ಹುಬ್ಬಳ್ಳಿ: ಗೋಡೆಗಳ ಮೂಲಕ ವರ್ಣಮಯ ಚಿತ್ರಗಳ ಮೂಲಕ ವಿವಿಧ ಜಾಗೃತಿ ಮೂಡಿಸುವ ಕಲರ್ ಮೈ ಸಿಟಿ ಸಂಸ್ಥೆ ಇದೀಗ ಕೋವಿಡ್ ಸೋಂಕಿನ ಕುರಿತು ಜನರಲ್ಲಿ ಅರಿವು ಮೂಡಿಸಲು ಮುಂದಾಗಿದೆ.
ಇಲ್ಲಿನ ದೇಸಾಯಿ ವೃತ್ತದ ಕೆಳ ಸೇತುವೆ ಗೋಡೆಗಳ ಮೇಲೆ ಜನರಲ್ಲಿ ಅರಿವು ಮೂಡಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಸೇತುವೆ ನಿರ್ಮಾಣದ ನಂತರ ಗೋಡೆಗೆ ಬಣ್ಣ ಕೂಡ ಬಳೆದಿರಲಿಲ್ಲ. ಹೀಗಾಗಿ ಗೋಡೆಗಳು ಪೋಸ್ಟರ್‌ಗಳನ್ನು ಅಂಟಿಸುವ ಸ್ಥಳವಾಗಿ ಮಾರ್ಪಟ್ಟಿದ್ದವು. ಕಲರ್ ಮೈ ಸಿಟಿ ಸಂಸ್ಥೆಯ ಸದಸ್ಯರು ಅಲ್ಲಿ ಅಂಟಿಸಿದ್ದ ಪೋಸ್ಟರ್ ಗಳನ್ನೆಲ್ಲಾ ತೆಗೆದು ಗೋಡೆ ಸ್ವತ್ಛಗೊಳಿಸಿ ಎರಡು ಗೋಡೆಯ ಮೇಲೆ ಬಿಡಿಸಿರುವ ಬಣ್ಣ ಬಣ್ಣದ ಚಿತ್ತಾರಗಳು ಜನರನ್ನು ಆಕರ್ಷಿಸುತ್ತಿವೆ. ಜಾಗೃತಿ ಸಂದೇಶದ ಜತೆಗೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ಕೋವಿಡ್ ವಾರಿಯರ್ಸ್‌ಗಳ ಸೇವೆ ಸ್ಮರಿಸುವ ಚಿತ್ರಗಳು ಬಹು ಆಕರ್ಷಣೀಯವಾಗಿವೆ.
ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು, ಮಾಧ್ಯಮದ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿರುವ ಸಂದೇಶ ಬಿಡಿಸಲಾಗಿದೆ. ನಾಲ್ವರು ಸದಸ್ಯರು ಮಾತ್ರ ಈ ಕಾರ್ಯದಲ್ಲಿ ತೊಡಗಿದ್ದು, ಧಾರವಾಡದಲ್ಲಿಯೂ ಜನನಿಬಿಡ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸುವ ಯೋಜನೆಯಿದೆ. ಯುವಕರ ಈ ಕಾರ್ಯ ಜನರ ಪ್ರಶಂಸೆಗೆ ಪಾತ್ರವಾಗಿದೆ.
