Advertisement

ಐಪಿಎಲ್‌ ಮೇಲೆ ಕೊರೊನಾ ಬೌನ್ಸರ್‌: ಬಿಸಿಸಿಐ ಹೇಳುತ್ತಿರುವುದೇನು?

09:09 AM Apr 27, 2021 | Team Udayavani |

ನವದೆಹಲಿ: ಭಾರತದಲ್ಲಿ ತೀವ್ರಗೊಳ್ಳುತಿರುವ ಕೊರೊನಾ ಕೇಸ್‌ನಿಂದಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕೂಡ ಇಕ್ಕಟ್ಟಿಗೆ ಸಿಲುಕುವ ಸೂಚನೆ ಲಭಿಸಿದೆ. ಆಸ್ಟ್ರೇಲಿಯದ ಬಹುತೇಕ ಆಟಗಾರರು ಕೂಟದಿಂದ ಹಿಂದೆ ಸರಿದು ತಾಯ್ನಾಡನ್ನು ಸೇರಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

Advertisement

ಭಾರತೀಯ ಕ್ರಿಕೆಟಿಗ, ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರಧಾನ ಸ್ಪಿನ್ನರ್‌ ಆರ್‌.ಅಶ್ವಿ‌ನ್‌ ಕೂಡ ಐಪಿಎಲ್‌ನಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ. ಇವೆಲ್ಲವೂ ಐಪಿಎಲ್‌ ಪಾಲಿಗೆ ವ್ಯತಿರಿಕ್ತ ಬೆಳವಣಿಗೆಗಳಾಗಿವೆ.

ಈ ನಡುವೆ ಸೋಮವಾರದ ದಿಢೀರ್‌ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ, ಐಪಿಎಲ್‌ಗೆ ಯಾವುದೇ ಅಡ್ಡಿಯಾಗದು, ಆಟಗಾರರೆಲ್ಲ ಜೈವಿಕ ಸುರಕ್ಷಾ ವಲಯದಲ್ಲಿ ಇರುವುದರಿಂದ ಪಂದ್ಯಾವಳಿ ವೇಳಾಪಟ್ಟಿಯಂತೆ ಮುಂದುವರಿಯಲಿದೆ ಎಂದಿದೆ. ಆದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಕ್ರಿಕೆಟಿಗರು ಐಪಿಎಲ್‌ನಿಂದ ಹಿಂದೆ ಸರಿಯುವಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ

ಕೂಟದಿಂದ ತೆರಳಿದ ಆರ್‌.ಅಶ್ವಿನ್

ತಮಿಳುನಾಡಿನ ಸ್ಪಿನ್ನರ್‌ ಆರ್‌.ಅಶ್ವಿ‌ನ್‌ ತಮ್ಮ ಕೊರೊನಾ ಭೀತಿಯನ್ನು ಮುಕ್ತವಾಗಿ ತೆರೆದಿರಿಸಿದ್ದಾರೆ. ತನ್ನ ಕುಟುಂಬವೀಗ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ಅವರನ್ನು ಬೆಂಬಲಿಸುವ ಸಲುವಾಗಿ ನಾನು ಐಪಿಎಲ್‌ ಬಿಟ್ಟು ತೆರಳಲೇಬೇಕಿದೆ. ಪರಿಸ್ಥಿತಿ ಸುಧಾರಿಸಿದರಷ್ಟೇ ಮರಳಿ ತಂಡವನ್ನು ಸೇರಿಕೊಳ್ಳುತ್ತೇನೆ ಎಂದಿದ್ದಾರೆ.

