ಗದಗ: ಕೋವಿಡ್ ಮಾನವ ಸಂಕುಲಕ್ಕೆ ತೀವ್ರ ಹಾನಿಯನ್ನುಂಟು ಮಾಡಿದ್ದಲ್ಲದೇ, ಅನೇಕರು ಬಲಿಯಾಗಿದ್ದಾರೆ. ಕೊರೊನಾದಿಂದ ವಿಶ್ವವೇ ತಲ್ಲಣಿಸಿದೆ ಎಂದು ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಗೃಹರಕ್ಷಕ ದಳ ಅಖೀಲ ಭಾರತ ಗೃಹರಕ್ಷಕ ದಿನಾಚರಣೆ ಅಂಗವಾಗಿ ಕೋವಿಡ್ ವೈರಸ್ ಹರಡುವಿಕೆ ತಡೆಗಟ್ಟಲು ಏರ್ಪಡಿಸಿದ್ದ ಜನಜಾಗೃತಿ ಅಭಿಯಾನಕ್ಕೆ ತೋಂಟದಾರ್ಯ ಮಠದ ಮುಂಭಾಗದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಸೋಂಕಿನಿಂದಾಗಿ ಭಯಭೀತಿಯಿಂದ ಜನರು ಕೆಲ ತಿಂಗಳುಗಳ ಕಾಲ ಮನೆಯಲ್ಲಿ ಖಾಲಿ ಕುಳಿತುಕೊಳ್ಳಬೇಕಾಯಿತು. ದುಡಿಮೆ ಇಲ್ಲದೆ ಜನಜೀವನ ಅನ್ನಕ್ಕಾಗಿ ಪರಿತಪಿಸುವಂತಾಯಿತು. ಸಣ್ಣ ಕೈಗಾರಿಕೆಗಳು ಸೇರಿದಂತೆ ಬೃಹತ್ ಉದ್ಯಮಗಳು ಕಾರ್ಖಾನೆ ಬಂದ್ ಮಾಡಿ ಉತ್ಪಾದನೆ ನಿಲ್ಲಿಸಿದವು. ಪರಿಣಾಮದೇಶ ಹಾಗೂ ವಿಶ್ವದ ಆರ್ಥಿಕ ಪರಿಸ್ಥಿತಿಯೇ ಅಲ್ಲೋಲ- ಕಲ್ಲೋಲವಾಯಿತು ಎಂದರು.
ಕೋವಿಡ್ ಸೋಂಕಿನ ತೀವ್ರತೆ ಕಡಿಮೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಸೋಂಕು ಇನ್ನೂ ನಿವಾರಣೆಯಾಗಿಲ್ಲ. ಸಾರ್ವಜನಿಕರು ಮನೆಯಿಂದ ಹೊರಬರುವಾಗ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಜನ ಸಂದಣಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಗೃಹರಕ್ಷಕರು ವಿಶ್ವಾಸಕ್ಕೆ ಹಾಗೂ ದಕ್ಷತೆಗೆ ಹೆಸರಾದವರು. ಕೋವಿಡ್ ಸೋಂಕು ಹಬ್ಬುತ್ತಿದ್ದಂತೆಯೇ ವಿಧಿ ಸಲಾದ ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರನ್ನು ಜಾಗೃತರನ್ನಾಗಿಸುವ ಹಾಗೂ ಅವರನ್ನು ಜನದಟ್ಟಣೆಯಲ್ಲಿ ಪ್ರವೇಶಿಸದಂತೆ ನಿಯಂತ್ರಿಸುವಲ್ಲಿ ಮಾಡಿದ ಸೇವೆ ಸ್ಮರಣೀಯ ಎಂದು ಬಣ್ಣಿಸಿದರು. ಕೂಡಲಸಂಗಮ ಬಸವಪೀಠದ ಉಪಾಧ್ಯಕ್ಷ ಸದ್ಗುರು ಮಹದೇಶ್ವರ ಸ್ವಾಮೀಜಿ ಸಂದಭೋìಚಿತವಾಗಿ ಮಾತನಾಡಿ, ಇನ್ನೂ ಕೆಲವು ತಿಂಗಳು ಕಾಲ ಸಾರ್ವಜನಿಕರು ಸರ್ಕಾರ ವಿಧಿಸಿರುವ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ಸೋಂಕು ಸಂಪೂರ್ಣ ನಿವಾರಣೆಗೆ ಕೈಜೋಡಿಸುವಂತೆ ಸಲಹೆ ನೀಡಿದರು.
ಇದಕ್ಕೂ ಮುನ್ನ ತೋಂಟದಾರ್ಯ ಮಠದಿಂದ ಆರಂಭಗೊಂಡ ಜನಜಾಗೃತಿ ಅಭಿಯಾನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾ ಗೃಹ ರಕ್ಷಕ ಕಾರ್ಯಾಲಯಕ್ಕೆ ಬಂದು ಮುಕ್ತಾಯಗೊಂಡಿತು. ಈ ವೇಳೆ ಗೃಹರಕ್ಷಕ ದಳದ ಜಿಲ್ಲಾ ಸಮಾಜೇಷ್ಠ ವಿಶ್ವನಾಥ ಯಳಮಲಿ, ಜಿಲ್ಲಾ ಗೃಹರಕ್ಷಕ ದಳದ ಹಿರಿಯ ಅಧಿಕಾರಿಗಳಾದ ಕೆ.ಸಿ. ವಕ್ಕಳದ, ಸುರೇಶ ದೊಡ್ಡಮನಿ ಇದ್ದರು.