Advertisement

ಹಾಸ್ಟೆಲ್‌ ಗ‌ಳಲ್ಲಿ ಕೋವಿಡ್‌ ಬೆಡ್‌ ವ್ಯವಸ್ಥೆ

07:34 PM Apr 21, 2021 | Team Udayavani |

ಬೀದರ: ಜನರನ್ನು ಬೆಂಬಿಡದೇ ಕಾಡುತ್ತಿರುವ ಕೋವಿಡ್‌ ಎರಡನೇ ಅಲೆಯ ನಿಯಂತ್ರಣಕ್ಕೆ ವಿವಿಧ ಇಲಾಖೆಗಳು ಏನು ಮಾಡಬಹುದು ಎಂಬುದರ ಬಗ್ಗೆ ಅಧಿಕಾರಿಗಳಿಂದ ಸಲಹೆ ಪಡೆಯುವ, ಕೋವಿಡ್‌-19 ತಡೆ ಕಾರ್ಯಾಚರಣೆಯಲ್ಲಿ ಆಯಾ ಅಧಿಕಾರಿಗಳ ಪಾತ್ರವನ್ನು ಮನಗಾಣಿಸುವ ಮಹತ್ವದ ತುರ್ತು ಸಭೆಯು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಮತ್ತು ಜಿಪಂ ಸಿಇಒ ಜಹೀರಾ ನಸೀಮ್‌ ಅವರ ಸಮ್ಮುಖದಲ್ಲಿ ಮಂಗಳವಾರ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆಯಿತು.

Advertisement

ಈ ಮೊದಲು ಕೋವಿಡ್‌ ವಾರ್ಡ್‌ ಸೇರಲು ಹಿಂಜರಿಯುತ್ತಿದ್ದ ಜನರು ಇದೀಗ ಕೊವಿಡ್‌ ಪಾಜಿಟಿವ್‌ ವರದಿಯಾದ ಕೂಡಲೇ ಆಸ್ಪತ್ರೆಗಳಿಗೆ ಧಾವಿಸಿ ದಾಖಲಾಗಲು ಬೆಡ್‌ ಕೇಳುತ್ತಿದ್ದಾರೆ ಎನ್ನುವ ವಾಸ್ತವ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ತಿಳಿಸಲಾಯಿತು.

ಕೋವಿಡ್‌-19 ಪ್ರಕರಣಗಳ ದಾಖಲಾತಿಗೆ ತಕ್ಕಂತೆ ಪ್ರತಿದಿನ ಬೇರೆ ಬೇರೆ ಕಡೆಗಳಲ್ಲಿ ಬೆಡ್‌ ವ್ಯವಸ್ಥೆ ಮಾಡಲು, ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ರೋಗಿಗಳಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲು ವಹಿಸಬೇಕಾದ ಕ್ರಮಗಳ ಬಗ್ಗೆ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ದಾಖಲಾತಿ ಆಗದೇ ಇರುವ ಕಡೆಗಳಲ್ಲಿ, ನೆಹರೂ ಕ್ರೀಡಾಂಗಣದಲ್ಲಿನ ಕ್ರೀಡಾ ವಸತಿ ನಿಲಯದಲ್ಲಿಯೂ ಕೋವಿಡ್‌ ಬೆಡ್‌ ಸ್ಥಾಪನೆ ಮಾಡುವ ಬಗ್ಗೆ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ಆಕ್ಸಿಜನ್‌ ಪೂರೈಕೆ, ಚಿಕಿತ್ಸೆ ಸೇರಿದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ಒದಗಿಸಲು ಜಿಲ್ಲಾಡಳಿತವು, ಆರೋಗ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಹಕಾರ ಪಡೆದು ಎಲ್ಲ ರೀತಿಯ ಸುವ್ಯವಸ್ಥೆ ಕಲ್ಪಿಸಲು ಭಗೀರತ ಪ್ರಯತ್ನ ಮಾಡುತ್ತಿದೆ. ಮಾಸ್ಕ್ ಬಳಕೆ, ಕೋವಿಡ್‌ ನಿಯಮ ಪಾಲನೆಗೆ ನಿರಂತರ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಆದಾಗ್ಯೂ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು, ಕೋವಿಡ್‌ ಬಾಧಿತ ಸಾವಿನ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಲೇ ಇದೆ. ಇತ್ತೀಚಿನ ವಾರಗಳಲ್ಲಿ ಹೊಸ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿವೆ. ಹೀಗಾಗಿ ಏರುಗತಿಯಲ್ಲಿರುವ ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕೆ ವಹಿಸಬೇಕಾದ ಪ್ರಯತ್ನವು ಎಲ್ಲರಿಂದಲೂ ಆಗಬೇಕಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ಕೋವಿಡ್‌ ಬಗ್ಗೆ ಸಾಕಷ್ಟು ಪ್ರಮಾಣದಲ್ಲಿ ಮುಂಜಾಗ್ರತೆ ವಹಿಸದೇ ಇರುವುದರಿಂದ ಮತ್ತು ಸಾಕಷ್ಟು ವಿಳಂಬವಾಗಿ ಆಸ್ಪತ್ರೆಗೆ ದಾಖಲು ಮಾಡುವ ಕಾರಣಕ್ಕೂ ಚಿಕಿತ್ಸೆ ಫಲಿಸದೇ ಕೆಲವರು ಸಾವಿಗೀಡಾಗುತ್ತಿದ್ದು, ಇಂತಹದ್ದಕ್ಕೆ ಅಧಿಕಾರಿಗಳು ಭಯಗೊಂಡು, ಕೋವಿಡ್‌ ತಡೆ ಕಾರ್ಯಾಚರಣೆಯ ಕರ್ತವ್ಯ ನಿರ್ವಹಿಸಲು ಹಿಂಜರಿಯಬಾರದು ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾ ಎಸ್‌ಪಿ ಡಾ| ಗೋಪಾಲ ಬ್ಯಾಕೋಡ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next