Advertisement

ಭೀತಿಯಲ್ಲಿ ಕಾಂಗರೂ ಕ್ರಿಕೆಟಿಗರು

ತಮ್ಮ ದೇಶ ಲಾಕ್‌ಡೌನ್‌ ಆದರೆ ತ್ರಿಶಂಕು ಸ್ಥಿತಿ ಎದುರಾಗುತ್ತದೆ ಎಂಬುದು ಆಸ್ಟ್ರೇಲಿಯದ ಬಹುತೇಕ ಕ್ರಿಕೆಟಿಗರ ಭೀತಿ. ಅಲ್ಲದೇ ಭಾರತದ ಪ್ರಯಾಣಿಕರಿಗೆ ಹೆಚ್ಚಿನ ದೇಶಗಳಲ್ಲಿ ನಿರ್ಬಂಧವಿದೆ. ಇದಕ್ಕೆ ಆಸ್ಟ್ರೇಲಿಯವೂ ಹೊರತಲ್ಲ. ಈಗಾಗಲೇ ಕೇನ್‌ ರಿಚಡ್ಸìನ್‌, ಆ್ಯಡಂ ಝಂಪ (ಆರ್‌ಸಿಬಿ), ಆ್ಯಂಡ್ರ್ಯೂ ಟೈ (ರಾಜಸ್ಥಾನ್‌) ಹಿಂದೆ ಸರಿದ ಆಸ್ಟ್ರೇಲಿಯದ ಪ್ರಮುಖರು. ಕೆಕೆಆರ್‌ ತಂಡದ ಮೆಂಟರ್‌ ಡೇವಿಡ್‌ ಹಸ್ಸಿ ಕೂಡ ತವರಿಗೆ ವಾಪಸಾಗಲು ನಿರ್ಧರಿಸಿದ್ದಾರೆ.

ಆಟಗಾರರ ಸಂಪರ್ಕದಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ

ಈ ಬೆಳವಣಿಗೆ ಬಳಿಕ ಕ್ರಿಕೆಟ್‌ ಆಸ್ಟ್ರೇಲಿಯ ಮತ್ತು ಆಸ್ಟ್ರೇಲಿಯ ಕ್ರಿಕೆಟಿಗರ ಸಂಸ್ಥೆ ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ನಾವು ಭಾರತದಲ್ಲಿರುವ ಆಸ್ಟ್ರೇಲಿಯ ಕ್ರಿಕೆಟಿಗರು, ತರಬೇತುದಾರರು ಮತ್ತು ವೀಕ್ಷಕ ವಿವರಣೆಕಾರರ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಸ್ಟ್ರೇಲಿಯ ಸರ್ಕಾರದ ಸಲಹೆಗಳನ್ನೂ ಪಡೆಯಲಾಗುತ್ತಿದೆ. ಆದರೆ ಕೊರೊನಾದಿಂದ ತೀವ್ರ ಸಂಕಷ್ಟದಲ್ಲಿರುವ ಭಾರತದ ಜನತೆಗೆ ಸದಾ ನಮ್ಮ ಬೆಂಬಲ ಇರುತ್ತದೆ ಎಂದಿದೆ.

ಆಸೀಸ್‌ ಕ್ರಿಕೆಟಿಗರಿಗೆ ಪ್ರತ್ಯೇಕ ವಿಮಾನ?

ಐಪಿಎಲ್‌ ಮುಗಿದೊಡನೆ ಆಸೀಸ್‌ ಆಟಗಾರರನ್ನು ಕರೆಸಿಕೊಳ್ಳಲು ಅಲ್ಲಿನ ಸರ್ಕಾರ ಪ್ರತ್ಯೇಕ ವಿಮಾನವೊಂದನ್ನು ವ್ಯವಸ್ಥೆಗೊಳಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಕಾಂಗರೂ ನಾಡಿನ ಇನ್ನೂ 14 ಕ್ರಿಕೆಟಿಗರು ಐಪಿಎಲ್‌ನಲ್ಲಿ ಉಳಿದುಕೊಂಡಿದ್ದಾರೆ. ಇವರಲ್ಲಿ ಪ್ರಮುಖರೆಂದರೆ ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌, ಪ್ಯಾಟ್‌ ಕಮಿನ್ಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೊದಲಾದವರು. ಜತೆಗೆ ತರಬೇತುದಾರರಾದ ರಿಕಿ ಪಾಂಟಿಂಗ್‌, ಸೈಮನ್‌ ಕ್ಯಾಟಿಚ್‌, ವೀಕ್ಷಕ ವಿವರಣೆಗಾರ್ತಿ ಲಿಸಾ ಸ್ಥಾಲೇಕರ್‌ ಕೂಡ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next