತ್ರೆಗಳಲ್ಲೂ ಚಿಕಿತ್ಸೆ ದೊರೆಯಲಿದೆ. ಯುನೈಟೆಡ್‌ನ‌ಲ್ಲಿ 9 ಬೆಡ್‌ ಹಾಗೂ ವಾತ್ಸಲ್ಯದಲ್ಲಿ 6 ಬೆಡ್‌ಗಳಲ್ಲಿ ಚಿಕಿತ್ಸೆ ದೊರೆತರೆ ಧನ್ವಂತರಿಯಲ್ಲಿ 10 ಬೆಡ್‌ಗಳಿವೆ. ಖಾಜಾ ಬಂದೇನವಾಜ್‌ ಆಸ್ಪತ್ರೆಯಲ್ಲಿ ಆಗಸ್ಟ್‌ ಎರಡನೇ ವಾರದ ನಂತರ 22 ಎಸಿಯು ಬೆಡ್‌ಗಳಲ್ಲಿ ಚಿಕಿತ್ಸೆ ದೊರಕಲಿದೆ.

ಜೇವರ್ಗಿ ಎರಡು ಕಡೆ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪನೆಗೆ ಧರ್ಮಸಿಂಗ್‌ ಫೌಂಡೇಷನ್‌ ವತಿಯಿಂದ ಅಗತ್ಯ ಸಹಾಯ ನೀಡುವುದಾಗಿ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ. ಬೆಡ್‌ ಹಾಗೂ ಊಟದ ವ್ಯವಸ್ಥೆ ಮಾಡಲು ಮುಂದಾಗಲಾಗುವುದು. ಕಲಬುರಗಿಯಲ್ಲೂ ಒಂದು ಸೆಂಟರ್‌ಗೆ ಸಹಾಯ ಕಲ್ಪಿಸಲು ಬದ್ಧ. ಒಟ್ಟಾರೆ ಕೋವಿಡ್ ಹೊಡೆದೊಡೆಸಲು ಎಲ್ಲರೂ ಶಕ್ತಿಮೀರಿ ಶ್ರಮಿಸುವುದು ಅಗತ್ಯವಿದೆ.  –ಡಾ| ಅಜಯಸಿಂಗ್‌, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ

ಜನರು ಸಾಮಾಜಿಕ ಅಂತರ ಹಾಗೂ ಪದೇ-ಪದೇ ಶುಚಿತ್ವ ಕಾಪಾಡಿಕೊಳ್ಳುವಂತೆ ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡುತ್ತದೆ. ಎಲ್ಲರೂ ಐಸಿಯು ಬೆಡ್‌ ಕೇಳುವುದು ಸೂಕ್ತವಲ್ಲ. ರೋಗಿಯ ಸ್ಥಿತಿಗತಿ ನೋಡಿಕೊಂಡು ವೈದ್ಯರೇ ಶಿಫಾರಸ್ಸು ಮಾಡುತ್ತಾರೆ. ಇನಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕಲು ಮುಂದಾಗಲಾಗುವುದು.  –ಶರತ್‌ ಬಿ., ಜಿಲ್ಲಾಧಿಕಾರಿ ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next