ಕೊಪ್ಪಳ: ಕೋವಿಡ್ ಸೋಂಕು ದೃಢಪಟ್ಟ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ವ್ಯಕ್ತಿಯ (ಪಿ-5837) ಪತ್ನಿ ಹಾಗೂ ಪುತ್ರ ಗ್ರಾಮ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಜಿಲ್ಲಾಡಳಿತ ನರೇಗಾ ಕೆಲಸಕ್ಕೆ ತೆರಳಿದ ಜನರ ಮಾಹಿತಿಯನ್ನೂ ಪಡೆಯಲು ಮುಂದಾಗಿದೆ.
ಮುಧೋಳ ಗ್ರಾಮದ ನಿವಾಸಿ 60 ವರ್ಷದ ವ್ಯಕ್ತಿ ಈಚೆಗೆ ಹೊಸಪೇಟೆಗೆ ತೆರಳಿ ಅಲ್ಲಿಂದ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ. ಗ್ರಾಮದ ಮಸೀದಿ ಸೇರಿ ಇತರೆಡೆ ಸುತ್ತಾಡಿದ್ದಾರೆ ಎನ್ನುವ ಮಾಹಿತಿಯೂ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ. ಆ ವ್ಯಕ್ತಿಗೆ ಸೋಂಕು ದೃಢಪಡುವ ಮೊದಲು ಪತ್ನಿ ಹಾಗೂ ಪುತ್ರ ಗ್ರಾಮ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳಿರುವ ಮಾಹಿತಿಯೂ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಪ್ರಸ್ತುತ ಸೋಂಕಿತನ ಪತ್ನಿ ಹಾಗೂ ಪುತ್ರ ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಲಾಗಿದೆ. ಅವರು ನರೇಗಾ ಕೆಲಸಕ್ಕೆ ತೆರಳಿದ್ದಾರೆಂದರೆ ನರೇಗಾ ಕೆಲಸದಲ್ಲಿ ತೊಡಗಿದ ಎಲ್ಲರೂ ದ್ವಿತೀಯ ಸಂಪರ್ಕಿತರಾಗಲಿದ್ದಾರೆ.
45 ಜನ ಭಾಗಿ ಸಾಧ್ಯತೆ: ಇನ್ನೂ ಮುಧೋಳ ಗ್ರಾಪಂ ವ್ಯಾಪ್ತಿಯ ನರೇಗಾ ಕೆಲಸದಲ್ಲಿ 45 ಜನರು ತೊಡಗಿರುವ ಕುರಿತು ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸಿದೆ. ಆ ಎಲ್ಲರೀಗ ದ್ವಿತೀಯ ಸಂಪರ್ಕಿತರಾಗುವ ಸಾಧ್ಯತೆಯೂ ಇದೆ. ಹೀಗಾಗಿ ಗ್ರಾಮದಲ್ಲಿ ನರೇಗಾ ಕೆಲಸಕ್ಕೆ ತೆರಳಿದ್ದವರೆಲ್ಲರೂ ಆತಂಕ ಶುರುವಾಗಿದೆ. ಜಿಲ್ಲಾಡಳಿತ ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿದ್ದು, ಈ ಮಾಹಿತಿಯನ್ನ ಸಂಗ್ರಹಿಸುವ ಕಾರ್ಯದಲ್ಲಿ ತಲ್ಲೀನವಾಗಿದೆ.
ಮುಧೋಳದ 60 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಆತನ ಟ್ರಾವೆಲ್ ಹಿಸ್ಟರಿ ಪಡೆದಿದ್ದೇವೆ. ಇನ್ನೂ ಈ ವ್ಯಕ್ತಿಯ ಪತ್ನಿ ಹಾಗೂ ಪುತ್ರ ಪ್ರಾಥಮಿಕ ಸಂಪರ್ಕಿತರೆಂದು ಪರಿಗಣಿಸಿದ್ದು, ಅವರು ಸ್ಥಳೀಯವಾಗಿ ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳಿರುವ ಮಾಹಿತಿ ಲಭ್ಯವಾಗಿದೆ. ಖಾತ್ರಿ ಕೆಲಸದಲ್ಲಿ 45 ಜನರು ಇರುವ ಕುರಿತು ಮಾಹಿತಿ ಲಭ್ಯವಾಗಿದೆ. ಇದೆಲ್ಲವನ್ನೂ ತನಿಖೆ ಮಾಡುತ್ತಿದ್ದೇವೆ. ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡುತ್ತಿದ್ದೇವೆ.
-ಪಿ. ಸುನೀಲ್ ಕುಮಾರ, ಜಿಲ್ಲಾಧಿಕಾರಿ
-ದತ್ತು ಕಮ್ಮಾರ