ಮಾಸ್ಕ್ ಸಂದೇಶ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಇರಲ್ಲ ಎನ್ನುವ ಕಾರಣಕ್ಕೆ ಸಂಸ್ಥೆಯ ನಾಲ್ವರು ಸದಸ್ಯರು ಸ್ವಯಂ ಪ್ರೇರಣೆಯಿಂದ ಚಿತ್ರ ಬಿಡಿಸಿದ್ದಾರೆ. ಒಂದು ಭಾಗದ ಗೋಡೆಗೆ ಜನರು ಹಾಗೂ ಒಂದು ಕುಟುಂಬದ ಸದಸ್ಯರೆಲ್ಲರೂ ಮಾಸ್ಕ್ ಧರಿಸಿರುವ ಚಿತ್ರಗಳನ್ನು ಬಿಡಿಸಲಾಗಿದೆ. ಮಾಸ್ಕ್ ಧರಿಸಿದರೆ ಮಾತ್ರ ಸೋಂಕಿನಿಂದ ದೂರ ಇರಬಹುದಾಗಿದ್ದು, ತಪ್ಪದೆ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಮನೆಯಿಂದ ಹೊರ ಬನ್ನಿ ಎನ್ನುವ ಜಾಗೃತಿ ಮೂಡಿಸಲಾಗುತ್ತಿದೆ. ಮಾಸ್ಕ್ ಧರಿಸಿ ಹೀರೋ ಆಗಿ, ನಿಮ್ಮ ಜೀವ ಉಳಿಸಿಕೊಳ್ಳಿ ಎನ್ನುವ ಸಂದೇಶ ಸಾರಲಾಗುತ್ತಿದೆ. ಮಹಾನಗರ ಸ್ವಚ್ಚತೆ, ಪ್ಲಾಸ್ಟಿಕ್ ಮುಕ್ತ ನಗರ, ಪೋಸ್ಟರ್ ಮುಕ್ತ ನಗರ ಹೀಗೆ ಒಂದಲ್ಲಾ ಒಂದು ಕಾರ್ಯಕ್ರಮದ ಮೂಲಕ ಕಲರ್ ಮೈ ಸಿಟಿ ಸಂಸ್ಥೆ ಜಾಗೃತಿ ಮೂಡಿಸುತ್ತಿದೆ. ಹೀಗಾಗಿ ಬಹುತೇಕ ವೃತ್ತಗಳು, ಸರಕಾರಿ ಕಚೇರಿಗಳ ಗೋಡೆಗಳು ಬಣ್ಣ ಬಣ್ಣದ ಕಲಾಕೃತಿಗಳ ಚಿತ್ತಾರಗಳಿಂದ ಕಂಗೊಳಿಸುವಂತಾಗಿದೆ.
ಅನೇಕ ಜನರು ಕೋವಿಡ್ ಸೋಂಕನ್ನು ಹಗುರುವಾಗಿ ತೆಗೆದುಕೊಂಡಿದ್ದಾರೆ. ಸರಕಾರದ ಮಾರ್ಗಸೂಚಿಯ ಪ್ರಕಾರ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಆದರೆ ಕೆಲವರು ಇದನ್ನು ಪಾಲಿಸುತ್ತಿಲ್ಲ. ಹೀಗಾಗಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕೆನ್ನುವ ಕಾರಣದಿಂದ ಕಲರ್ ಮೈ ಸಿಟಿ ಮುಂದಾಗಿದ್ದು, ರಾಜ್ಯದಲ್ಲಿ ಇದು ಮೊದಲ ಪ್ರಯತ್ನವಾಗಿದೆ.
-ಕಿರಣ ಉಪ್ಪಾರ, ಸಂಸ್ಥಾಪಕ, ಕಲರ್ ಮೈ ಸಿಟಿ ಸಂಸ್ಥೆ
ಕಲರ್ ಮೈ ಸಿಟಿ ಸಂಸ್ಥೆ ಸದಸ್ಯರು ಮಹಾನಗರ ಸ್ವಚ್ಛತೆಗೆ ಸೇರಿದಂತೆ ಪ್ರತಿಯೊಂದು ಹಂತದಲ್ಲಿಯೂ ವಿನೂತನವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಕೋವಿಡ್ -19 ಕುರಿತು ಜನರಲ್ಲಿ ಮೂಡಿಸುತ್ತಿರುವ ಜಾಗೃತಿ ಕಾರ್ಯಕ್ರಮ ಪ್ರಶಂಸನೀಯ. ಇಂಥ ಕಲಾಕೃತಿಗಳ ಮೇಲೆ ಉಗುಳುವುದು, ಪೋಸ್ಟರ್‌ಗಳನ್ನು ಅಂಟಿಸುವುದನ್ನು ಮಾಡಬಾರದು.
-ಅಶ್ವಿನ್ ಮಗಜಿಕೊಂಡಿ
-ವಿಶೇಷ ವರದಿ