ಸುಬ್ರಹ್ಮಣ್ಯ: ಕೋವಿಡ್ ಜನ ಜಾಗೃತಿಗಾಗಿ ಹಲವರು ಹಲವು ರೀತಿಯಲ್ಲಿ ಕಾರ್ಯಪ್ರವೃತರಾಗಿದ್ದಾರೆ. ಆದರೆ ಇಲ್ಲೊಬ್ಬರು ಸಾಮಾಜಿಕ ಕಾರ್ಯಕರ್ತ ತನ್ನ ಮನೆಯ ಕಂಪೌಂಡ್ ನಲ್ಲಿ ಜನಜಾಗೃತಿ ಕಲಾಕೃತಿಗಳನ್ನು ರಚಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಜನಜಾಗೃತಿಯಲ್ಲಿ ತೊಡಗಿದ್ದಾರೆ.
ಸುಳ್ಯ ತಾಲೂಕಿನ ಪಂಜ ಸಮೀಪದ ಚಿಂಗಾಣಿಗುಡ್ಡೆ ಸಮೀಪದ ಅಳ್ಪೆ ನಿವಾಸಿ ಸಾಮಾಜಿಕ ಕಾರ್ಯಕರ್ತ ಜಿನ್ನಪ್ಪ ಗೌಡ ಅವರೇ ಗಮನ ಸೆಳೆದವರು. ಜಿನ್ನಪ್ಪ ಅವರ ವೈವಾಹಿಕ ಜೀವನದ ಬೆಳ್ಳಿಹಬ್ಬ ಸಂಭ್ರಮದಲ್ಲಿದ್ದು, ಅದರ ನೆನಪಿಗೋಷ್ಕರ ಜನಜಾಗೃತಿ ಕಲಾಕೃತಿ ಮೂಡಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ.
ಜನಜಾಗೃತಿ;
ವೈವಾಹಿಕ ಜೀವನದ ಬೆಳ್ಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುವ ಇವರು ತನ್ನ ಮನೆಯ ಸುತ್ತಲ ಕಾಂಪೌಂಡ್ ಗೋಡೆಯ ಮೇಲೆ ಜನಜಾಗೃತಿ ಚಿತ್ರಗಳನ್ನು ರಚಿಸಿದ್ದಾರೆ. ಆಕ್ಸಿಜನ್ ಸಿಲಿಂಡರ್ ಬೆನ್ನ ಮೇಲೆ ಹಾಕಿಕೊಂಡು ಗಿಡ ನೆಡುವ ಹುಡುಗ, ಕೊರೊನಾ ಲಸಿಕೆ ಜಾಗೃತಿ ಚಿತ್ರ, ಹಳೆಯ ಕಾಲದಲ್ಲಿ ಇದ್ದ ಸಾಕ್ಷರತಾ ಆಂದೋಲನ ಚಿತ್ರ, ಭೂಮಿಗೆ ಟ್ಯಾಪ್ ಹಾಕಿ ನೀರಿನ ಸಂರಕ್ಷಣಾ ಜಾಗೃತಿ ಚಿತ್ರ, ಕಸ ವಿಲೇವಾರಿ ಚಿತ್ರಗಳು ಸೇರಿದಂತೆ ಪ್ರಸ್ತುತ ಜನತೆ ಜಾಗೃತಿ ಗೊಳ್ಳಬೇಕಿರುವ ವಿಚಾರಗಳ ಬಗ್ಗೆ ಕಲಾಕೃತಿಗಳನ್ನು ಚಿತ್ರಿಸಿದ್ದಾರೆ. ಈ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುವುದರ ಜತೆಗೆ, ಜಾಗೃತಿ ಪ್ರಜ್ಞೆ ಮೂಡಿಸಲಿದೆ ಎನ್ನುವುದು ಜಿನ್ನಪ್ಪ ಅವರ ಮಾತು. ಈಗಾಗಲೇ ಸಿನಿಮಾ ಸೆಟ್‌ಗಳಲ್ಲಿ ಚಿತ್ರಕಲೆಯ ಮೂಲಕ ಪರಿಚಿತರಾಗಿರುವ ಪಂಜ ಸಮೀಪದ ಬಳ್ಳಕ್ಕದ ಕಲಾ ಆರ್ಟಿಸ್ಟ್ ಸುರೇಶ್ ಅವರು ಈ ಮನೋಹರವಾದ ಚಿತ್ರಗಳನ್ನು ಬಿಡಿಸಿದ್ದಾರೆ.
ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಲಾಕೃತಿ ರಚಿಸಿದ್ದೇನೆ. ಜನರು ಮೊದಲು ಜಾಗೃತಿಗೊಂಡಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ಎದುರಿಸಲು ಸಾಧ್ಯವಿದೆ. ಜನತೆ ಎಚ್ಚರಗೊಳ್ಳಬೇಕಿರುವ ಉದ್ದೇಶದಿಂದ ಕಲಾಕೃತಿ ರಚಿಸಿದ್ದೇನೆ.
– ಜಿನ್ನಪ್ಪ ಗೌಡ ಅಳ್ಪೆ,ಸಾಮಾಜಿಕ ಕಾರ್ಯಕರ್ತ, ಪಂಜ.