Advertisement

ರೂಪಾಂತರಿ ಭೀತಿ ; ಮತ್ತದೇ ನಿರ್ಲಕ್ಷ್ಯ ನೀತಿ! ಮಾಸ್ಕ್ ಕಡ್ಡಾಯವಿಲ್ಲ

06:35 PM Dec 01, 2021 | Team Udayavani |

ರಾಯಚೂರು : ಕಳೆದ ಎರಡು ವರ್ಷಗಳಲ್ಲಿ ಎರಡು ಹಂತದ ಕೊರೊನಾ ಕಂಡಿರುವ ಜಿಲ್ಲೆಯ ಜನ ಮೂರನೇ ಅಲೆ ಬಗ್ಗೆ ಕಿಂಚಿತ್ತೂ ಭಯವಿಲ್ಲದೇ ಓಡಾಡುತ್ತಿದ್ದಾರೆ. ಈಗಾಗಲೇ ರೂಪಾಂತರಿ ಸೋಂಕು ಹರಡುವ ಆತಂಕ ಎದುರಾಗಿದ್ದು, ಜನ ಮಾತ್ರ ಕನಿಷ್ಟ ಮಾಸ್ಕ್ ಕೂಡ ಧರಿಸದೇ ಓಡಾಡುತ್ತಿದ್ದಾರೆ.

Advertisement

ತನ್ನ ರೌದ್ರನರ್ತನದಿಂದ ಮನುಕುಲವನ್ನೇ ಕಬಂಧಬಾಹುವಿನಲ್ಲಿ ಬಂ ಧಿಸಿದ್ದ ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆ ಜನ ಮೊದಲಿನ ಜೀವನ ಶೈಲಿಗೆ ಮರಳಿದ್ದಾರೆ. ಸಾಮಾಜಿಕ ಅಂತರವಾಗಲಿ, ಮಾಸ್ಕ್ ಧರಿಸದೆ ಮೈಮರೆತು ಓಡಾಡುತ್ತಿದ್ದಾರೆ. ಈಗ ಎಲ್ಲೆಡೆ ಮೂರನೇ ಅಲೆ ಆತಂಕ ಶುರುವಾಗುತ್ತಿದ್ದು, ಜಿಲ್ಲೆಯಲ್ಲಿ ಮಾತ್ರ ಯಾವುದೇ ಮುನ್ನೆಚ್ಚರಿಕೆ ಕ್ರಮಗಳು
ಕಂಡು ಬರುತ್ತಿಲ್ಲ. ಕೊರೊನಾ ಎರಡನೇ ಅಲೆ ವೇಳೆ ಜಿಲ್ಲೆಯಲ್ಲಿ ಜನ ಸೋಂಕಿನಿಂದ ಸಾವನ್ನಪ್ಪುವುದು ಕಂಡಾಗ ಇಂಥ ಸ್ಥಿತಿ ನಮಗೆ ಬಾರದಿರಲಿ ಎಂದು ಬೇಡದವರಿಲ್ಲ.

ಜಿಲ್ಲೆಯಲ್ಲಿ 2ನೇ ಅಲೆ ವೇಳೆ ನೂರಾರು ಸಾವು ಸಂಭವಿಸಿದರೂ ಜಿಲ್ಲಾಡಳಿತ ನಿಖರ ಮಾಹಿತಿ ಹೊರ ಹಾಕಲಿಲ್ಲ. ಆದರೆ, ಲಾಕ್‌ಡೌನ್‌ ಜಾರಿಗೊಳಿಸುವಾಗ ಮಾತ್ರ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದು, ಜನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು. ಆದರೆ, ಕಳೆದೆರಡು ಅಲೆಗಳ ಪರಿಣಾಮ ಎದುರಿಸಿರುವ ಜನ ಕೂಡ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ.

