ಮೈಸೂರು: ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ 20ನೇ ವರ್ಷದ 125ನೇ ಕಾರ್ಯಕ್ರಮದ ವಿಶೇಷವಾಗಿ ಕೋವಿಡ್ ತಡೆಯಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರದ 42 ವಾರ್ಡ್‌ಗಳಲ್ಲಿ ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದು ಅಖೀಲ ಕರ್ನಾಟಕ ಮಾದಾರ ಚನ್ನಯ್ಯ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಡಾ.ಎಸ್.ಈ. ಮಹದೇವಪ್ಪ ತಿಳಿಸಿದರು.
ಅಖೀಲ ಕರ್ನಾಟಕ ಮಾದಾರ ಚನ್ನಯ್ಯ ವಿಚಾರ ವೇದಿಕೆ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸ್ಯಾಂಡಲ್ ವುಡ್ ಸೆಲೆಬ್ರೆಟಿಸ್ ಸಹಯೋಗದಲ್ಲಿಆ.24ರಿಂದ 28ರವರೆಗೆ ಅಭಿಮಾನ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಆಯುಕ್ತರಿಂದ ಚಾಲನೆ: ಆ.24ರಂದು ಬೆಳಗ್ಗೆ 9ಕ್ಕೆ 23ನೇ ವಾರ್ಡಿನ ಜಗನ್ಮೋಹನ ಅರಮನೆ ಮುಂಭಾಗದಲ್ಲಿ ಜನಜಾಗೃತಿ ಅಭಿಯಾನಕ್ಕೆ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಉಪಪೊಲೀಸ್ ಆಯುಕ್ತ ಡಾ.ಎ.ಎನ್.ಪ್ರಕಾಶ್ ಗೌಡ ಚಾಲನೆ ನೀಡುವರು. ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕರಪತ್ರ ಬಿಡುಗಡೆ ಮಾಡುವರು. ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು. 31ಕ್ಕೆ ವಿಚಾರ ಸಂಕಿರಣ: ಆ.25ರ ಬೆಳಗ್ಗೆ 9ಕ್ಕೆ 4ನೇ ವಾರ್ಡಿನ ಬಸವಗುಡಿ ವೃತ್ತದ ಬಳಿ ಅಭಿಯಾನ ಆರಂಭವಾಗಿ ಹಲವು ವಾರ್ಡ್‌ಗಳಲ್ಲಿ ಮುಂದುವರಿಯಲಿದೆ. ಆ.26ರಂದು 37ನೇ ವಾರ್ಡಿನ ಪುಟ್ಟಮ್ಮ ಮಲ್ಲಪ್ಪ ಛತ್ರದ ಬಳಿ ಅಭಿಯಾನ ಪ್ರಾರಂಭಗೊಂಡರೆ, ಆ.27ರಂದು 48ನೇ ವಾರ್ಡಿನ ಇಸ್ಕಾನ್ ದೇವಸ್ಥಾನದ ಸಮುದಾಯ ಭವನ ಮುಂದೆ ಅಭಿಯಾನ ನಡೆಯಲಿದೆ. ಆ.28ರಂದು 58ನೇ ವಾರ್ಡಿನ ಸಾಯಿಬಾಬಾ ದೇವಸ್ಥಾನದ ಹಿಂಭಾಗದಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ. ಆ.31ರಂದು ಮಧ್ಯಾಹ್ನ 3ಕ್ಕೆ ಜೆಎಲ್‌ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾ ಭವನದಲ್ಲಿ ಕೋವಿಡ್ ಪರಿಣಾಮಗಳು ಮತ್ತು ಮುಂದಿನ ಸವಾಲುಗಳು ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಶ್ರೀ ವಂಗೀಪುರ ನಂಬಿಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಧರ್ಮಗುರುಗಳಾದ ಉಸ್ಮಾನ್ ಷರೀಫ್, ರೆವರೆಂಡ್ ಫಾದರ್ ಸ್ಟಾನಿ ಡಿ ಅಲ್ಮೆಡಾ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಅಧ್ಯಕ್ಷ ತಗಡೂರು ಗೌರಿಶಂಕರ್, ನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ಶ್ರೀನಿವಾಸು, ಅಶ್ವಿನಿ ಅನಂತು, ಶೋಭಾ ಮೋಹನ್ ಇದ್ದರು