Advertisement

Covid ಆತಂಕ ಅನಗತ್ಯ; ತಾಂತ್ರಿಕ ಸಮಿತಿ ಸೂಚಿಸಿದರೆ ಮಾತ್ರ ಲಸಿಕೆ

12:28 AM Dec 23, 2023 | Team Udayavani |

ಮಂಗಳೂರು: ರಾಜ್ಯದ ಕೋವಿಡ್‌ ತಾಂತ್ರಿಕ ಸಮಿತಿಯ ಸಲಹೆಯನ್ನು ಆಧರಿಸಿ ಲಸಿಕೆ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಪ್ರಸ್ತುತ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಸೇರಿ ದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕೋವಿಡ್‌ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಈ ಹಿಂದೆ ಒಮಿಕ್ರಾನ್‌ ಆತಂಕದ ಸಮಯದಲ್ಲಿಯೂ ಕೋವಿಡ್‌ ಪ್ರಕರಣ ಹೆಚ್ಚಾಗಿತ್ತು. ರೂಪಾಂತರಿ ಜೆಎನ್‌.1 ಉಪತಳಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಇದು ತೀವ್ರವಾ ಗಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ನಿರ್ಬಂಧ, ಕಡಿವಾಣ ವಿಧಿಸಿಲ್ಲ ಎಂದರು.

ರೂಪಾಂತರಿ ಜೆಎನ್‌.1 ಉಪತಳಿ ಅತೀ ಹೆಚ್ಚು ಪ್ರಕರಣ ಗೋವಾದಲ್ಲಿದೆ. ರಾಜ್ಯದಲ್ಲಿ ಸದ್ಯ ಆ ರೀತಿಯ ಪ್ರಕರಣ ದೃಢಪಟ್ಟಿಲ್ಲ. ರಾಜ್ಯದಲ್ಲಿ ಕೋವಿಡ್‌ ಬಾಧಿತರ ಮಾದರಿಯನ್ನು ಜಿನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗಾಗಿ ಕಳುಹಿಸಿದ್ದು ವಾರದೊಳಗೆ ವರದಿ ಬರಲಿದೆ. ರಾಜ್ಯದಲ್ಲಿ ಸದ್ಯ ದಿನಕ್ಕೆ 5 ಸಾವಿರ ಕೋವಿಡ್‌ ಪರೀಕ್ಷೆಯ ಗುರಿ ನೀಡಲಾಗಿದೆ. ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡ, ಮೈಸೂರಿಗೆ ತಲಾ 300 ಪರೀಕ್ಷೆ ಉಳಿದಂತೆ ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ತಲಾ 100 ಅಥವಾ 150 ಪರೀಕ್ಷೆ ಗುರಿ ನೀಡಲಾಗಿದೆ ಎಂದು ತಿಳಿಸಿದರು.

ಮುನ್ನೆಚ್ಚರಿಕೆ ವಹಿಸಿ
ವೈದ್ಯಕೀಯ ಕಾಲೇಜುಗಳು, ಪ್ಯಾರಾಮೆಡಿಕಲ್‌ ಕಾಲೇಜುಗಳು ಮತ್ತು ಇತರ ಕಾಲೇಜುಗಳಲ್ಲಿ ಕೇರಳ ಮತ್ತು ಇತರ ವಿದ್ಯಾರ್ಥಿಗಳಲ್ಲಿ ಕೋವಿಡ್‌ ಲಕ್ಷಣಗಳು ಕಂಡು ಬಂದರೆ ತಪಾಸಣೆ ನಡೆಸಿ. ಎಲ್ಲ ತಾಲೂಕು, ಹಾಗೂ ಆರೋಗ್ಯ ಕೇಂದ್ರಗಳು ಎಚ್ಚರಿಕೆ ಹಾಗೂ ಮುಂಜಾಗ್ರತೆ ವಹಿಸಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಹಾಗೂ ಮಾರ್ಗಸೂಚಿಗಳ ಬಗ್ಗೆಯೂ ಸಂಪುಟ ಉಪಸಮಿತಿ ಸಭೆ ನಿರ್ಧರಿಸ ಲಿದೆ. ಜಿಲ್ಲಾ ಸಮಿತಿ ಮೂಲಕ ಪರಿಶೀ ಲನೆ ನಡೆಸಿ ಕೋವಿಡ್‌ ಸಾವಿನ ಬಗ್ಗೆ ಘೋಷಣೆ ಮಾಡಬೇಕು ಎಂದರು. ಖಾಸಗಿ ಆಸ್ಪತ್ರೆಗಳ ಆಡಳಿತ ವರ್ಗಕ್ಕೂ ಅಗತ್ಯ ಕ್ರಮಗಳ ಬಗ್ಗೆ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