ಮಾಸ್ಕ್ ಕಡ್ಡಾಯವಲ್ಲ: ಕೆಲವೊಂದು ಚಿತ್ರಮಂದಿರ, ಆಸ್ಪತ್ರೆ, ಸೀಮಿತ ಪ್ರದೇಶಗಳು ಹೊರತುಪಡಿಸಿ ಬೇರೆ ಎಲ್ಲಿಯೂ ಮಾಸ್ಕ್ ಕಡ್ಡಾಯವಾಗಿ ಉಳಿದಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಜಾತ್ರೆಗಳು, ಸಂತೆಗಳು, ಮದುವೆ ಸಮಾರಂಭಗಳು ಸೇರಿದಂತೆ ಸಾರ್ವಜನಿಕ ಸಭೆ ಸಮಾರಂಭಗಳು ಜೋರಾಗಿಯೇ ನಡೆಯುತ್ತಿವೆ. ಎಲ್ಲಿಯೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬ
ನಿಯಮ ಮಾತ್ರ ಪಾಲಿಸುತ್ತಿಲ್ಲ. ಇನ್ನೂ ಬಟ್ಟೆ, ಮಾರುಕಟ್ಟೆ ಪ್ರದೇಶಗಳಲ್ಲಿ ಹಬ್ಬ ಹರಿದಿನಗಳಲ್ಲಿ ಜನಜಂಗುಳಿಯೇ ನೆರೆದಿರುತ್ತದೆ. ಜಿಲ್ಲಾಡಳಿತ ಎಲ್ಲಿಯೂ ಮಾಸ್ಕ್ ಬಳಕೆ ಬಗ್ಗೆ ಎಚ್ಚರಿಕೆ ನೀಡುತ್ತಿಲ್ಲ. 2ನೇ ಲಾಕ್‌ಡೌನ್‌ ವೇಳೆ ಜಿಲ್ಲಾಡಳಿತ ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡುತ್ತಿತ್ತು. ಕೋವಿಡ್‌ ಕಡಿಮೆಯಾಗುತ್ತಿದ್ದಂತೆ ಅದಕ್ಕೂ ಬ್ರೇಕ್‌ ಹಾಕಲಾಯಿತು. ಈಗ ಜಿಲ್ಲಾಡಳಿತದ ಮುಂದೆ ಅಂಥ ಯಾವುದೇ ಪ್ರಸ್ತಾವನೆಗಳು ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

ಇದನ್ನೂ ಓದಿ :ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ 

Advertisement

ಚೆಕ್‌ಪೋಸ್ಟ್‌ಗಳು ನಿಷ್ಕ್ರಿಯ: ಆಂಧ್ರ, ತೆಲಂಗಾಣಕ್ಕೆ ಹೊಂದಿಕೊಂಡಿರುವ ರಾಯಚೂರು ಗಡಿ ಜಿಲ್ಲೆಯಾಗಿದೆ. ಈಗಾಗಲೇ ಕೇರಳ, ಮಹಾರಾಷ್ಟ್ರ ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿರುವ ಸರ್ಕಾರ ಜಿಲ್ಲೆಯನ್ನು ಮಾತ್ರ ಸಂಪೂರ್ಣ ಕಡೆಗಣಿಸಿದಂತಿದೆ. ಹೈದರಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿಲ್ಲೆಗೆ ಬರುವವರು ಇದ್ದಾಗ್ಯೂ ಕ್ರಮಕ್ಕೆ ಮುಂದಾಗಿಲ್ಲ. ಪಕ್ಕದ ಯಾದಗಿರಿ ಜಿಲ್ಲೆಯಲ್ಲಿ ಗಡಿ ತಪಾಸಣೆ ಕಟ್ಟುನಿಟ್ಟಾಗಿ ನಡೆದಿದ್ದರೆ, ರಾಯಚೂರು ಜಿಲ್ಲೆಯಲ್ಲಿ ಮಾತ್ರ ಚೆಕ್‌ಪೋಸ್ಟ್‌ಗಳು ನಿಷ್ಕ್ರಿಯವಾಗಿವೆ. ಹಿಂದೆ ಜಿಲ್ಲೆಯಲ್ಲಿ
17 ಕಡೆ ಚೆಕ್‌ಪೋಸ್ಟ್‌ ಸ್ಥಾಪಿಸುವ ಮೂಲಕ ಭಾರೀ ಕಟ್ಟೆಚ್ಚರ ವಹಿಸಲಾಗಿತ್ತು. ಮೂರನೇ ಅಲೆ ವೇಳೆಯೂ ಜಿಲ್ಲಾಡಳಿತ ಸೂಕ್ತ ತಪಾಸಣೆ ಕ್ರಮಕ್ಕೆ ಮುಂದಾಗಬೇಕಿದೆ.

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next