Advertisement

ಕೋವಿಡ್ ಜಾಗೃತಿ ಅಗತ್ಯ: ಕುಮಾರ್‌

07:04 AM May 22, 2020 | Suhan S |

ಸೊರಬ: ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಕಾಣಿಸಿಕೊಂಡ ಕೋವಿಡ್ ಸೋಂಕಿತ ಪ್ರಕರಣಕ್ಕೂ ತಾಲೂಕಿನ ಹಳೇಸೊರಬದಲ್ಲಿ ಪತ್ತೆಯಾದ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಜನತೆ ಜಾಗೃತರಾಗಬೇಕಿರುವುದು ಕಡ್ಡಾಯವಾಗಿದೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಹೇಳಿದರು.

Advertisement

ಪಟ್ಟಣದ ರಂಗಮಂದಿರದಲ್ಲಿ ಗುರುವಾರ ತಾಲೂಕಿನಲ್ಲಿಯೇ ಮೊದಲ ಬಾರಿಗೆ ಕೋವಿಡ್‌ ಪಾಸಿಟಿವ್‌ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಅಧಿಕಾರಿಗಳ ತುರ್ತು ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಕ್ವಾರಂಟೈನ್‌ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ತಾಲೂಕಿನಲ್ಲಿ ವೃದ್ಧೆಯಲ್ಲಿ ಕಾಣಿಸಿದ ಪ್ರಕರಣವು ವಿಭಿನ್ನವಾಗಿದ್ದು, ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಾಥಮಿಕ ಮತ್ತು ಎರಡನೇ ಹಂತದಲ್ಲಿ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಂಕಿತ ಮಹಿಳೆಯು ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಹಿತಿ ಲಭಿಸಿದೆ. ಜೊತೆಯಲ್ಲಿ ಪಟ್ಟಣದ ಬಟ್ಟೆ ಅಂಗಡಿ, ಚಿನ್ನ-ಬೆಳ್ಳಿ ಮತ್ತು ಪಾತ್ರೆ ಅಂಗಡಿಗಳಿಗೂ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದ್ದು, ಪಟ್ಟಣದ ಎಲ್ಲಡೆ ಔಷಧ ಸಿಂಪರಣೆ ಮಾಡುವಂತೆ ಪಪಂ ಮುಖ್ಯಾಧಿಕಾರಿ ಜಗದೀಶ್‌ ನಾಯ್ಕಗೆ ತಿಳಿಸಿದ ಅವರು, ಸೋಂಕು ಹರಡಲು ಕಾರಣವನ್ನು ಮೊದಲು ತಿಳಿದು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ವಿವಾಹ ಮತ್ತಿತರರ ಸಭೆ-ಸಮಾರಂಭಗಳನ್ನು ನಡೆಸಲು ಸ್ಥಳೀಯ ಆಡಳಿತದ ಮಾರ್ಗಸೂಚಿ ಅನುಸರಿಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು.

ಉಪವಿಭಾಗಾಧಿಕಾರಿ ಎಲ್‌. ನಾಗರಾಜ್‌ ಮಾತನಾಡಿ, ನೆರೆಯ ಜಿಲ್ಲೆ, ರಾಜ್ಯದಿಂದ ಆಗಮಿಸಿದರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದ್ದನ್ನು ಕೇಳಿದ್ದೆವು. ಆದರೆ, ವೃದ್ಧೆಲ್ಲಿ ಕಾಣಿಸಿಕೊಂಡ ಕಾರಣ ಪ್ರಾಥಮಿಕ ಮತ್ತು ಎರಡನೇ ಹಂತದಲ್ಲಿ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಈಗಾಗಲೇ ವೃದ್ಧೆಯನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದ ಐವರನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕು ದೃಢಪಟ್ಟ ಗ್ರಾಮವನ್ನು ಕಂಟೇನ್ಮೆಂಟ್‌ ಝೋನ್‌ ಆಗಿ ಘೋಷಿಸಲಾಗಿದೆ ಎಂದರು.

ತಹಶೀಲ್ದಾರ್‌ ನಫಸಾ ಬೇಗಂ, ತಾಪಂ ಇಒ ನಂದಿನಿ, ತಾಲೂಕು ಆರೋಗ್ಯಾಕಾರಿ ಡಾ| ಅಕ್ಷತಾ ಖಾನಾಪುರ, ಪಿಎಸ್‌ಐ ಪ್ರಶಾಂತ್‌ ಕುಮಾರ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next