Advertisement

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌, ಜಿ.ಪಂ. ಸಿಇಒ ಡಾ| ಆನಂದ್‌, ಪಾಲಿಕೆ ಆಯುಕ್ತ ಆನಂದ್‌ ಮೊದಲಾದವರಿದ್ದರು.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ 12908 ಬೆಡ್‌ಗಳಿದ್ದು, 1,698 ಆಕ್ಸಿಜನ್‌ ಬೆಡ್‌, 722 ಐಸಿಯು ಬೆಡ್‌ ಮತ್ತು 336 ವೆಂಟಿಲೇಟರ್‌ ಬೆಡ್‌ಗಳಿವೆ. 11 ಕೋವಿಡ್‌ ಪರೀಕ್ಷಾ ಪ್ರಯೋಗಾಲಯಗಳಿವೆ. 2,633 ಆರ್‌ಟಿಪಿಸಿಆರ್‌ ಕಿಟ್‌ ಇದ್ದು, 409 ಆರ್‌ಎಟಿ ಕಿಟ್‌ ಇದೆ, 15,407 ಪಿಪಿಇ ಕಿಟ್‌, 25,196 ಎನ್‌-95 ಮಾಸ್ಕ್, 374 ವೆಂಟಿಲೇಟರ್‌, 583 ಆಕ್ಸಿಜನ್‌ ಕಾನ್ಸಂಟ್ರೇಟರ್, 1,578 ಆಕ್ಸಿಜನ್‌ ಸಿಲಿಂಡರ್‌, 17 ಪಿಎಸ್‌ಎ ಘಟಕ, 22 ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಸ್ಟೋರೇಜ್‌ ಘಟಕ ನಿರ್ವಹಿಸುತ್ತಿದೆ. ತಲಪಾಡಿ, ಸಾರಡ್ಕ, ಸ್ವರ್ಗ, ಸುಳ್ಯಪದವು, ಜಾಲ್ಸೂರು ಚೆಕ್‌ಪೋಸ್ಟ್‌ಗಳಲ್ಲಿ, ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿ ಕೋವಿಡ್‌ ಜಾಗೃತಿ ಬಗ್ಗೆ ಪ್ರಚಾರ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಹೊಸ ಮಾರ್ಗಸೂಚಿಯಿಲ್ಲ
ಕೋವಿಡ್‌ ಹಿನ್ನೆಲೆಯಲ್ಲಿ ಕ್ರಿಸ್ಮಸ್‌, ಹೊಸ ವರ್ಷಾಚರಣೆ ಸೇರಿದಂತೆ ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ಪ್ರತ್ಯೇಕ ನಿರ್ಬಂಧ ಅಥವಾ ಹೊಸ ಮಾರ್ಗಸೂಚಿ ಇಲ್ಲ. ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಹೆಚ್ಚು ಮಂದಿ ಸೇರುವ ಕಡೆ ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಮಾಸ್ಕ್ ಧರಿಸಿದರೆ ಉತ್ತಮ ಎಂಬ ಸಲಹೆ ನೀಡಿದ್ದೇವೆ ಎಂದು ಸಚಿವರು ಹೇಳಿದರು.

ಕೋವಿಡ್‌ ಬಾಧಿತ ಸಾವು
ದ.ಕ. ಜಿಲ್ಲೆಯಲ್ಲಿ ಕೋವಿಡ್‌ ಬಾಧಿತರೊಬ್ಬರು ಸಾವನ್ನಪ್ಪಿದ್ದಾರೆ. ವೆನ್ಲಾಕ್ ನ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಝಾರ್ಖಂಡ್‌ ಮೂಲದ 40 ವರ್ಷದ ವ್ಯಕ್ತಿ ಮೃತಪಟ್ಟವರು. ಅವರಿಗೆ 2 ದಿನಗಳ ಹಿಂದೆ ಕೋವಿಡ್‌ ಪಾಸಿಟಿವ್‌ ವರದಿ ಬಂದಿತ್ತು. ಜಿಲ್ಲಾ ಆರೋಗ್ಯಾಧಿಕಾರಿ ಹೇಳುವಂತೆ ಜಿಲ್ಲೆಯಲ್ಲಿ ಶುಕ್ರವಾರ ಯಾವುದೇ ಹೊಸ ಕೋವಿಡ್‌ ಪ್ರಕರಣ ಕಂಡುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next